ಸಿರುಗುಪ್ಪ(ಜು.12): ತಾಲೂಕಿನ ಗಡಿಭಾಗದ ಆಂಧ್ರಪ್ರದೇಶ ಸಂಪರ್ಕದಿಂದಾಗಿ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದ್ದು, ಜಿಲ್ಲೆಯ ಜೋಳದ ರಾಶಿ ಗ್ರಾಮದಲ್ಲಿ ಚೆಕ್‌ ಪೋಸ್ಟ್‌ ನಿರ್ಮಿಸಿದ್ದು, ಸೇವಾ ಸಿಂಧು ನೋಂದಾಯಿಸಿಕೊಂಡವರಿಗೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ ಎಂದು ಜಿಲ್ಲಾ​ಧಿ​ಕಾರಿ ಎಸ್‌.​ಎಸ್‌. ನಕುಲ್‌ ಹೇಳಿ​ದ​ರು.

ನಗರದ ಸರಕಾರಿ ನೂರು ಹಾಸಿಗೆಗಳ ಆಸ್ಪತ್ರೆಯಲ್ಲಿನ ಕೋವಿಡ್‌-19 ಆರೈಕೆ ಕೇಂದ್ರಕ್ಕೆ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ ಭೇಟಿ ನೀಡಿ ಅಲ್ಲಿನ ಸೌಲಭ್ಯಗಳನ್ನು ಪರಿಶೀಲ​ನೆ ನಡೆಸಿ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿ​ದ​ರು. ಜಿಲ್ಲೆಯಲ್ಲಿನ ಕೊರೋನಾ ಸೋಂಕಿತರಿಗಾಗಿ ತಾಲೂಕಿನ ಕೆಂಚನಗುಡ್ಡ ಗ್ರಾಮದ ವಸತಿ ನಿಲಯದಲ್ಲಿ ನೂರು ಹಾಸಿಗೆಗಳು ಸೇರಿದಂತೆ ವಿವಿಧ ತಾಲೂಕುಗಳಲ್ಲಿನ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ 400ಕ್ಕೂ ಹೆಚ್ಚು ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದ್ದು, ಈ ಕೇಂದ್ರಗಳಲ್ಲಿ ಗುಣಲಕ್ಷಣ ಗೋಚರಿಸದೆ ಇರುವ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಮಧುಮೇಹ, ರಕ್ತದ ಒತ್ತಡ, ಮೂತ್ರಪಿಂಡದ ಕಾಯಿಲೆ ಇರುವ ರೋಗಿಗಳಿಗೆ ತಾಲೂಕು ಆಸ್ಪತ್ರೆಗಳಲ್ಲಿನ 20 ಹಾಸಿಗೆಗಳ ಕೊರೋನಾ ಕೇರ್‌ ಸೆಂಟರ್‌ನಲ್ಲಿ ಚಿಕಿತ್ಸೆ ನೀಡಲಾಗುವುದು, ತೀವ್ರ ಉಸಿರಾಟದ ತೊಂದರೆ ಹಾಗೂ ಗರ್ಭಿಣಿಯರಿಗೆ, 10 ವರ್ಷದೊಳಗಿನ ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆ ನೀಡಲಾಗುವುದು, ತಾಲೂಕಿನಲ್ಲಿ ಕಡ್ಡಾಯವಾಗಿ ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ಕಾಪಡಿಕೊಳ್ಳುವಂತೆ ಜನರಲ್ಲಿ ತಾಲೂಕು ಆಡಳಿತ ವತಿಯಿಂದ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದರು. ನಂತರ ತಾಲೂಕು ಆರೋಗ್ಯ ಅಧಿಕಾರಿ ಡಾ. ಸುರೇಶಗೌಡರವರಿಗೆ ಕೋವಿಡ್‌-19 ಆರೈಕೆ ಕೇಂದ್ರದಲ್ಲಿನ ಕೊರೋನಾ ಸೋಂಕಿತರಿಗೆ ಅಗತ್ಯವಾದ ಮೂಲಭೂತ ಸೌಲಭ್ಯಗಳನ್ನು ನೀಡುವಂತೆ ತಿಳಿಸಿದರು.

ಕೊಟ್ಟೂರು: ಕೇವಲ 10 ದಿನದಲ್ಲೇ ಕೊರೋನಾ ಗೆದ್ದು ಬಂದ 36 ಸೋಂಕಿತರು..!

ಮಹಿಳಾ ಮತ್ತು ಪುರುಷರ ವಾರ್ಡ್‌ಗಳಲ್ಲಿನ ವ್ಯವಸ್ಥೆ ಪರಿಶೀಲಿಸಿ ಕೊರೋನಾ ಸೋಂಕಿತರಿಗೆ ಬಿಸಿನೀರಿನ ವ್ಯವಸ್ಥೆಗಾಗಿ ಗೀಜರ್‌ ಆಳವಡಿಸುವಂತೆ ಹಾಗೂ ವಾರ್ಡ್‌ಗಳನ್ನು ಸ್ಯಾನಿಟೈಸ್‌ ಮಾಡಿ, ಪ್ರತಿ ವಾ​ರ್ಡ್‌ಗಳಲ್ಲಿ 2 ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ರೋಗಿಗಳ ಚಲನವಲನಗಳನ್ನು ವೀಕ್ಷಿಸಿ ಅಗತ್ಯ ಚಿಕಿತ್ಸೆ ನೀಡಿ ಇತರೆ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಮನೆಯವರಿಂದ ಔಷಧಿ ಪಡೆಯಲು ಬಾಗಿಲು ಬಳಿ ಸಣ್ಣ ಕಿಟಕಿಯ ವ್ಯವಸ್ಥೆ ಇರುವಂತೆ ಬಾಗಿಲು ರೂಪಿಸಿ ಗುತ್ತಿಗೆದಾರರಿಂದ ಶೌಚಾಲಯದ ದುರಸ್ತಿ ಮಾಡಿಸುವಂತೆ ತಿಳಿಸಿದರು.

ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಅಧ್ಯಕ್ಷ ಡಾ. ಮಧುಸೂಧನ ಕಾರಿಗನೂರು ಅವರಿಗೆ ತಾಲೂಕಿನ ಕೆಂಚನಗುಡ್ಡ ಗ್ರಾಮದ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ದಾಖಲಾಗುವ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಸಿದ್ಧವಿರುವಂತೆ ತಿಳಿಸಿದರು.

ತಹಸೀಲ್ದಾರ್‌ ಎಸ್‌.ಬಿ. ಕೂಡಲಿಗಿ, ತಾಲೂಕು ಆರೋಗ್ಯ ಅಧಿಕಾರಿ ಡಾ. ಸುರೇಶಗೌಡ, ಭಾರತೀಯ ವೈದ್ಯಕಿಯ ಸಂಘದ ರಾಜ್ಯ ಅಧ್ಯಕ್ಷ ಡಾ. ಮಧುಸೂಧನ ಕಾರಿಗನೂರು, ಆಡಳಿತ ವೈದ್ಯಾಧಿಕಾರಿ ಡಾ. ಈರಣ್ಣ, ಸಿಪಿಐ ಟಿ.ಆರ್‌. ಪವಾರ್‌, ಆಸ್ಪತ್ರೆಯ ಡಾ. ಮೋಹನ್‌ಕುಮಾರಿ, ಡಾ. ಪ್ರಶಾಂತ್‌ಕುಮಾರ, ಡಾ. ಕೊಟ್ರೇಶ ಇದ್ದರು.

ಬಳ್ಳಾರಿಯಲ್ಲಿ 65 ಪಾಸಿಟಿವ್‌, ಬಾಲಕಿ ಸಾವು

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದೆ. ಶುಕ್ರವಾರ 65 ಹೊಸ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ವಿವಿಧ ಕಾಯಿಲೆಯಿಂದ ಬಳಲುತ್ತಿದ್ದ ಹಡಗಲಿಯ 12 ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.
ಈ ಬಾಲಕಿಗೆ ಸೋಂಕು ಇರುವುದು ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸಾವಿಗೀಡಾದ ಸೋಂಕಿತರ ಸಂಖ್ಯೆ 42ಕ್ಕೇರಿದೆ. ಪಾಸಿಟಿವ್‌ ಪ್ರಕರಣಗಳ ಸಂಖ್ಯೆ 1619ಕ್ಕೇರಿದೆ. ಶುಕ್ರವಾರ ಮೃತಪಟ್ಟ ಹಡಗಲಿ ಸೋಂಕಿತ ಬಾಲಕಿ ನ್ಯುಮೋನಿಯಾ, ಕರಳುಬೇನೆ ಸೇರಿದಂತೆ ವಿವಿಧ ಕಾಯಿಲೆಯಿಂದ ಬಳಲುತ್ತಿದ್ದಳು. ಕಳೆದ ಮೂರು ದಿನಗಳ ಹಿಂದೆಯಷ್ಟೇ ಇಲ್ಲಿನ ವಿಮ್ಸ್‌ಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾಳೆ. ಬಾಲಕಿಯ ಗಂಟಲುದ್ರವ ವೈದ್ಯಕೀಯ ಪರೀಕ್ಷೆಯಲ್ಲಿ ಸೋಂಕು ಇರುವುದು ಗೊತ್ತಾಗಿದೆ. ಖಚಿತವಾಗಿರುವ 1619 ಸೋಂಕಿತರಲ್ಲಿ 1063 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 46 ಮಂದಿ ಹೋಂ ಐಸೋಲೇಷನ್‌ನಲ್ಲಿದ್ದಾರೆ. 577 ಜನ ಸೋಂಕಿತರು ಚಿಕಿತ್ಸೆಯಲ್ಲಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.