ಬೆಂಗಳೂರು [ಮಾ.14]:  ಕೊರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಸರ್ಕಾರಿ ರಜೆ ಘೋಷಣೆಯಾದ ಬೆನ್ನಲ್ಲೇ ನಗರದಿಂದ ಹೆಚ್ಚಿನ ಜನರು ತಮ್ಮ ತಮ್ಮ ಊರುಗಳಿಗೆ ಹೊರಟಿದ್ದರಿಂದ ಶುಕ್ರವಾರ ರಾತ್ರಿ ನಗರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.

ಸಾರ್ವಜನಿಕ ಸಾರಿಗೆ ವ್ಯವಸ್ಥೆಗಿಂತ ಸ್ವಂತ ವಾಹನಗಳಲ್ಲೇ ಜನರು ತೆರಳಿದ್ದೂ ಇದಕ್ಕೆ ಮುಖ್ಯ ಕಾರಣವಾಗಿ ಪರಿಣಮಿಸಿತು. ಟೋಲ್‌ಗಳಲ್ಲಿ ವಾಹನಗಳು ಸಾಲು ಸಾಲು ನಿಲ್ಲುವಂತಾಯಿತು.

ಕೊರೋನಾ ಸೋಂಕು ಹಿನ್ನೆಲೆ ಶುಕ್ರವಾರ ಮಧ್ಯಾಹ್ನ ಸರ್ಕಾರ ಶಾಲಾ ಕಾಲೇಜುಗಳ ರಜೆ ಘೋಷಿಸಿತು. ಜೊತೆಗೆ ವಾರಾಂತ್ಯದ ಹಿನ್ನೆಲೆಯಲ್ಲಿ ಎರಡನೆಯ ಶನಿವಾರ ಮತ್ತು ಭಾನುವಾರದ ರಜೆ ಇದ್ದುದರಿಂದ ಜನರು ಊರಿಗೆ ತೆರಳಲು ನಿರ್ಧರಿಸಿದರು. ಆದರೆ, ಕೊರೋನಾ ಭೀತಿಯಿಂದಾಗಿ ಬಸ್ಸು, ರೈಲುಗಳನ್ನು ಬಳಸಲು ಹಿಂದೇಟು ಹಾಕಿದ ಅನೇಕರು ಸ್ವಂತ ವಾಹನಗಳು ಅಥವಾ ಬಾಡಿಗೆ ಕಾರುಗಳನ್ನು ಆಶ್ರಯಿಸಿದರು.

ಕೊರೋನಾ ವೈರಸ್‌ ತಗು​ಲಿ​ದ್ದ ನಗರದ ಟೆಕ್ಕಿ ಗುಣ​ಮು​ಖ...

ಬೆಂಗಳೂರಿನಿಂದ ದೂರ ಇದ್ದಷ್ಟುಕೊರೋನಾ ವೈರಸ್‌ ಭೀತಿಯಿಂದ ಬಚಾವ್‌ ಆಗಬಹುದು ಎಂಬ ನಿರೀಕ್ಷೆಯೂ ಜನರನ್ನು ದೂರದೂರುಗಳಿಗೆ ತೆರಳಲು ಕಾರಣವಾಯಿತು.

ಇದರಿಂದ ತುಮಕೂರು, ಮೈಸೂರು, ಬಳ್ಳಾರಿ, ಹೊಸೂರು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ರಸ್ತೆಗಳಲ್ಲಿ ಟ್ರಾಫಿಕ್‌ ಜಾಮ್‌ ಉಂಟಾಯಿತು. ಪರಿಣಾಮ ಟೋಲ್‌ಗೇಟ್‌ಗಳಲ್ಲಿ ಕಿ.ಮೀ.ಗಟ್ಟಲೇ ವಾಹನಗಳು ಸಾಲು ನಿಂತಿದ್ದವು. ಈ ಸಂಚಾರ ದಟ್ಟಣೆಯಲ್ಲಿ ಸಿಲುಕಿ ಜನರು ಪರದಾಡಿದರು.

ಸಾಮಾನ್ಯವಾಗಿ ವಾರಾಂತ್ಯದಲ್ಲಿ ಟೋಲ್‌ಗಳು ಹಾಗೂ ರಾಜಧಾನಿಗೆ ಸೇರುವ ಹೆದ್ದಾರಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಸಂಚಾರವಿರುತ್ತದೆ. ಆದರೆ ಶಾಲಾ-ಕಾಲೇಜುಗಳಿಗೆ ಸರ್ಕಾರ ರಜೆ ನೀಡಿದ ಕಾರಣಕ್ಕೆ ಶುಕ್ರವಾರ ಎಂದಿಗಿಂತ ಅಧಿಕ ಸಂಖ್ಯೆಯಲ್ಲಿ ವಾಹನಗಳ ಓಡಾಟವಿತ್ತು ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದರು.