ಬೆಂಗಳೂರು [ಮಾ.05]:  ಕೊರೋನಾ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲ ಐಟಿ-ಬಿಟಿ ಕಂಪನಿಗಳು ಅನಾರೋಗ್ಯದಿಂದ ಬಳಲುತ್ತಿರುವ ತಮ್ಮ ಉದ್ಯೋಗಿಗಳಿಗೆ ವೇತನ ಸಹಿತ ರಜೆ ಸೌಲಭ್ಯ ಕಲ್ಪಿಸಿದೆ. ಜತೆಗೆ, ಮನೆಯಿಂದಲೇ ಕೆಲಸ ಮಾಡುವ (ವರ್ಕ್ ಫ್ರಂ ಹೋಂ) ಅವಕಾಶವನ್ನು ಬಳಸಿಕೊಳ್ಳಲು ತಮ್ಮ ಉದ್ಯೋಗಿಗಳಿಗೆ ನೀಡಲು ಮುಂದಾಗಿವೆ.

ತೆಲಂಗಾಣ ಮೂಲದ ಟೆಕಿಯೊಬ್ಬರಿಗೆ ಕೊರೋನಾ ಸೋಂಕು ಹಿನ್ನೆಲೆಯಲ್ಲಿ ವ್ಯಾಪಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಐಟಿ ಸಂಸ್ಥೆಗಳು ಮುಂದಾಗಿದ್ದು, ಕೆಮ್ಮು, ಶೀತ, ತಲೆನೋವಿನಂಹ ಸಣ್ಣಪುಟ್ಟಸಮಸ್ಯೆಗಳಿಗೆ ತುತ್ತಾಗಿರುವ ಉದ್ಯೋಗಿಗಳನ್ನೂ ಮನೆಗಳಿಗೆ ಕಳುಹಿಸಲಾಗುತ್ತಿದೆ. ಸಾಧ್ಯವಾದರೆ ಮನೆಗಳಿಂದಲೇ ಕೆಲಸ ಮಾಡಿ, ಇಲ್ಲವೇ 14 ದಿನಗಳ ವೇತನ ಸಹಿತ ರಜೆ ಪಡೆಯುವಂತೆ ಕೆಲ ಕಂಪನಿಗಳು ಉದ್ಯೋಗಿಗಳಿಗೆ ಸೂಚಿಸಿವೆ.

ಇನ್ನು ಮೂರು ತಿಂಗಳಲ್ಲಿ ಕೊರೋನಾಗೆ ಔಷಧ ಲಭ್ಯ.

ಮಾರಣಾಂತಿಕ ಕೊರೋನಾ ವೈರಸ್‌ಗೆ ಬೆಚ್ಚಿಬಿದ್ದಿರುವ ನಗರದ ಐಟಿ-ಬಿಟಿ ಉದ್ಯೋಗಿಗಳು, ಮುಖಕ್ಕೆ ಮಾಸ್ಕ್‌, ಹ್ಯಾಂಡ್‌ ಗ್ಲೌಸ್‌ ಧರಿಸಿ ಕೆಲಸಕ್ಕೆ ಬರುತ್ತಿದ್ದಾರೆ. ಹೆಬ್ಬಾಳ, ಎಲೆಕ್ಟ್ರಾನಿಕ್‌ ಸಿಟಿ, ಮಾರತ್‌ಹಳ್ಳಿ, ವೈಟ್‌ಫೀಲ್ಡ್‌ ಸೇರಿದಂತೆ ಐಟಿ-ಬಿಟಿ ಕಂಪನಿಗಳು ಹೆಚ್ಚಿರುವ ಸ್ಥಳಗಳಲ್ಲಿ ಈ ಮಾಸ್ಕ್‌ ಧರಿಸಿ ಓಡಾಡುವರರ ಸಂಖ್ಯೆ ಹೆಚ್ಚಾಗಿದೆ. ಕೆಲ ಕಡೆ ಕಂಪನಿಗಳೇ ಉದ್ಯೋಗಿಗಳಿಗೆ ಮಾಸ್ಕ್‌ ವಿತರಣೆಗೆ ಮುಂದಾಗಿವೆ. ಮೆಟ್ರೋ ರೈಲು, ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುತ್ತಿರುವ ಟೆಕಿಗಳು ಕಳೆದ ಮೂರ್ನಾಲ್ಕು ದಿನಗಳಿಂದ ಮುಖಕ್ಕೆ ಮಾಸ್ಕ್‌ ಧರಿಸುತ್ತಿರುವುದು ಕಂಡು ಬರುತ್ತಿದೆ.

ಐಟಿ-ಬಿಟಿ ಕಂಪನಿಗಳಿಗೆ ಆರೋಗ್ಯ ಇಲಾಖೆ ಸಲಹೆ:  ಇನ್ನು ಆರೋಗ್ಯ ಇಲಾಖೆಯು ಐಟಿ ಉದ್ಯೋಗಿ ಹಾಗೂ ಸಂಸ್ಥೆಗಳಿಗೆ ಕೆಲವೊಂದು ನಿರ್ದೇಶನ ನೀಡಿದೆ.

*ಕೊರೋನಾ ಸೋಂಕಿತ ದೇಶಗಳಾದ ಚೀನಾ, ಇರಾನ್‌, ರಿಪಬ್ಲಿಕ್‌ ಆಫ್‌ ಕೊರಿಯಾ, ಇಟಲಿ, ಜಪಾನ್‌, ಇರಾನ್‌ ಪ್ರಯಾಣ ಪ್ರತಿಬಂಧಿಸಿ.

*ಚೀನಾ, ದಕ್ಷಿಣ ಕೋರಿಯಾ, ಜಪಾನ್‌, ಇರಾನ್‌, ಇಟಲಿ, ಹಾಂಕಾಂಗ್‌, ಮಸ್ಕತ್‌, ವಿಯೆಟ್ನಾಂ, ಮಲೇಷ್ಯಾ, ಇಂಡೋನೇಷ್ಯಾ, ನೇಪಾಳ, ಥಾಯ್ಲೆಂಡ್‌, ಸಿಂಗಾಪುರ, ತೈವಾನ್‌, ಯುಎಇ, ಕತಾರ್‌ಗಳಿಂದ ಬರುವ ಉದ್ಯೋಗಿಗಳಿಗೆ ಕಡ್ಡಾಯ ವೈದ್ಯ ತಪಾಸಣೆಗೆ ಒಳಗಾಗುವಂತೆ ನಿರ್ದೇಶಿಸಿ.

*ದೇಶದ ಯಾವುದೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು ಮೂಲಕ ದೇಶ ಪ್ರವೇಶಿಸುವ ಉದ್ಯೋಗಿಗಳು ವೈದ್ಯಾಧಿಕಾರಿ ಮತ್ತು ವಲಸೆ ಅಧಿಕಾರಿಗಳ ಬಳಿ ಸೆಲ್‌್ಫ ಡಿಕ್ಲರೇಶನ್‌ ಫಾಮ್‌ರ್‍ ನೀಡಬೇಕು.

*ಕೆಲಸ ಮಾಡುವ ಪ್ರದೇಶಗಳಲ್ಲಿ ಆಗಾಗ ಕೈ ತೊಳೆದುಕೊಳ್ಳಬೇಕು

*ಐಟಿ ಉದ್ಯೋಗಿಗಳಿಗೆ ಕೈ ತೊಳೆದುಕೊಳ್ಳಲು ನೀರು, ಸ್ಯಾನಿಟೈಜರ್‌, ಸೋಪ್‌ ವ್ಯವಸ್ಥೆ ಮಾಡಬೇಕು

*ಕೆಲಸ ಮಾಡುವ ಕ್ಯಾಬಿನ್‌, ಡೆಸ್ಕ್‌, ಕಂಪ್ಯೂಟರ್‌ ಕೀ ಬೋರ್ಡ್‌, ಟೆಲಿಫೋನ್‌ಗಳನ್ನು ರಾಸಾಯನಿಕಗಳಿಂದ ಸ್ವಚ್ಛಗೊಳಿಸಬೇಕು

*ಕಚೇರಿಯ ವಾತಾವರಣ ಸ್ವಚ್ಛವಾಗಿರಿಸಿಕೊಳ್ಳಬೇಕು. ಟಿಶ್ಯೂ, ಮಾಸ್ಕ್‌ಗಳನ್ನು ಬಳಸಬೇಕು. ಬಳಿಕ ಮುಚ್ಚಿದ ಕಸದ ಬುಟ್ಟಿಗೆ ಹಾಕಬೇಕು

*ಬೆಂಗಳೂರಿನಿಂದ ಕೊರೋನಾ ಪೀಡಿತ ದೇಶಗಳಿಗೆ ಪ್ರಯಾಣ ಬೆಳೆಸುವವರು ಆರೋಗ್ಯ ಇಲಾಖೆಯ ಅನುಮತಿ ಪಡೆಯಬೇಕು

*ಯಾರಾದರೂ ಕೊರೋನಾ ಲಕ್ಷಣಗಳು ಅಥವಾ ಕೊರೋನಾ ಪೀಡಿತ ದೇಶಗಳಿಂದ ಪ್ರಯಾಣ ಮಾಡಿದ್ದ ಮಾಹಿತಿಯಿದ್ದರೆ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು.