Look Back Koppal 2021: ಕೋವಿಡ್ ಕಾರ್ಮೋಡದಲ್ಲೇ ಕೊಚ್ಚಿಹೋದ ಬದುಕು..!
* ಸಾಲು ಸಂಕಷ್ಟಗಳ ಕಗ್ಗತ್ತಲ ನಡುವೆ ಅಲ್ಲಲ್ಲಿ ಮಿಣಿಕು-ಮಿಂಚು
* ಕೊಪ್ಪಳ ಜಿಲ್ಲೆಗೆ ಕಾಲಿಟ್ಟಲ್ಲವಾದರೂ ಆತಂಕ ಸೃಷ್ಟಿಸಿದ ಒಮಿಕ್ರೋನ್
* ಪರಿಸರ ಸ್ನೇಹಿಯಾಗಿ ಗವಿಸಿದ್ದೇಶ್ವರ ಜಾತ್ರೆ ಆಚರಣೆ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಡಿ.31): 2021ರ ಪ್ರಾರಂಭದಲ್ಲಿ ಮೊದಲ ಅಲೆಯಿಂದ ಚೇತರಿಸಿಕೊಂಡು ಮತ್ತೆ ಜೀವನೋತ್ಸಾಹದಲ್ಲಿ ಸಾಗಬೇಕು ಎನ್ನುವಷ್ಟರಲ್ಲಿಯೇ ವಕ್ಕರಿಸಿದ ಕೋವಿಡ್(Covid19) ಎರಡನೇ ಅಲೆ ಜನರ ಬದುಕು ಛಿದ್ರಗೊಳಿಸಿ ಅಪಾರ ಸಾವು ನೋವಿಗೆ ಕಾರಣವಾಯಿತು. ಇಂಥ ಕಷ್ಟಗಳ ಸರಮಾಲೆಯ ನಡುವೆ ಮತ್ತೆ ಬದುಕು ಕಟ್ಟಿಕೊಳ್ಳಬೇಕು ಎನ್ನುವಾಗಲೇ ವರ್ಷದ ಕೊನೆಯಲ್ಲಿ ವಕ್ಕರಿಸಿರುವ ಒಮಿಕ್ರೋನ್(Omicron) ಜಿಲ್ಲೆಗೆ ಕಾಲಿಟ್ಟಲ್ಲವಾದರೂ ಆತಂಕ ಸೃಷ್ಟಿಸಿದೆ. ಈ ಆತಂಕ ಆರಂಭದಲ್ಲಿಯೇ ದೂರವಾಗಲಿ, ಅದು ಎದುರಾಗದಿರಲಿ ಎಂಬ ಪ್ರಾರ್ಥನೆಯೊಂದಿಗೆ 2022 ಸ್ವಾಗತಿಸಲು ಜನರು ಸಿದ್ಧರಾಗಿದ್ದಾರೆ.
ಕೋವಿಡ್ ಮೊದಲ ಅಲೆ ತಣ್ಣಗಾದ ಬಳಿಕ ಜ. 2ರಂದು ಆರಂಭವಾದ ಎಸ್‌ಎಸ್‌ಎಲ್‌ಸಿ(SSLC) ಹಾಗೂ ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳ ಕಲರವ ಆರಂಭವಾಯಿತು. ಆದರೆ, ಫೆಬ್ರುವರಿಯಲ್ಲಿ ಮತ್ತೆ ಡೆಲ್ಟಾವೈರಸ್(Delta Virus) ಆರಂಭಿಸಿದ್ದರಿಂದ ತರಗತಿಗಳನ್ನು ಸ್ಥಗಿತಗೊಳಿಸಲಾಯಿತು. ಈ ಆತಂಕದ ನಡುವೆಯೂ ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಯನ್ನು ಪರಿಸರ ಸ್ನೇಹಿಯಾಗಿ ಜನವರಿಯಲ್ಲಿ ‘ಸರಳ ಜಾತ್ರೆ ಸಮಾಜಮುಖಿ ಸೇವೆ’ಗೆ ಅರ್ಪಣೆ ಎಂಬ ಘೋಷವಾಕ್ಯದಡಿ ಜಾತ್ರೆ ಆಚರಿಸಲಾಯಿತು. ಇದಕ್ಕಾಗಿ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆ, ಗಿಣಿಗೇರಿ ಅಭಿವೃದ್ಧಿ ಹಾಗೂ ಯಲಬುರ್ಗಾ ತಾಲೂಕಿನ ಅಡವಿಹಳ್ಳಿಯ ಅಭಿವೃದ್ಧಿಯ ಸಂಕಲ್ಪ ಮಾಡಿ ಚಾಲನೆ ನೀಡಲಾಯಿತು. ಇದರ ಪರಿಣಾಮ ಸ್ಪರ್ಧಾತ್ಮಕ ಪರೀಕ್ಷೆಗೆ ಅಭ್ಯಾಸ ಮಾಡಲು ಗ್ರಂಥಾಲಯ ಸಿದ್ಧವಾಗಿದ್ದರೆ ಗಿಣಿಗೇರಿ ಕೆರೆ ಅಭಿವೃದ್ಧಿಯಾಗಿದೆ. ಅಡವಿಹಳ್ಳಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ.
Illegal Resorts in Anjanadri: ರೆಸಾರ್ಟ್‌ಗಳ ತೆರವಿಗೆ ಕೊಪ್ಪಳ ಜಿಲ್ಲಾಡಳಿತ ಸಿದ್ಧತೆ
ಕೋವಿಡ್ ಉತ್ತುಂಗಕ್ಕೆ
ಕೋವಿಡ್ ಎರಡನೇ ಅಲೆ ಉತ್ತುಂಗಕ್ಕೆ ತೆರಳಿ ಅಪಾರ ಸಾವು, ನೋವು ಸಂಭವಿಸಿದವು. ಮೊದಲ ಹಾಗೂ ಎರಡನೇ ಅಲೆಯಲ್ಲಿ ಜಿಲ್ಲೆಯಲ್ಲಿ ಬರೋಬರಿ 560 ಜನರು ಕೋವಿಡ್‌ಗೆ ಬಲಿಯಾದರು. ಆಸ್ಪತ್ರೆಯಲ್ಲಿ ಆಕ್ಸಿಜನ್, ಬೆಡ್ ಸಿಗದೆ ಆಸ್ಪತ್ರೆ ಎದುರು ರೋಗಿಗಳು ನರಕಯಾತನೆ ಅನುಭವಿಸಿದರು. ಕೆಲವೆಡೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ಹಾಗೂ ಬೆಡ್ ಸಿಗದೆ ನೂರಾರು ಜನರು ಉಸಿರು ಚೆಲ್ಲಿದರು. ಗವಿಮಠದ ವತಿಯಿಂದ ಕೋವಿಡ್ ಆಸ್ಪತ್ರೆ ತೆರೆದು ಜನರಿಗೆ ಚಿಕಿತ್ಸೆ ನೀಡಲಾಯಿತು.
ನೆರೆಯ ಬರ:
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ರೈತರು(Farmers) ಕುಂಭದ್ರೋಣ ಮಳೆಯಿಂದ ಬೆಳೆಗಳು ಜಲಾವ್ರತವಾಗಿ ಬೆಳೆಗಳು ನಾಶವಾದವು(Crop Loss). ನೂರಾರ ಎಕರೆ ದ್ರಾಕ್ಷಿ, ಈರುಳ್ಳಿ, ದಾಳಿಂಬೆ ಸೇರಿದಂತೆ ತೋಟಗಾರಿಕಾ ಬೆಳೆಗಳು ಹಾನಿಗೊಳಗಾದವರು. ಭತ್ತ, ತೊಗರಿ, ಮೆಕ್ಕೆಜೋಳ ಸೇರಿದಂತೆ ಅನೇಕ ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದರು ರೈತರ ಕೈ ಸೇರಲಿಲ್ಲ. ಸಿಡಿಲು, ಪ್ರವಾಹ(Flood), ರೈತ ಆತ್ಮಹತ್ಯೆ ಜರುಗಿದವು.
ರಾಜಕೀಯ:
ಬಿಜೆಪಿ ಸರ್ಕಾರದಲ್ಲಿ(BJP Government) ವರ್ಷದ ಪ್ರಾರಂಭದಲ್ಲಿ ಜಿಲ್ಲೆಯ ಶಾಸಕರು ಸಚಿವ ಸ್ಥಾನ ಸಿಗಲೇ ಇಲ್ಲ. ಕೃಷಿ ಸಚಿವ ಬಿ.ಸಿ. ಪಾಟೀಲ(BC Patil) ಅವರನ್ನು ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಲಾಯಿತು. ಬಸವರಾಜ ಬೊಮ್ಮಾಯಿ(Basavaraj Bommai) ಮುಖ್ಯಮಂತ್ರಿ ಆಗುತ್ತಿದ್ದಂತೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್(Halappa Achar) ಅವರಿಗೆ ಸಚಿವ ಸ್ಥಾನ ನೀಡಿ ಜಿಲ್ಲೆಯ ಉಸ್ತುವಾರಿಯನ್ನು ಸಹ ನೀಡಲಾಯಿತು. ಜತೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಹಿರಿಯ ನಾಗರಿಕರ ಇಲಾಖೆ, ಅಂಗವಿಕಲರ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಂತ ದೊಡ್ಡ ದೊಡ್ಡ ಖಾತೆಗಳೆ ಸಿಕ್ಕಿವೆ. ರಾಯಚೂರು-ಕೊಪ್ಪಳ ವಿಧಾನಪರಿಷತ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶರಣಗೌಡ ಭಯ್ಯಾಪುರ ಆಯ್ಕೆಯಾಗಿದ್ದಾರೆ.
Tungabhadra Dam: ರಾಜ್ಯಕ್ಕೆ 9 ಟಿಎಂಸಿ ನೀರು ಖೋತಾ: ಸಂಕಷ್ಟದಲ್ಲಿ ಅನ್ನದಾತ
ನಗರಸಭೆ ಆಡಳಿತ:
ಕೊಪ್ಪಳ ನಗರಸಭೆಯಲ್ಲಿ ಎರಡೂವರೆ ವರ್ಷಗಳಿಂದ ಚುನಾಯಿತ ಪ್ರತಿನಿಧಿಗಳ ಆಡಳಿತವೆ ಇರಲಿಲ್ಲ. ಗೆದ್ದರು ಸದಸ್ಯರಿಗೆ ಅಧಿಕಾರ ಮಾಡುವ ಯೋಗ ಇರಲಿಲ್ಲ. ಏಪ್ರಿಲ್‌ನಲ್ಲಿ ಅಧ್ಯಕ್ಷೆಯಾಗಿ ಲತಾ ಗವಿಸಿದ್ದಪ್ಪ ಚಿನ್ನೂರು ಆಯ್ಕೆಯಾಗುವ ಮೂಲಕ ಆಡಳಿತ ಪ್ರಾರಂಭವಾಯಿತು. ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್‌ವಿಂಗಡಣೆಯಿಂದ 29 ಇದ್ದ ಜಿಪಂ ಕ್ಷೇತ್ರಗಳು 34, 109 ಇದ್ದ ತಾಲೂಕು ಪಂಚಾಯಿತಿ ಕ್ಷೇತ್ರಗಳು 100 ಆಗಿವೆ.
ಕನ್ನಡಪ್ರಭ ವರದಿ ಪರಿಣಾಮ
ರೈತರಿಗೆ ಪರಿಹಾರ ಸಿಗುವಲ್ಲಿ ಆದ ಅನ್ಯಾಯ, ಬೆಳೆ ವಿಮೆ ಕುರಿತ ಕನ್ನಡಪ್ರಭ(Kannada Prabha) ಪ್ರಕಟಿಸಿದ ವರದಿಗಳು ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ರೈತರಿಗೆ ನ್ಯಾಯ ಒದಗಿಸುವಲ್ಲಿ ಯಶಸ್ವಿಯಾಗಿದೆ. ಮುದ್ದಾಬಳ್ಳಿ ವಿದ್ಯಾರ್ಥಿಗಳು ಬಸ್ ಸೌಕರ್ಯವಿಲ್ಲದೆ ಜೆಸಿಬಿಯಲ್ಲಿ ತೆರಳುತ್ತಿರುವ ವರದಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಆ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸಿದರು. ಬೆಟಗೇರಿ-ಡೊಂಬರಳ್ಳಿಯ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಬಸ್ ಸಮಸ್ಯೆ ಪ್ರಕಟಿಸಿದಾಗ ಎಚ್ಚೆತ್ತುಕೊಂಡ ಸಾರಿಗೆ ಇಲಾಖೆ ಅಧಿಕಾರಿಗಳು ಬಸ್ ಸೌಲಭ್ಯ ಕಲ್ಪಿಸಿದ್ದಾರೆ.
ದಲಿತ ಮಗುವಿಗೆ ದಂಡ:
ಕುಷ್ಟಗಿ ತಾಲೂಕಿನ ಮಿಯ್ಯಾಪುರದಲ್ಲಿ ದಲಿತ ಮಗು ದೇವರ ಗುಡಿ ಪ್ರವೇಶಿಸಿತು ಎಂದು ದಂಡ ಹಾಕಿದ ಘಟನೆ ಜಿಲ್ಲೆಗೆ ಕಪ್ಪು ಚುಕ್ಕೆ ಆಯಿತು. ಈ ಕುರಿತು ಕನ್ನಡಪ್ರಭ ವರದಿ ಮೂಲಕ ಬೆಳಕು ಚೆಲ್ಲುತ್ತಿದ್ದಂತೆ ಜಿಲ್ಲಾಡಳಿತವೇ ಗ್ರಾಮಕ್ಕೆ ಭೇಟಿ ಅಸ್ಪೃಶ್ಯತೆ ಆಚರಿಸಿದ ಕ್ರೂರಿಗಳನ್ನು ಜೈಲಿಗಟ್ಟಲಾಯಿತು.
‘ಗೊಬ್ಬರ ದುಬಾರಿ’ ವರದಿ ವರದಿ ಬಾರಿ ಸದ್ದು ಮಾಡಿತು. ದಿಢೀರ್ ರಸಗೊಬ್ಬರ ಬೆಲೆ ದುಪ್ಪಟ್ಟು ಏರಿಕೆಯಾಗುವ ಮೂಲಕ ರೈತರಿಗೆ ಬರೆ ಎಳೆಯಲಾಯಿತು. ಈ ಕುರಿತು ವರದಿ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚೆಯಾಗಿ ರೈತರಿಗೆ . 14 ಸಾವಿರ ಕೋಟಿ ಸಬ್ಸಿಡಿಯನ್ನು ಕೇಂದ್ರ ಘೋಷಣೆ ಮಾಡಿತು.
ಪಡಿತರಕ್ಕಾಗಿ ಅಲೆಮಾರಿಗಳ ಅಳಲು ಎಂಬ ವರದಿಯನ್ನು ಕನ್ನಡಪ್ರಭ ಕೋವಿಡ್ ಸಂಕಷ್ಟದ ಸಮಯದಲ್ಲಿ ಪ್ರಕಟಿಸಿತು. ಕೊಪ್ಪಳ ನಗರದಲ್ಲಿಯೇ ಇರುವ ಗಾಂಧಿ ನಗರದ ನಿವಾಸಿಗಳ ಸಮಸ್ಯೆಯ ಕುರಿತು ವಿಶೇಷ ವರದಿ ಪ್ರಕಟಿಸುತ್ತಿದ್ದಂತೆ ಸ್ಪಂದನೆ ದೊರೆಯಿತು.
ಹೆಮ್ಮೆಯ ಸಂಗತಿಗಳು
ಕಿನ್ನಾಳ ಕಲೆಯ ಅಂಚೆಯ ಚೀಟಿಯನ್ನು ಕೇಂದ್ರ ಸರ್ಕಾರ(Central Government) ಬಿಡುಗಡೆ ಮಾಡಿತು. ಕುಕನೂರು ತಾಲೂಕಿನ ಭಾನಾಪುರದ ಬಳಿ ದೇಶದ ಮೊದಲ ಆಟಿಕೆ ಕ್ಲಸ್ಟರ್ ಪ್ರಾರಂಭಿಸುವ ಯೋಜನೆಗೆ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ(BS Yediyurappa) ಅವರು ವರ್ಷದ ಪ್ರಾರಂಭದಲ್ಲಿಯೇ ಚಾಲನೆ ನೀಡಿದರು. ಈ ಕಾಮಗಾರಿ ಪ್ರಗತಿಯಲ್ಲಿದೆ. ನಿರೀಕ್ಷಿತ ಮಟ್ಟದ ವೇಗ ಇಲ್ಲವಾದರೂ ಕಾಮಗಾರಿ ನಡೆಯುತ್ತಿದೆ.
ಪ್ರಮುಖ ಘಟನೆಗಳು
ಕಿಷ್ಕಿಂಧೆಯ ಅಂಜನಾದ್ರಿಯಲ್ಲಿ ಆಂಜನೇಯ ಜನಿಸಿರುವುದು ಪುರಾಣ ಕಾಲದಿಂದಲೂ ವಿವಾದರಹಿತ ವಿಷಯ. ಆದರೂ ಈ ಕುರಿತು ಏಪ್ರಿಲ್‌ನಲ್ಲಿ ತಿರುಪತಿಯ ಟಿಟಿಡಿ(TTD) ಕ್ಯಾತೆ ತೆಗೆಯಿತು. ಈ ಕುರಿತು ಭಾರಿ ಚರ್ಚೆಯಾಗಿ ಕೊನೆಗೆ ಅಂಜನಾದ್ರಿಯೇ ಆಂಜನೇಯನ ಜನ್ಮಸ್ಥಳ(Hanuman Birthplace) ಎನ್ನುವುದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳೇ ಒಪ್ಪಿಕೊಂಡು ಅಭಿವೃದ್ಧಿ ಪ್ರಾರಂಭಿಸಿದವು. ಅಂಜನಾದ್ರಿ ಬೆಟ್ಟವನ್ನು(Anjanadri Hill) ಅಂತಾರಾಷ್ಟ್ರೀಯ ಪ್ರವಾಸಿತಾಣವಾಗಿ ಅಭಿವೃದ್ಧಿ ಮಾಡುವುದಾಗಿ ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಾಕಾರಣಿ ಸಭೆಯ ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರು ಘೋಷಿಸಿದರು. ಇದರಿಂದ ಅಂಜನಾದ್ರಿ ಅಭಿವೃದ್ಧಿಗೆ ವೇಗ ದೊರೆಯಲಿದೆ. ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಮಾಸ್ಟರ್ ಪ್ಲಾನ್ ಕಾರ್ಯಾಗತವಾಗುವ ಯೋಗ ಬಂದಂತೆ ಆಗಿರುವುದು ಸಂತಸದ ಸಂಗತಿ.
ಕಸಾಪ ಚುನಾವಣೆ
ಹಲವು ದಿನಗಳಿಂದ ನನೆಗುದಿಗೆ ಬಿದ್ದಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ(Kannada Sahitya Parishad Election) ನವೆಂಬರ್‌ನಲ್ಲಿ ನಡೆದವು. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷರಾಗಿ ಶರಣಗೌಡ ಅವರು ಆಯ್ಕೆಯಾಗಿದ್ದಾರೆ. ಆದರೆ, ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೊಪ್ಪಳದ ಶೇಖರಗೌಡ ಮಾಲಿಪಾಟೀಲ ಪರಾಭವಗೊಂಡರೂ ಗೆದ್ದ ಅಭ್ಯರ್ಥಿಯ ನಂತರದ ಸ್ಥಾನವನ್ನು ಪಡೆದಿದ್ದಾರೆ.
Kalyana-Karnataka: 371ಜೆ ಜಾರಿಯಾದ್ರೂ ಕಲ್ಯಾಣ ಕರ್ನಾಟಕದವರ ಅನ್ಯಾಯ ನೀಗಿಲ್ಲ..!
ಸೇನೆ ಸೇರಿದ ವೀರವನಿತೆಯರು
ದೇಶದ ಗಡಿಕಾಯುವ ಕಾರ್ಯಕ್ಕೆ ಕೊಪ್ಪಳ(Koppal) ಜಿಲ್ಲೆಯಿಂದ ಪ್ರಥಮ ಬಾರಿಗೆ ಇಬ್ಬರು ಮಹಿಳೆಯರು ಸೇರಿಕೊಂಡಿದ್ದಾರೆ. ಕುಷ್ಟಗಿ ತಾಲೂಕಿನ ಬೀಳೆಕಲ್ ಗ್ರಾಮದ ವೀರವನಿತೆಯರಾದ ರೇಷ್ಮಾ ಮತ್ತು ವೀಣಾ ಎನ್ನುವವರೇ ಈ ದಾಖಲೆ ಮಾಡಿದ್ದಾರೆ. ಏಪ್ರಿಲ್‌ನಲ್ಲಿ ಇವರು ಸೇವೆ ಪ್ರಾರಂಭಿಸಿದ್ದಾರೆ.
ಕೊಪ್ಪಳ ಜಿಲ್ಲೆಗೆ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಗ್ರಾಮೀಣ ವಿವಿ ಘೋಷಿಸಿದ್ದಾರೆ. ಭಾನಾಪುರದಲ್ಲಿ ಆಟಿಕೆ ಕ್ಲಸ್ಟರ್‌ಗೆ ಶಂಕುಸ್ಥಾಪನೆ ನೆರವೇರಿಸಿದ ಶಾಸಕರಾಗಿದ್ದ ಹಾಲಪ್ಪ ಆಚಾರ್ ಅವರು ಕೋರಿಕೆಯಂತೆ ವಿವಿ ಘೋಷಿಸಿದ್ದಾರೆ. ಆದರೆ, ಅದಿನ್ನು ಕಾರ್ಯಗತವಾಗಿಲ್ಲ.
ಪ್ರಶಸ್ತಿ ಪುರಸ್ಕಾರಗಳು
ಹಾಸ್ಯಕಲಾವಿದ ಪ್ರಾಣೇಶ(Gangavati Pranesh) ಮಾದಿನೂರು ಅವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ(Kannada Rajyotsava Award) ಲಭಿಸಿದೆ. ಬೆಟಗೇರಿಯ ಶಿಳ್ಳಿಕ್ಯಾತರ ಅವರಿಗೆ ಜಾನಪದ ಪ್ರಶಸ್ತಿ ಬಂದಿರುವುದು ಸಾಂಸ್ಕೃತಿಕ ವಲಯದ ಸಂಭ್ರಮ ಹೆಚ್ಚಿಸಿದೆ. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಗೆ ಕೋವಿಡ್ ಸಮಯದಲ್ಲಿನ ಕಾರ್ಯನಿರ್ವಹಣೆ ಮೆಚ್ಚಿ ಅತ್ಯುತ್ತಮ ಕೊಪ್ಪಳ ಶಾಖೆ ಎನ್ನುವ ಪ್ರಶಸ್ತಿ ಲಭಿಸಿದ್ದು, ಜಿಲ್ಲಾಧಿಕಾರಿ ವಿಕಾಸ ಕಿಶೋರ ಸುರಳ್ಕರ್ ರಾಜ್ಯಪಾಲರಿಂದ ಸ್ವೀಕರಿಸಿದ್ದಾರೆ.
ರಾಜಕೀಯ, ಧಾರ್ಮಿಕ ಕಾರ್ಯಕ್ರಮ
1. ವಿಧಾನಪರಿಷತ್ ಚುನಾವಣೆಯ ಹಿನ್ನೆಲೆಯಲ್ಲಿ ಕೊಪ್ಪಳದಲ್ಲಿ ಬಿಜೆಪಿಯ ಜನಸ್ವರಾಜ್ ಯಾತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು.
2. ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಹಮ್ಮಿಕೊಂಡಿದ್ದ ಆಹಾರ ಕಿಟ್ ವಿತರಣೆ ಕಾರ್ಯಕ್ರಮಕ್ಕೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗಮಿಸಿದ್ದರು. ಕೊಪ್ಪಳ ಹಾಗೂ ಯಲಬುರ್ಗಾದಲ್ಲಿ ಸಾವಿರಾರು ಸಂಖ್ಯೆಯ ಕಿಟ್ ವಿತರಣೆಗೆ ಚಾಲನೆ ನೀಡಿದರು.
3. ಕೊಪ್ಪಳದಲ್ಲಿ ಪಂಚಮಸಾಲಿ ಸಮಾಜದ ವತಿಯಿಂದ ರಾರಯಲಿ ನಡೆಸಲಾಯಿತು. 2 ಮೀಸಲಾತಿಗೆ ಆಗ್ರಹಿಸಿ ಹೋರಾಟ ಮಾಡಲಾಯಿತು.
4. ಬಿಜೆಪಿ ಜನಾಶೀರ್ವಾದ ಯಾತ್ರೆಗೆ ಕೊಪ್ಪಳದಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ಚಾಲನೆ ನೀಡಿದರು.
5. ಗಂಗಾವತಿಯಲ್ಲಿ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರು ಜನರ ಕಡೆ ಕಾಂಗ್ರೆಸ್ ನಡಿಗೆ ಯಾತ್ರೆ ಮಾಡಿದರು.