ಬೆಂಗಳೂರು(ಫೆ.18): ಬರೋಬ್ಬರಿ 103 ಮಂದಿಗೆ ಸೋಂಕು ದೃಢಪಡುವ ಮೂಲಕ ರಾಜಧಾನಿ ಬೆಂಗಳೂರಿಗರಲ್ಲಿ ತಲ್ಲಣ ಮೂಡಿಸಿದ್ದ ಬೊಮ್ಮನಹಳ್ಳಿಯ ಎಸ್‌ಎನ್‌ಎನ್‌ ರಾಜ್‌ ಲೇಕ್‌ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಮತ್ತೆ ಆರು ಮಂದಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಂದೇ ಅಪಾರ್ಟ್‌ಮೆಂಟ್‌ನಲ್ಲಿನ 109 ಮಂದಿ ನಿವಾಸಿಗಳಿಗೆ ಸೋಂಕು ಆವರಿಸಿದ್ದು, ಕೊರೋನಾ ಎರಡನೇ ಅಲೆಯ ಆತಂಕ ಸೃಷ್ಟಿಯಾಗಿದೆ.

ಬಿಳೇಕಹಳ್ಳಿ ಬಳಿ ಇರುವ ಎಸ್‌ಎನ್‌ಎನ್‌ ರಾಜ್‌ ಲೇಕ್‌ ವ್ಯೂವ್‌ ರೆಸಿಡೆನ್ಸ್‌ ಅಪಾರ್ಟ್‌ಮೆಂಟ್‌ನಲ್ಲಿ 456 ಪ್ಲಾರ್ಟ್‌ಗಳಿವೆ. ಅಪಾರ್ಟ್‌ಮೆಂಟ್‌ನಲ್ಲಿ ಡಿ.6ರಂದು ಡೆಹರಾಡೂನ್‌ನಿಂದ ಆಗಮಿಸಿದ್ದವರ ಜೊತೆ ಎರಡು ಭರ್ಜರಿ ಪಾರ್ಟಿಗಳನ್ನು ಆಯೋಜಿಸಲಾಗಿತ್ತು. ಈ ಪೈಕಿ ಸೋಂಕು ಲಕ್ಷಣಗಳು ಕಾಣಿಸಿಕೊಂಡ ಕೆಲವರು ಸ್ವಯಂ ಪ್ರೇರಿತವಾಗಿ ಕೊರೋನಾ ಪರೀಕ್ಷೆಗೆ ಒಳಗಾಗಿದ್ದರು. ಈ ವೇಳೆ ಫೆ.11ರಂದು 7 ಮಂದಿ, ಫೆ.12ರಂದು 17 ಮಂದಿಯಲ್ಲಿ ಕೋವಿಡ್‌ ಸೋಂಕು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆತಂಕಗೊಂಡು ಅಪಾರ್ಟ್‌ಮೆಂಟ್‌ಗೆ ಧಾವಿಸಿದ್ದ ಬಿಬಿಎಂಪಿ ಅಧಿಕಾರಿಗಳು ಅಪಾರ್ಟ್‌ಮೆಂಟ್‌ನ ಎಲ್ಲರನ್ನೂ ಸಾಮೂಹಿಕವಾಗಿ ಪರೀಕ್ಷೆಗೆ ಒಳಪಡಿಸಿದ್ದರು. ಈ ವೇಳೆ ಮಂಗಳವಾರದ ವೇಳೆಗೆ ಬರೋಬ್ಬರಿ 103 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಬುಧವಾರ ಮತ್ತೆ ಆರು ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

ಇವರೆಲ್ಲರೂ ರೋಗ ಲಕ್ಷಣ ರಹಿತ ಸೋಂಕಿತರಾಗಿದ್ದು, ಎಲ್ಲರನ್ನು ಅಪಾರ್ಟ್‌ಮೆಂಟ್‌ನಲ್ಲಿಯೇ ಐಸೋಲೇಷನ್‌ ಮಾಡಿ ನಿಗಾ ವಹಿಸಲಾಗುತ್ತಿದೆ ಎಂದು ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ರಾಮಕೃಷ್ಣ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಕೊರೋನಾ ಸೋಂಕಿತರ ಸಂಖ್ಯೆಯಲ್ಲಿ ದಿಢೀರ್‌ ಏರಿಕೆ: ಜನರಲ್ಲಿ ಹೆಚ್ಚಿದ ಆತಂಕ..!

ನಗ​ರ​ದಲ್ಲಿ ಮತ್ತೆ ಕ್ಲಸ್ಟರ್‌ ಮಾದರಿ ಸೋಂಕು?

ನಗ​ರ​ದಲ್ಲಿ ಮತ್ತೆ ಒಂದು ನಿರ್ದಿಷ್ಟಪ್ರದೇ​ಶ​ದಲ್ಲಿ ಹೆಚ್ಚು ಸೋಂಕು ಪ್ರಕ​ರ​ಣ​ ವರದಿಯಾಗುವ ಮೂಲಕ ಕ್ಲಸ್ಟ​ರ್‌ ಮಾದರಿ ಸೋಂಕು ಭೀತಿ ಆವರಿಸಿದೆ. ಕಳೆದ ಆರು ತಿಂಗಳ ಹಿಂದೆ ಪಾದ​ರಾ​ಯ​ನ​ಪುರ ಹಾಗೂ ಹೊಂಗ​ಸಂದ್ರ ಸೇರಿ​ದಂತೆ ಕೆಲವು ನಿರ್ದಿಷ್ಟಪ್ರದೇ​ಶ​ದಲ್ಲಿ ಹೆಚ್ಚು ಸೋಂಕು ಕಾಣಿ​ಸಿ​ಕೊಂಡು ನಗ​ರದ ವಿವಿಧ ಭಾಗ​ಗ​ಳ​ಲ್ಲೂ ಸೋಂಕು ಹಬ್ಬು​ವು​ದಕ್ಕೆ ಕಾರ​ಣ​ವಾ​ಗಿತ್ತು.

ಈಗ ಜನ ​ಜೀ​ವನ ಬಹು​ತೇಕ ಸಹಜ ಸ್ಥಿತಿಗೆ ತಲು​ಪಿದ್ದು, ಈಗ ಕ್ಲಸ್ಟರ್‌ ಮಾದರಿ ಸೋಂಕು ಕಾಣಿ​ಸಿ​ಕೊಂಡರೆ ಕೊರೋನಾ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚು. ಈ ರೀತಿಯ ಯಾವುದೇ ಸೋಂಕಿನ ಲಕ್ಷ​ಣ​ಗಳ ಬಗ್ಗೆ ಸಾರ್ವ​ಜ​ನಿ​ಕರು ನಿರ್ಲಕ್ಷ್ಯ ವಹಿ​ಸದೆ ಎಚ್ಚ​ರಿಕೆ ವಹಿ​ಸ​ಬೇಕು ಎಂದು ಆರೋಗ್ಯ ವಿಭಾ​ಗದ ಅಧಿ​ಕಾ​ರಿಗಳು ಹೇಳಿದ್ದಾರೆ.

ಸ್ವಯಂ ಸೇವಕರ ನೇಮಕ:

ಅಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ಅಗತ್ಯ ವಸ್ತುಗಳಾದ ಹಾಲು, ಹಣ್ಣು, ತರಕಾರಿಯನ್ನು ಸಗಟು ಮಾದರಿಯಲ್ಲಿ ದಿನಕ್ಕೆ ಒಂದು ಬಾರಿ ಪೂರೈಕೆ ಮಾಡಲಾಗುತ್ತಿದೆ. ಅಪಾರ್ಟ್‌ಮೆಂಟ್‌ ಒಳ ಭಾಗದಲ್ಲಿಯೇ ಪ್ರಾವಿಜನ್‌ ಸ್ಟೋರ್‌, ಹಣ್ಣು-ತರಕಾರಿ ಮಳಿಗೆ ಇರುವುದರಿಂದ ಅಪಾರ್ಟ್‌ಮೆಂಟ್‌ ನಿವಾಸಿಗಳು ಅಲ್ಲಿಂದ ಖರೀದಿ ಮಾಡುತ್ತಿದ್ದಾರೆ. ಔಷಧಿ ಬೇಕಾದರೆ ಮಾತ್ರ ಬಿಬಿಎಂಪಿ ಪೂರೈಕೆ ಮಾಡುತ್ತಿದೆ. ಅಗತ್ಯ ಸೇವೆಗೆ ಸ್ವಯಂ ಸೇವಕರ ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದು ರಾಮಕೃಷ್ಣ ಮಾಹಿತಿ ನೀಡಿದರು.

ಜಿಮ್‌, ಈಜುಕೊಳ ಸ್ಯಾನಿಟೈಸ್‌; ಬಂದ್‌

ಅಪಾರ್ಟ್‌ಮೆಂಟ್‌ ಒಳ ಭಾಗದಲ್ಲಿರುವ ವ್ಯಾಯಾಮ ಶಾಲೆ (ಜಿಮ್‌), ಈಜು ಕೊಳ ಹಾಗೂ ಸಭೆ ಸಮಾರಂಭ ಸೇರುವ ಪಾರ್ಟಿ ಹಾಲ್‌ಗಳನ್ನು ಸಂಪೂರ್ಣವಾಗಿ ಬಂದ್‌ ಮಾಡಲಾಗಿದೆ. ಅನಗತ್ಯವಾಗಿ ಅಪಾರ್ಟ್‌ಮೆಂಟ್‌ ನಿವಾಸಿಗಳು ಓಡಾಡದಂತೆ ನಿರ್ಬಂಧ ವಿಧಿಸಲಾಗಿದೆ. ಸಿಸಿ ಟಿವಿ ಮೂಲಕ ನಿಗಾ ವಹಿಸಲಾಗುತ್ತಿದ್ದು, ತುರ್ತು ಚಿಕಿತ್ಸೆಗೆ ಬೇಕಾದ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದು ರಾಮಕೃಷ್ಣ ವಿವರಿಸಿದರು.

ಅಪಾರ್ಟ್‌ಮೆಂಟ್‌ ಒಳಗಿರುವ ಸ್ವಿಮ್ಮಿಂಗ್‌ ಪೂಲ್‌, ಒಳ ಕ್ರೀಡಾಂಗಣ, ಸೂಪರ್‌ ಮಾರ್ಕೆಟ್‌ಗಳನ್ನು ಸ್ಯಾನಿಟೈಸ್‌ ಮಾಡಿ, ಸೀಲ್‌ಡೌನ್‌ ಮಾಡಲಾಗಿದೆ ಎಂದು ಡಾ. ಸವಿತಾ ತಿಳಿಸಿದರು. ಅಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸಲಾಗಿದೆ ಹಾಗೂ ಆರೋಗ್ಯ ಸಲಹೆ ಸೂಚನೆಗಳನ್ನು ನೀಡಲಾಯಿತು ಎಂದು ಡಾ. ನಾಗೇಂದ್ರ ಹೇಳಿದರು.