ಸತ್ಯರಾಜ್‌ ಜೆ.

ಕೋಲಾರ [ಮಾ.11]:  ಏಷಿಯಾದ 2ನೇ ಅತೀ ದೊಡ್ಡ ಮಾರುಕಟ್ಟೆಎನಿಸಿಕೊಂಡಿ ಕೋಲಾರದ ಎಪಿಎಂಸಿ ಮಾರುಕಟ್ಟೆಗೂ ಕೊರೊನಾ ವೈರಸ್‌ ಬಿಸಿ ತಟ್ಟಿದ್ದು ಮಾರುಕಟ್ಟೆಯ ವಹಿವಾಟು ಇಲ್ಲದೆ ಏರುಪೇರಾಗಿದ್ದು ರೈತರು ಮತ್ತು ವ್ಯಾಪಾರಸ್ಥರಲ್ಲಿ ಆತಂಕ ಹೆಚ್ಚಿದೆ.

ಕೋಲಾರ ಹೊರವಲಯದಲ್ಲಿರುವ ಎಪಿಎಂಸಿ ಮಂಗಳವಾರ ಜನರಿಲ್ಲದೆ ಬಿಕೋ ಎನ್ನುತ್ತಿತ್ತು. ವ್ಯಾಪಾರಸ್ಥರು, ವಾಹನಗಳಿಲ್ಲದೆ ಖಾಲಿ ಖಾಲಿಯಾಗಿ ಕಾಣಿಸಿಕೊಂಡಿತ್ತು. ದಿನಕ್ಕೆ 3 ಸಾವಿರಕ್ಕೂ ಅಧಿಕ ಜನರು ಹೊರ ರಾಜ್ಯದಿಂದ ಆಗಮಿಸುತ್ತಿದ್ದರು. ಪ್ರತಿದಿನ 300 ರಿಂದ 500 ವಾಹನಗಳು ಮಾರುಟ್ಟೆಗೆ ತರಕಾರಿ ಸಾಗಾಣೆಗಾಗಿ ಬರುತ್ತಿದ್ದವು. ಆದರೆ ಕಳೆದ ಮೂರ್ನಾಲ್ಕು ದಿವಸಗಳಿಂದ ಕೊರೋನ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ವ್ಯಾಪಾರ ಕುಸಿದು ಬಿದ್ದಿದೆ.

ದೇಶ ವಿದೇಶಕ್ಕೆ ತರಕಾರಿ ಪೂರೈಕೆ

ಕೋಲಾರದ ಎಪಿಎಂಸಿಯಲ್ಲಿ ಟೊಮೆಟೋ ಸೇರಿದಂತೆ ಗುಣಮಟ್ಟದ ತರಕಾರಿಗಳನ್ನು ಇಡೀ ದೇಶದ ಮೂಲೆ ಮೂಲೆಗಳಿಗೆ ಸಾಗಣೆ ಮಾಡಲಾಗುತ್ತದೆ. ಕೋಲಾರದಿಂದ ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಒರಿಸ್ಸಾ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗು ಪಂಜಾಬ್‌ ರಾಜ್ಯಗಳಿಗೆ ಮಾರಾಟವಾಗುತ್ತದೆ. ಕೋಲಾರದಿಂದ ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಹಾಗು ದುಬೈಗೆ ತರಕಾರಿ ರಫ್ತು ಮಾಡಲಾಗುತ್ತದೆ.

ಕೊರೊನಾ ಭೀತಿಯಿಂದ ತರಕಾರಿಗಳನ್ನು ಹೊರ ರಾಜ್ಯ ಮತ್ತು ಹೊರ ದೇಶಗಳಿಂದ ಸಾಗಣೆ ಮಾಡುವ ಮಾರಾಟಗಾರರ ಸಂಖ್ಯೆಯೂ ತೀವ್ರ ಇಳಿಮುಖಗೊಂಡಿದೆ. ಒಂದು ದಿನದಲ್ಲಿ ಆಗುವ ವ್ಯಾಪಾರ ಎರಡು ದಿನಗಳಾದರೂ ಆಗುತ್ತಿಲ್ಲ. ಮುಂದೆ ವ್ಯಾಪಾರದಲ್ಲಿ ಇನ್ನಷ್ಟುಕುಸಿತ ಕಾಣುವ ಭೀತಿಯೂ ಅವರಿಸಿದೆ.

ಟೊಮೆಟೊ ಖರೀದಿ ಸ್ಥಗಿತ

ಇಲ್ಲಿನ ಎಪಿಎಂಸಿಯಲ್ಲಿ ಈಗ ಟೊಮೆಟೋ ಸೀಸನ್‌. ಮೇನಿಂದ ಮುಂದಿನ ಆಗಸ್ಟ್‌ವರೆಗೂ ಟೊಮೆಟೋವನ್ನು ಜಿಲ್ಲೆಯ ರೈತರು ಯತೇಚ್ಛವಾಗಿ ಬೆಳೆಯುತ್ತಾರೆ, ಸುಮಾರು 18 ರಿಂದ 20 ಟನ್‌ಗಳಷ್ಟುಟೊಮೆಟೋವನ್ನು ಪ್ರತಿದಿನ ಸಾಗಣೆ ಮಾಡಲಾಗುತ್ತದೆ. ಈ ಬೇಡಿಕೆಯನ್ನು ನೋಡಿಕೊಂಡು ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಟೊಮೆಟೋ ಬೆಳೆಯಲಾಗುತ್ತದೆ. ಆದರೆ ಕೊರೋನಾ ವೈರಸ್‌ನ ಆತಂಕದಿಂದ ವ್ಯಾಪಾರಸ್ಥರು ಮಾರುಕಟ್ಟೆಗೆ ಬಾರದೆ ಇರುವುದನ್ನು ಕಂಡು ನಾವು ಬೆಳೆದ ಟೊಮೆಟೋವನ್ನು ಖರೀದಿಸುವವರು ಯಾರು ಮುಂದೆ ನಮ್ಮ ಗತಿ ಏನು ಎಂದು ರೈತರು ಆತಂಕಕ್ಕೆ ಒಳಗಾಗಿದ್ದಾರೆ.

ಕರ್ನಾಟಕದಲ್ಲಿ ನಾಲ್ವರಿಗೆ ಕೊರೋನಾ: ದಿಟ್ಟ ಕ್ರಮಕೈಗೊಂಡ ರಾಜ್ಯ ಸರ್ಕಾರ...

ಅಧಿಕಾರಿಗಳ ಸುಳಿವಿಲ್ಲ 

ಮಾರುಕಟ್ಟೆಯಲ್ಲಿ ಇಷ್ಟೆಲ್ಲಾ ಆತಂಕದ ವಾತಾವರಣದ ಇದ್ದರೂ ಮಾರುಕಟ್ಟೆಗೆ ಇದುವರೆಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಅಲ್ಲಿನ ವ್ಯಾಪಾರಸ್ಥರು ಮತ್ತು ರೈತರ ಆರೋಪವಾಗಿದೆ. ಇದುವರೆಗೂ ಇಲಾಖೆ ಯಾವ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ರೋಗ ಮತ್ತು ಅದರ ಲಕ್ಷಣಗಳು ಹಾಗು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆಯೂ ಯಾವ ತಿಳವಳಿಕೆಗಳನ್ನು ನೀಡಿಲ್ಲ ಎಂಬುದು ಅಲ್ಲಿನ ವ್ಯಾಪಾರಸ್ಥರ ದೂರು.

ಕೋಲಾರ ಎಪಿಎಂಸಿಯಲ್ಲಿ ಮಾರುಕಟ್ಟೆಯಲ್ಲಿ ಕೊರೋನಾ ವ್ಯರಸ್‌ ಹರಡುವ ಆತಂಕದಿಂದಾಗಿ ಟೊಮೆಟೋ ಮತ್ತು ತರಕಾರಿ ವಹಿವಾಟು ತಗ್ಗಿದೆ, ಇಲ್ಲಿನ ವಿವಿಧ ರಾಜ್ಯಗಳಿಂದ ಪ್ರತಿದಿನ 3 ಸಾವಿರ ಮಂದಿ ವ್ಯಾಪಾರ ನಡೆಸುತ್ತಿದ್ದರು ಈಗ ಯಾರು ಬರುತ್ತಿಲ್ಲ ಹೊರರಾಜ್ಯಗಳಿಗೂ ಟೊಮೆಟೋ ಮತ್ತು ತರಕಾರಿ ಸಾಗಣೆ ಆಗುತ್ತಿಲ್ಲ, ಸ್ಥಳೀಯವಾಗಿ ಕೆಲ ವ್ಯಾಪಾರಸ್ಥರು ಜ್ಯೂಸ್‌ಗಾಗಿ ಟೊಮೆಟೋವನ್ನು ಖರೀದಿಸುತ್ತಿದ್ದಾರೆ. ವ್ಯಾಪಾರಕ್ಕೆ ಬರುವ ಲಾರಿ ಮತ್ತು ಇತರೆ ವಾಹನಗಳ ಸಂಖ್ಯೆಯೂ ಗಣನೀಯವಾಗಿ ಇಳಿಮುಖಗೊಂಡಿದೆ.

ಡಿ.ಎಲ್‌.ನಾಗರಾಜ್‌, ಅಧ್ಯಕ್ಷರು , ಎಪಿಎಂಸಿ, ಕೋಲಾರ

ಟೊಮೆಟೊ ಬೆಳೆಗಾರರಿಗೆ ಬಾರೀ ನಷ್ಟ

ಕಳೆದ ವಾರ 15 ಕೆಜಿ ಟೊಮೆಟೋ ತುಂಬಿದ ಬಾಕ್ಸ್‌ 180 ರು.ಗಳಿಗೆ ಹರಾಜಿನಲ್ಲಿ ಮಾರಾಟವಾಗುತ್ತಿತ್ತು, ಆದರೀಗ ಒಂದು ಬಾಕ್ಸ್‌ ಟೊಮೆಟೋ ಬೆಲೆ 100 ರು.ಗಳಿಗೆ ಕುಸಿತಗೊಂಡಿದೆ. ಅರ್ಧದಷ್ಟುಬೆಲೆ ಕಡಿಮೆಯಾಗಿದೆ. ಆದರೆ ಈ ಕೊರೋನಾ ವೈರಸ್‌ ಆತಂಕ ಟೊಮೆಟೋ ಬೆಳೆಗಾರರಲ್ಲೂ ಆವರಿಸಿಕೊಂಡಿರುವುದರಿಂದ ಇದರ ಬಿಸಿ ವ್ಯಾಪಾರದ ಮೆಲೆ ತಟ್ಟಿದ್ದು ರೈತರಿಗೆ ಭೀತಿ ಹುಟ್ಟಿಸಿದೆ. ಈಗಾಗಲೇ ಜಿಲ್ಲೆಯಲ್ಲಿ ಸಾವಿರಾರು ರೈತರು ಸಾಕಷ್ಟುಖರ್ಚು ಮಾಡಿ ಬೆಳೆಗಳನ್ನು ಬೆಳೆಯುತ್ತಿದ್ದಾರೆ ಬೆಲೆ ಸಿಗದೆ ಹೋದರೆ ರೈತರಿಗೆ ನಷ್ಟದ ಮೇಲೆ ನಷ್ಟಉಂಟಾಗುತ್ತದೆ.