ಎಸ್‌ಎನ್‌ಎನ್ ರಾಜ್ ಲೇಕ್ ವ್ಯೂ ಅಪಾರ್ಟ್‌ಮೆಂಟ್‌ನಲ್ಲಿ ಸೋಂಕಿತರ ಸಂಖ್ಯೆ ಏಕಾಏಕಿ 103 ಏರಿಕೆ| ಮನೆಯಿಂದ ಹೊರಬರಲು ಸ್ಥಳೀಯರ ಹಿಂದೇಟು| ಸ್ಥಳದಲ್ಲೇ ಬಿಬಿಎಂಪಿ ಅಧಿಕಾರಿಗಳ ಮೊಕ್ಕಾಂ| ಅಪಾರ್ಟ್‌ಮೆಂಟ್ ಸುತ್ತಮುತ್ತಲ ಪ್ರದೇಶಗಳ ಸ್ಯಾನಿಟೈಸ್| ಅಪಾರ್ಟ್‌ಮೆಂಟ್‌ಗೆ ಹೊರಗಿನವರ ಪ್ರವೇಶ ನಿಷೇಧ|
ಬೆಂಗಳೂರು/ಬೊಮ್ಮನಹಳ್ಳಿ(ಫೆ.17): ಇಲ್ಲಿನ ಎಸ್‌ಎನ್‌ಎನ್ ರಾಜ್ ಲೇಕ್ ವ್ಯೂ ರೆಸಿಡೆನ್ಸಿ ಅಪಾರ್ಟ್‌ಮೆಂಟ್‌ನ 103 ಮಂದಿಗೆ ಕೊರೋನಾ ಸೋಂಕಿರುವುದು ದೃಢ ಪಟ್ಟ ಬೆನ್ನಲ್ಲೇ, ಬೊಮ್ಮನಹಳ್ಳಿ ಸುತ್ತಮುತ್ತಲ ನಿವಾಸಿಗಳಲ್ಲಿ ಆತಂಕ ಮಡುಗಟ್ಟಿದೆ. ಮನೆಯಿಂದ ಹೊರಬರಲು ಭಯ ಪಡುತ್ತಿದ್ದಾರೆ.
"
ಒಂದೆಡೆ ದಿನ ಕಳೆದಂತೆ ಕೊರೋನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವುದು ಮತ್ತೊಂದೆಡೆ ಕೊರೋನಾಗೆ ಲಸಿಕೆ ಕಂಡು ಹಿಡಿದ ಹಿನ್ನೆಲೆಯಲ್ಲಿ ಕೊಂಚ ನಿರಾಳರಾಗಿದ್ದ ಮಂದಿ ಬೆಚ್ಚಿ ಬಿದ್ದಿದ್ದಾರೆ. ಅದರಲ್ಲೂ ಮಡಿವಾಳ ಕೆರೆಗೆ ಅಂಟಿಕೊಂಡಿರುವ ಅಪಾರ್ಟ್‌ಮೆಂಟ್‌ನಲ್ಲಿ ಏಕಾಏಕಿ ಕೊರೋನಾ ಸೋಂಕು ಪ್ರಕರಣಗಳು ಉಲ್ಬಣಿಸಿರುವುದು ಕಂಡು ಸ್ಥಳೀಯರಲ್ಲಿ ಭೀತಿ ಶುರುವಾಗಿದೆ. ಅಪಾರ್ಟ್‌ಮೆಂಟ್ ವಾಸಿಗಳು ಮಾರುಕಟ್ಟೆ, ಪಾರ್ಕ್, ಅಂಗಡಿಗಳು ಎಲ್ಲೆಲ್ಲಿ ಓಡಾಡಿದ್ದಾರೋ?, ಆಟೋ, ಟ್ಯಾಕ್ಸಿ ಯಾವುದನ್ನು ಅಪಾರ್ಟ್‌ಮೆಂಟ್ ವಾಸಿಗಳು ಬಳಿಸಿದ್ದಾರೋ. ನಾವೆಲ್ಲಿ ಅವರ ಸಂಪರ್ಕಕ್ಕೆ ಬಂದಿದ್ದೇವು ಎಂದು ಅವರ ಎದೆಬಡಿತ ಜೋರಾಗಿದೆ.
ಮಹಾಮಾರಿ ಕೊರೋನಾಗೆ ಹಿರಿಯರೇ ಹೆಚ್ಚು ಬಲಿ..!
ಪ್ರವೇಶ ಬಂದ್:
ಇನ್ನು ಸೋಂಕಿತರ ಸಂಖ್ಯೆ 103ಕ್ಕೆ ಏಕಾಏಕಿ ಏರಿಕೆಯಾದ ಹಿನ್ನೆಲೆಯಲ್ಲಿ ಅಪಾರ್ಟ್‌ಮೆಂಟ್ ಒಳಕ್ಕೆ ಹೊರಗಿನವರ ಪ್ರವೇಶ ನಿರಾಕರಿಸಲಾಗಿದೆ. ಅಪಾರ್ಟ್‌ಮೆಂಟ್ ವಾಸಿಗಳು ಆಚೆ ಹೋಗುವುದಕ್ಕೂ ನಿರ್ಬಂಧ ವಿಧಿಸಲಾಗಿದೆ. ಸೋಂಕು ಲಕ್ಷಣ ಕಾಣಿಸಿಕೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಉಳಿದವರನ್ನು ಅಪಾರ್ಟ್‌ಮೆಂಟ್‌ನಲ್ಲಿಯೇ ಐಸೋಲೇಷನ್ ಮಾಡಲಾಗಿದೆ. ಆದರೆ, ಇಡೀ ಅಪಾರ್ಟ್‌ಮೆಂಟ್ ಅನ್ನು ಸೀಲ್‌ಡೌನ್ ಮಾಡುವ ಯಾವುದೇ ನಿರ್ಧಾರ ಸದ್ಯಕ್ಕಿಲ್ಲ. ಅಪಾರ್ಟ್‌ಮೆಂಟ್ ನಿವಾಸಿಗಳಿಗೆ ಬೇಕಾದ ಅಗತ್ಯ ವಸ್ತು ಪೂರೈಕೆಗೆ ವ್ಯವಸ್ಥೆ ಮಾಡಲಾಗಿದೆ. ಅಪಾರ್ಟ್‌ಮೆಂಟ್‌ನ ಸುತ್ತಮುತ್ತಲ ಪ್ರದೇಶ ಹಾಗೂ ರಸ್ತೆಯಲ್ಲಿ ಬಿಬಿಎಂಪಿಯಿಂದ ಸ್ಯಾನಿಟೈಸ್ ಮಾಡಲಾಗಿದೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಂಟಿ ಆಯುಕ್ತರ ಸಭೆ
ಸೋಂಕಿತರ ಸಂಖ್ಯೆ ಮತ್ತಷ್ಟುಹೆಚ್ಚಾಗುವ ಆತಂಕದ ಹಿನ್ನೆಲೆಯಲ್ಲಿ ಬೊಮ್ಮನಹಳ್ಳಿ ವಲಯದ ಬಿಬಿಎಂಟಿ ಜಂಟಿ ಆಯುಕ್ತ ರಾಮಕೃಷ್ಣ ಅವರು ಅಪಾರ್ಟ್‌ಮೆಂಟ್‌ನ ಪ್ರಮುಖರ ಜತೆ ಮಂಗಳವಾರ ಸಭೆ ನಡೆಸಿದ್ದಾರೆ. ಇದೇ ವೇಳೆ ಸೋಂಕು ಹಬ್ಬದಂತೆ ಕೈಗೊಳ್ಳಬೇಕಾದ ಕ್ರಮ, ಅಪಾರ್ಟ್‌ಮೆಂಟ್ ನಿವಾಸಿಗಳು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.ಇನ್ನು ಬಿಬಿಎಂಪಿಯ ಅಧಿಕಾರಿಗಳು ಮತ್ತು ಆರೋಗ್ಯ ಅಧಿಕಾರಿಗಳು ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದು, ಸೋಂಕಿತರ ಆರೋಗ್ಯದ ಬಗ್ಗೆ ನಿಗಾ ವಹಿಸುತ್ತಿದ್ದಾರೆ. ಜತೆಗೆ ತುರ್ತು ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Feb 17, 2021, 11:57 AM IST