ಬೆಂಗಳೂರು(ಏ.01):  ನಗರದಲ್ಲಿ ಬುಧವಾರ 2928 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, 18 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 4,34,827ಕ್ಕೆ ಏರಿಕೆಯಾಗಿದೆ. 879 ಮಂದಿ ಗುಣಮುಖರಾಗಿದ್ದು ಇದುವರೆಗೂ ಒಟ್ಟು 4,10,594 ಮಂದಿ ಗುಣಮುಖರಾಗಿದ್ದಾರೆ. ಹೊಸ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳು ಮತ್ತಷ್ಟುಹೆಚ್ಚಳವಾಗಿದ್ದು, 19,613 ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಲ್ಲಿ 126 ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಈವರೆಗೆ ಸಾವಿಗೀಡಾದವರ ಸಂಖ್ಯೆ 4,619ಕ್ಕೆ ಏರಿಕೆಯಾಗಿದೆ.

ಏ.  1  ರಿಂದ ಕೊರೋನಾ ತಡೆಗೆ ಟಫ್ ರೂಲ್ಸ್.. ಏನೆಲ್ಲ ಹೊಸ ನಿಯಮ-ದಂಡ?

13 ವಿದ್ಯಾರ್ಥಿಗಳಿಗೆ ಕೊರೋನಾ:

ಬೊಮ್ಮನಹಳ್ಳಿ ವಲಯದ ಎಚ್‌ಎಸ್‌ಆರ್‌ ಬಡಾವಣೆಯಲ್ಲಿರುವ ಶ್ರೀ ಚೈತನ್ಯ ಟೆಕ್ನೋ ಶಾಲೆಯ 13 ವಿದ್ಯಾರ್ಥಿಗಳಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ. ಸೋಂಕಿತ ವಿದ್ಯಾರ್ಥಿಗಳ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿರನ್ನು ಪತ್ತೆ ಮಾಡಲಾಗಿದ್ದು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ. ಮಕ್ಕಳ ಪೋಷಕರು, ಶಾಲಾ ಶಿಕ್ಷಕ ಸಿಬ್ಬಂದಿಗೂ ಕೂಡ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ.

ವಿದ್ಯಾರ್ಥಿಗಳಲ್ಲಿ ಕೋವಿಡ್‌ ಪತ್ತೆಯಾದ ಮಾಹಿತಿ ತಿಳಿದ ಬೊಮ್ಮನಹಳ್ಳಿ ಜಂಟಿ ಆಯುಕ್ತ ರಾಮಕೃಷ್ಣಯ್ಯ ಅವರು ಸ್ಥಳಕ್ಕೆ ಆಗಮಿಸಿ, ಶಾಲೆಯ ಆಡಳಿತ ಮಂಡಳಿ ಸದಸ್ಯರೊಂದಿಗೆ ಮಾತುಕತೆ ನಡೆಸಿದರು. ಶಾಲೆಯ ಇತರರನ್ನು ಕೂಡ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದರು. ಸೋಂಕಿತರ ಸಂಪರ್ಕದಲ್ಲಿ ಇದ್ದವರಿಗೆ ಏಳು ದಿನಗಳ ನಂತರ ಮತ್ತೊಮ್ಮೆ ಆರ್‌ಟಿಪಿಸಿಆರ್‌ ಪರೀಕ್ಷೆಗೆ ಒಳಗಾಗುವಂತೆ ತಿಳಿಸಲಾಗಿದೆ. ಅಲ್ಲದೇ ಕಂಟೈನ್ಮೆಂಟ್‌ ಝೋನ್‌ ಸುತ್ತಮುತ್ತ ಸ್ಯಾನಿಟೈಸರ್‌ ಸಿಂಪಡಿಸಿ ಸ್ವಚ್ಛಗೊಳಿಸಲಾಗಿದೆ.