ಕೊರೋನಾ : ಮಂಗಳೂರಲ್ಲಿ 9 ಮಂದಿಗೆ ಆಸ್ಪತ್ರೆಯಲ್ಲಿ ತೀವ್ರ ನಿಗಾ
ಮಂಗಳೂರಿನಲ್ಲಿ 11 ಮಂದಿಯ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲದೆ, 9 ಮಂದಿ ಶಂಕಿತ ವ್ಯಕ್ತಿಗಳನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಿ ನಿಗಾದಲ್ಲಿ ಇರಿಸಲಾಗಿದೆ.
ಮಂಗಳೂರು [ಮಾ.16]: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ನಿತ್ಯವೂ ಕೊರೋನಾ ಶಂಕಿತ ವ್ಯಕ್ತಿಗಳ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುತ್ತಿದ್ದು, ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣ ಕಂಡುಬಂದಿಲ್ಲ. ಭಾನುವಾರವೂ ಪ್ರಯೋಗಾಲಯದ ವರದಿ ಬಂದಿದ್ದು, ಈ ಹಿಂದೆ ಪರೀಕ್ಷೆಗೆ ಕಳುಹಿಸಲಾದ ಎಲ್ಲ 8 ಸ್ಯಾಂಪಲ್‌ಗಳೂ ನೆಗೆಟಿವ್ ಆಗಿವೆ. ಭಾನುವಾರ ಮತ್ತೆ 11 ಮಂದಿಯ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಅಲ್ಲದೆ, 9 ಮಂದಿ ಶಂಕಿತ ವ್ಯಕ್ತಿಗಳನ್ನು ವಿವಿಧ ಆಸ್ಪತ್ರೆಗಳಿಗೆ ಸೇರಿಸಿ ನಿಗಾದಲ್ಲಿ ಇರಿಸಲಾಗಿದೆ.
377 ಮಂದಿ ಸ್ಕ್ರೀನಿಂಗ್: ಕೊರೋನಾ ವೈರಸ್ ಆತಂಕದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಭಾನುವಾರ ವಿವಿಧೆಡೆಗಳಿಂದ ಆಗಮಿಸಿದ ಒಟ್ಟು 377 ಜನರ ಸ್ಕ್ರೀನಿಂಗ್ ನಡೆಸಲಾಗಿದೆ. ಒಂಭತ್ತು ಮಂದಿಯಲ್ಲಿ ಆರೋಗ್ಯ ಏರುಪೇರು ಕಂಡುಬಂದಿದ್ದರಿಂದ ಆಸ್ಪತ್ರೆಗಳಿಗೆ ಸೇರಿಸಲಾಗಿದೆ. ಅವರ ಸ್ಯಾಂಪಲ್‌ಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಒಂದೆರಡು ದಿನಗಳಲ್ಲಿ ವರದಿ ಬರುವ ನಿರೀಕ್ಷೆಯಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 106 ಮಂದಿ ಮನೆಯಲ್ಲೇ ವೈದ್ಯಕೀಯ ನಿಗಾದಲ್ಲಿದ್ದಾರೆ.
ಕೊರೋನಾಗೆ ಬಲಿಯಾದ ವೃದ್ಧನ ಟ್ರಾವೆಲ್ ಹಿಸ್ಟರಿ ನೋಡಿದ್ರೆ ಬೆಚ್ಚಿ ಬೀಳ್ತೀರಾ!...
ವದಂತಿಗೆ ಕಿವಿಗೊಡಬೇಡಿ: ಯಾರು ಕೂಡಾ ಗೊಂದಲಕ್ಕೆ ಒಳಗಾಗಬಾರದು. ಸಾಮಾನ್ಯ ಶೀತ- ಜ್ವರಕ್ಕೆ ಆಸ್ಪತ್ರೆಗೆ ದಾಖಲಾಗಬೇಕು ಎಂದಿಲ್ಲ. ಆದರೆ ದೂರ ಪ್ರಯಾಣ ಮಾಡಿದವರು ತಕ್ಷಣ ಆರೋಗ್ಯ ಇಲಾಖೆಯನ್ನು ಸಂಪರ್ಕಿಸಿ. ವಿದೇಶದಿಂದ ಬಂದವರೆಲ್ಲ ಕಡ್ಡಾಯವಾಗಿ 14 ದಿನ ಮನೆಯಲ್ಲೇ ಇರಬೇಕು. ಬೇರೆ ಯಾವುದೇ ವದಂತಿಗಳಿಗೆ ಕಿವಿಗೊಡಬಾರದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಮನವಿ ಮಾಡಿದ್ದಾರೆ.
ಕೋವಿಡ್ ಫ್ರೀ ಸರ್ಟಿಫಿಕೆಟ್ ಬೇಡ : ಜಿಲ್ಲೆಯ ವಿವಿಧ ಹಾಸ್ಟೆಲ್‌ಗಳಿಂದ ಕೋವಿಡ್ ಫ್ರೀ ಸರ್ಟಿಫಿಕೆಟ್ ಕೇಳುತ್ತಿರುವ ಕುರಿತು ಮಾಹಿತಿ ಬಂದಿದೆ. ಯಾರಿಗೂ ಈ ರೀತಿಯ ಸರ್ಟಿಫಿಕೆಟ್ ತನ್ನಿ ಎಂದು ಹೇಳುವ ಅವಕಾಶ ಇಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.