ಜಿ. ಸೋಮಶೇಖರ

ಕೊಟ್ಟೂರು(ಜು.11): ಎರ​ಡ್ಮೂರು ತಿಂಗ​ಳಿಂದ ತಾಲೂಕಿನ ಜನರು ಕೋವಿ​ಡ್‌-19 ಮಹಾ​ಮಾ​ರಿ​ಗೆ ತತ್ತರಿಸುತ್ತಿದ್ದಾರೆ. ಈ ನಡುವೆ ಹತ್ತೇ ದಿನದಲ್ಲಿ ಕೊರೋನಾ ಸೋಂಕಿತರು ಗುಣಮುಖರಾಗಿ ಬಂದಿರುವುದು ಸ್ವಲ್ಪಮಟ್ಟಿನ ನಿರಾಳತೆಯನ್ನು ತಂದಿದೆ. ತಾಲೂಕಿನಲ್ಲಿ ಇದುವರೆಗೂ ಒಟ್ಟು 47 ಜನರಿಗೆ ಸೋಂಕು ತಗು​ಲಿ​ದೆ. ​ಇ​ದೀ​ಗ 36 ಸೋಂಕಿತರು ಸಂಪೂರ್ಣ ಗುಣಮುಖರಾಗಿ ಜಿಲ್ಲಾ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ತಾಲೂಕಿನಲ್ಲಿ ಇದೀಗ ಕೇವಲ 10 ಸೋಂಕಿತರಿದ್ದು, ಅವರು ಸಹ ವಾರದಲ್ಲೇ ಬಿಡುಗಡೆ ಹೊಂದಲಿದ್ದಾರೆ ಎಂಬ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸುತ್ತಿದ್ದಾರೆ. ಸೋಂಕು ಬರುವುದು ಶಾಪ ಮತ್ತು ಪಾಪದ ಫಲವೆಂಬಂತೆ ಕೆಲವರು ಕುಹಕ ಮಾಡುತ್ತ, ರೋಗದ ಭೀತಿಯನ್ನು ಎಲ್ಲರಲ್ಲೂ ಇಮ್ಮಡಿಗೊಳಿಸುವ ಕಾರ್ಯವನ್ನು ನಡೆಸುವ ಮೂಲಕ ವಿಕೃತನವನ್ನು ತೋರಿದ್ದರು. ರೋಗದ ತೀವ್ರತೆಗಿಂತ ಅದರ ಬಗ್ಗೆ ಭೀತಿಗೊಳಗಾಗುವವರೇ ಹೆಚ್ಚಾಗಿದ್ದರು.

ಇಂತಹ ವಾತಾವರಣದಲ್ಲಿ 36 ಸೋಂಕಿತರು ಬಹುಬೇಗ ಗುಣಮುಖರಾಗಿ ಕೊರೋನಾ ಯಶಸ್ವಿಯಾಗಿ ಎದುರಿಸಿ ಹೊರ ಬರುತ್ತಿರುವುದಕ್ಕೆ ಅವರಲ್ಲಿನ ಆತ್ಮಸ್ಥೈರ್ಯ, ದೃಢತೆ, ವಿಶ್ವಾಸ ಹೆಚ್ಚಿ​ದೆ. ಇನ್ನಾದರೂ ​ಕೊರೋನಾ ರೋಗದ ಬಗ್ಗೆ ಅನಗತ್ಯ ಭೀತಿಗೊಳಗಾಗುವ ಅವಶ್ಯಕತೆ ಇಲ್ಲ. ಇದರ ಬದಲಾಗಿ ಸಾಮಾಜಿಕ ಅಂತರ, ಮಾಸ್ಕ್‌ ಧರಿಸುವುದು ಸೇರಿದಂತೆ ಇತರ ವಿಧಗಳಿಂದ ಸದಾ ಎಚ್ಚರದಿಂದ ಜೀವನ ಸಾಗಿಸಿದರೆ ಈ ರೋಗ ಹರಡದೆ ತಂತಾನೆ ಬಂದ ದಾರಿಗೆ ಸುಂಕವಿಲ್ಲದಂತೆ ಹೊರಟು ಹೋಗಬಲ್ಲದು ಎನ್ನುತ್ತಾರೆ ಸೋಂಕಿನಿಂದ ಹೊರಬಂದವರು.

ಕೋವಿಡ್‌ ಆಸ್ಪತ್ರೆಗೆ ಭೇಟಿ: ಕೊರೋನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಸಚಿವ ಆನಂದ ಸಿಂಗ್‌

ಕೊಟ್ಟೂರು ತಾಲೂಕಿನಲ್ಲಿ ಕೊರೋನಾ ರೋಗ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಜನತೆಗೆ ಹರಡುತ್ತಿರುವುದು ನಿಜಕ್ಕೂ ಸವಾಲಾಗಿತ್ತು. ಇಂತಹ ಸ್ಥಿತಿಯಲ್ಲಿಯೇ ಇದೀಗ ಬಹುತೇಕ ಸೋಂಕಿತರು ಬಿಡುಗಡೆಗೊಳ್ಳುತ್ತಿರುವುದು ಭೀತಿಗೊಳ್ಳುತ್ತಿರುವ ಜನತೆಯಲ್ಲಿ ವಿಶ್ವಾಸ ಮೂಡಿಸಿದಂತಾಗಿದೆ. ಯಾವುದೇ ಶಾಪ ಅಥವಾ ತಪ್ಪಿನಿಂದ ಈ ರೋಗ ಬರಲಾರದು. ಸ್ವಲ್ಪ ಅಲಕ್ಷ್ಯ ಮಾಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ಸ್ವಚ್ಛತೆ ಮೈಗೂಡಿಸಿಕೊಳ್ಳದಿದ್ದರೆ ಅಪಾಯ ತರುತ್ತದೆ ಎಂದು ಕೊಟ್ಟೂರಿನ ಸಮುದಾಯ ಆರೋಗ್ಯ ಕೇಂದ್ರದ ಡಾ. ಪೃಥ್ವಿ ಅವರು ತಿಳಿಸಿದ್ದಾರೆ. 

ರೋಗ ಬಂದ ಹೊಸತರಲ್ಲಿ ನಿಜಕ್ಕೂ ಭಯಭೀತನಾಗಿದ್ದೆ. ಆದರೆ ಜಿಲ್ಲಾಸ್ಪತ್ರೆಯ ವೈದ್ಯರ ಸಲಹೆ ಮತ್ತು ಶುಶ್ರೂಷೆ ನಮ್ಮಲ್ಲಿ ದೃಢತೆ ತಂದಿತು. ನಂತರ ಖಂಡಿತ ಬೇಗ ರೋಗದಿಂದ ಗುಣಮುಖರಾಗುತ್ತೇವೆ ಎಂಬ ಆತ್ಮವಿಶ್ವಾಸ ಹೆಚ್ಚಾಯಿತು. ಇದರ ಫಲವೇ ಬೇಗ ಆಸ್ಪತ್ರೆಯಿಂದ ಹೊರಗೆ ಬರುವಂತೆ ಆಯಿತು ಎಂದು ಸೋಂಕಿ​ನಿಂದ ಗುಣಮುಖನಾಗಿರುವ ವ್ಯಕ್ತಿ ಹೇಳಿಕೊಂಡಿದ್ದಾರೆ.