Asianet Suvarna News Asianet Suvarna News

Tungabhadra Dam: ರಾಜ್ಯಕ್ಕೆ 9 ಟಿಎಂಸಿ ನೀರು ಖೋತಾ: ಸಂಕಷ್ಟದಲ್ಲಿ ಅನ್ನದಾತ

*  ಅನುಷ್ಠಾನವೇ ಆಗದ ಯೋಜನೆಗೆ 9 ಟಿಎಂಸಿ ನೀರು ಖರ್ಚು ತೋರಿದ ತುಂಗಭದ್ರಾ ಮಂಡಳಿ
*  ತುಂಗಭದ್ರಾ ಜಲಾಶಯ ಭರ್ತಿಯಾಗಿದ್ದರೂ ತಪ್ಪದ ಗೋಳು
*  ಬೋರ್ಡ್‌ನಲ್ಲಿ ಆಂಧ್ರದವರದ್ದೇ ಪಾರುಪತ್ಯ
 

9 TMC Water Reduction for Karnataka in Tungabhadra Dam grg
Author
Bengaluru, First Published Dec 29, 2021, 9:48 AM IST

ಸೋಮರಡ್ಡಿ ಅಳವಂಡಿ
ಕೊಪ್ಪಳ(ಡಿ.29):  
ತುಂಗಭದ್ರಾ ಮಂಡಳಿಯಿಂದ(Tungabhadra Board) ರಾಜ್ಯಕ್ಕಾಗುವ(Karnataka) ಅನ್ಯಾಯ ಮತ್ತೆ ಮುಂದುವರಿದಿದೆ. ಇನ್ನೂ ಜಾರಿಯಾಗದ ಯೋಜನೆಗೆ ನೀರು ಬಳಕೆ ನೆಪದಲ್ಲಿ ರಾಜ್ಯದ ಪಾಲಿನ 9 ಟಿಎಂಸಿ ನೀರನ್ನು ಮಂಡಳಿ ಕಡಿತಗೊಳಿಸಿದೆ. ಈ ಯೋಜನೆ ಇನ್ನೂ ಜಾರಿಯೇ ಆಗಿಲ್ಲ. ಆದರೆ ಅದಕ್ಕೆ ನೀರು ಬಳಕೆ ನೆಪವೊಡ್ಡಿ ನೀರು ಹಂಚಿಕೆಯಿಂದ 9 ಟಿಎಂಸಿ ನೀರನ್ನು ಹೊರಗಿಡಲಾಗಿದೆ. ತುಂಗಭದ್ರಾ ಮಂಡಳಿಯಲ್ಲಿ ಆಂಧ್ರ(Andhra Pradesh) ಮೂಲದ ಅಧಿಕಾರಿಗಳೇ ತುಂಬಿದ್ದರಿಂದ ಆಗಾಗ ರಾಜ್ಯಕ್ಕೆ ಅನ್ಯಾಯ ಆಗುತ್ತಲೇ ಇದೆ. ಇದರ ಬಗ್ಗೆ ರಾಜ್ಯದ ರೈತರು(Farmers), ರಾಜಕೀಯ ಪಕ್ಷಗಳು, ನೀರಾವರಿ ಸಲಹಾ ಸಮಿತಿ ಸಭೆಯಲ್ಲೂ ಆಕ್ಷೇಪ, ಆಕ್ರೋಶ ವ್ಯಕ್ತಪಡಿಸಲಾಗುತ್ತಲೇ ಇದೆ.

ಈ ವಿಷಯ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರ ಸಮ್ಮುಖದಲ್ಲಿಯೇ ಚರ್ಚಿಸಿ ಬೋರ್ಡ್‌ ಬಳಿ ಲೆಕ್ಕ ಕೇಳಲು ನೀರಾವರಿ ಸಲಹಾ ಸಮಿತಿ ಮುಂದಾಗಿದೆ. ಜಲಾಶಯಲ್ಲಿ(Tungabhadra Dam) ಸದ್ಯ 96 ಟಿಎಂಸಿ ನೀರು ಲಭ್ಯವಿದ್ದರೂ ಹಿಂಗಾರು ಬೆಳೆಗೆ ಕಾಲುವೆ ಮೂಲಕ ಬಿಡಲು 86.118 ಟಿಎಂಸಿ ನೀರು ಇದೆ ಎಂದು ಹಂಚಿಕೆಗೆ ಅವಕಾಶ ನೀಡಲಾಗಿದೆ.

Karnataka Rains: ಇತಿ​ಹಾ​ಸ​ದ​ಲ್ಲೇ ಮೊದಲು, ತುಂಗಭದ್ರಾ ಡ್ಯಾಂಗೆ ದಾಖಲೆ ನೀರು..!

ಈಗಾಗಲೇ ಹಿಂಗಾರು ಹಂಗಾಮು ಬೆಳೆಗೆ(Crop) ನೀರು ಹಂಚಿಕೆಯಾಗುತ್ತಿದೆ. ಈಗ ಲಭ್ಯವಾದ ನೀರಿನಲ್ಲಿ ರಾಜ್ಯದ ಪಾಲು 54.441 ಟಿಎಂಸಿ, ಆಂಧ್ರಕ್ಕೆ 25.535 ಟಿಎಂಸಿ. ತೆಲಂಗಾಣದ(Telangana) ಪಾಲು 6.142 ಟಿಎಂಸಿ ಎಂದು ಲೆಕ್ಕಾಚಾರದಲ್ಲಿ ಹಂಚಿಕೆ ಮಾಡಲಾಗಿದೆ. ಹೀಗಾಗಿ 9-10 ಟಿಎಂಸಿ ನೀರಿನ ಲೆಕ್ಕಾಚಾರವೇ ಇಲ್ಲದಾಗಿದೆ.

ತುಂಗಭದ್ರಾ ಬೋರ್ಡ್‌ ನೀಡಿರುವ ಮಾಹಿತಿಯ ಪ್ರಕಾರ ಇನ್ನೂ ಕಾರ್ಯಗತವಾಗದ ಪಾವಗಡ ಯೋಜನೆಗೆ 2.8 ಟಿಎಂಸಿ ನೀರು, ಕೈಗಾರಿಕೆಗೆ 2.6 ಟಿಎಂಸಿ ನೀರು, ಅಳವಂಡಿ-ಬೆಟಗೇರಿ, ಬಹದ್ದೂರುಬಂಡಿ, ಚೀಲವಾರಬಂಡಿ, ಮಾಲ್ವಿ ಲಿಫ್ಟ್‌ ಯೋಜನೆ ಸೇರಿದಂತೆ ಇನ್ನು ಕಾರ್ಯಗತವಾಗದ ಏತನೀರಾವರಿ ಯೋಜನೆಯನ್ನು ಒಳಗೊಂಡು 9 ಟಿಎಂಸಿ ನೀರು ಬಳಕೆಯಾಗಿದೆ ಎನ್ನುತ್ತಿದೆ. ಆದರೆ ಅನುಷ್ಠಾನವೇ ಆಗದ ಯೋಜನೆಗೆ ನೀರು(Water) ಬಳಕೆಯಾಗಿದೆ ಎಂದು ತೋರಿಸಲಾಗಿದೆ. ಇದರ ಬಗ್ಗೆ ನೀರಾವರಿ ಇಲಾಖೆ(Department of Irrigation) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಕೈಗಾರಿಕೆ ಮತ್ತು ಕುಡಿಯುವ ನೀರಿಗಾಗಿ ಜಂಟಿ ಸರ್ವೆಯ ಲೆಕ್ಕಚಾರದಲ್ಲಿ ಆಗಿರುವಂತೆ ಮಾತ್ರ ನೀರು ಕಡಿತ ಮಾಡಿ, ಅದನ್ನು ಬಿಟ್ಟು, ಇನ್ನೂ ಕಾರ್ಯಗತವಾಗದ ಯೋಜನೆಗಳ ಲೆಕ್ಕಚಾರದಲ್ಲಿಯೂ ಕಡಿತ ಮಾಡುವುದನ್ನು ಕೈಬಿಡಿ ಎಂದು ತುಂಗಭದ್ರಾ ಬೋರ್ಡ್‌ಗೆ ಪತ್ರ ಬರೆಯಲಾಗಿದೆ .

ಸುಮಾರು 40 ವರ್ಷಗಳ ಬಳಿಕ ಡಿಸೆಂಬರನಲ್ಲೂ ತುಂಗಭದ್ರಾ ಜಲಾಶಯ ಭರ್ತಿಯಾಗಿಯೇ ಇದೆ. ಅತಿ ಹೆಚ್ಚು ನೀರು ಸಹ ಸಂಗ್ರಹವಾಗಿದೆ. ಇಷ್ಟೊಂದು ನೀರು ಸಂಗ್ರಹವಾಗಿದ್ದರೂ ಸಹ ರಾಜ್ಯದ ರೈತರಿಗೆ ಸರಿಸುಮಾರು 9-10 ಟಿಎಂಸಿ ನೀರು ಕಡಿತವಾಗಿದ್ದು ಬಲದಂಡೆಯ ಮೇಲ್ಮಟ್ಟದ ಕಾಲುವೆ ವ್ಯಾಪ್ತಿಯಲ್ಲಿ ನೀರಿಗಾಗಿ ಮತ್ತೆ ಆಂಧ್ರದ ಮುಂದೆ ಕೈಯೊಡ್ಡಿ ನಿಲ್ಲಬೇಕಾದ ಸ್ಥಿತಿ ಎದುರಾಗಿದೆ.

ಸಭೆಯಲ್ಲಿಯೂ ಆಕ್ರೋಶ:

ತುಂಗಭದ್ರಾ ಬೋರ್ಡ್‌ ಕುರಿತು ಮಂಗಳವಾರ ಮುನಿರಾಬಾದ್‌ನಲ್ಲಿ ನಡೆದ ತುಂಗಭದ್ರಾ ನೀರಾವರಿ ಸಲಹಾ ಸಮಿತಿಯ(Tungabhadra Irrigation Advisory Committee) 116ನೇ ಸಭೆಯಲ್ಲಿಯೂ ಆಕ್ರೋಶ ವ್ಯಕ್ತವಾಗಿದೆ. ಸ್ವತಃ ಸಭೆಯ ಅಧ್ಯಕ್ಷತೆ ವಹಿಸಿದ್ದ ಆನಂದ್‌ ಸಿಂಗ್‌(Anand Singh) ನಮ್ಮಲ್ಲಿಯೇ ಜಲಾಶಯವಿದ್ದರೂ ತುಂಗಭದ್ರಾ ಬೋರ್ಡ್‌ ಕೊಡುವ ಲೆಕ್ಕಚಾರದಲ್ಲಿ ನೀರು ಹಂಚಿಕೆ ಮಾಡಬೇಕಾಗಿರುವುದು ಬೇಸರದ ಸಂಗತಿ ಎಂದಿದ್ದಾರೆ.

ಹಸಿರು ಬಣ್ಣಕ್ಕೆ ತಿರು​ಗಿದ ತುಂಗಭದ್ರಾ ಜಲಾಶಯದ ನೀರು..!

ತುಂಗಭದ್ರಾ ಬೋರ್ಡ್‌ ರಾಜ್ಯದ ಪಾಲಿಗೆ ಬಿಳಿ ಆನೆಯಂತಿದೆ. ಇದನ್ನು ರದ್ದುಪಡಿಸಬೇಕು ಎನ್ನುವ ಹಕ್ಕೊತ್ತಾಯ ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದರೂ ಜಾರಿಯಾಗುತ್ತಿಲ್ಲ ಎಂದು ಅನೇಕ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಂಗಭದ್ರಾ ಬೋರ್ಡ್‌ನಲ್ಲಿ ಆಂಧ್ರ, ತೆಲಂಗಾಣ ಹಾಗೂ ಕರ್ನಾಟಕಕ್ಕೆ ಸೇರಿದ ಅಧಿಕಾರಿ ಕಾರ್ಯದರ್ಶಿಯಾಗಿರಬೇಕು ಎನ್ನುವ ನಿಯಮವಿದ್ದರೂ ಆಂಧ್ರ ಮೂಲದವರೇ ಕಾರ್ಯದರ್ಶಿಯಾಗುತ್ತಿದ್ದಾರೆ. ಈಗಿರುವ ತುಂಗಭದ್ರಾ ಬೋರ್ಡ್‌ ಕಾರ್ಯದರ್ಶಿ ಸಹ ಆಂಧ್ರದವರೇ ಆಗಿದ್ದಾರೆ. ಇದರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಲೇ ಇರುವ ಕುರಿತು ಸಭೆಯಲ್ಲಿ ಚರ್ಚೆ ಮಾಡಲಾಗಿದೆ.

ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ, ಸಮಸ್ಯೆಯನ್ನು ನಿವೇದನೆ ಮಾಡಿಕೊಳ್ಳಲಾಗುವುದು. ಬಲದಂಡೆ ಮೇಲ್ಮಟ್ಟದ ಕಾಲುವೆಗೆ ನೀರಿನ ಲಭ್ಯತೆಯ ಆಧಾರದಲ್ಲಿ ಬಿಟ್ಟುಕೊಳ್ಳಬಹುದಾಗಿದ್ದರೂ ಆಂಧ್ರದದವರ ಸಹಕಾರ ಬೇಕಾಗುತ್ತದೆ. ಹೀಗಾಗಿ, ಆಂಧ್ರ ಮುಖ್ಯಮಂತ್ರಿ ಸಹ ಭೇಟಿಯಾಗಿ ಮನವಿ ಮಾಡಲಾಗುವುದು ಅಂತ ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios