ಬೆಂಗಳೂರಿಗರೇ ಎಚ್ಚರ ಎಚ್ಚರ ಅಪಾಯ ನಿಮ್ಮೆದುರಿಗೆ ಇದೆ. ಎಚ್ಚೆತ್ತುಕೊಳ್ಳದಿದ್ದರೆ ಮಹಾಮಾರಿ ಹಿಡಿತಕ್ಕೆ ಸಿಲುಕುವುದು ಖಚಿತ. ಬೆಂಗಳೂರಲ್ಲಿ ಕೊರೋನಾ ಅಟ್ಟಹಾಸ ಶುರುವಾಗಿದ್ದು ಸಾವಿನ ಸಂಖ್ಯೆಯೂ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದೆ.
ಬೆಂಗಳೂರು (ಏ.23): ಮಾರಕ ಕೊರೋನಾ ರಾಜಧಾನಿ ಬೆಂಗಳೂರು ನಗರವನ್ನು ತಲ್ಲಣಗೊಳಿಸಿದ್ದು, ನಿತ್ಯ ಪ್ರಕರಣಗಳ ಸಂಖ್ಯೆ ದಿನೇ ದಿನೇ ದಾಖಲೆ ಮಟ್ಟದಲ್ಲಿ ಹೆಚ್ಚಳವಾಗುತ್ತಿದೆ. ಗುರುವಾರ 15,244 ಮಂದಿಗೆ ಸೋಂಕು ತಗಲುವ ಮೂಲಕ ಸಾರ್ವಕಾಲಿಕ ದಾಖಲೆ ಸೃಷ್ಟಿಯಾಗಿದೆ.
ಇದೇ ವೇಳೆ 68 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಸೋಂಕು ಯಾವ ಮಟ್ಟದಲ್ಲಿ ಏರಿಕೆಯಾಗುತ್ತಿದೆ ಎಂದರೆ, ಬೆಂಗಳೂರು ನಿವಾಸಿಗಳಲ್ಲಿ ಪ್ರತಿ 70 ಮಂದಿಗೆ ಸರಾಸರಿ ಒಬ್ಬರು ಸೋಂಕಿತರಾಗುತ್ತಿದ್ದಾರೆ ಮತ್ತು ಪ್ರತಿ ನಿಮಿಷಕ್ಕೆ 10.58 ಮಂದಿ ಸೋಂಕುಪೀಡಿತರಾಗುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
2011ರ ಜನಗಣತಿ ಪ್ರಕಾರ ಬೆಂಗಳೂರು ನಗರದಲ್ಲಿ 87,49,944 ಮಂದಿ ವಾಸವಿದ್ದಾರೆ. ಬೆಂಗಳೂರು ಸುತ್ತಮುತ್ತಲ ಹಳ್ಳಿಗಳೂ ಸೇರಿ ಒಟ್ಟು ಜನಸಂಖ್ಯೆ 96,27,551 ಆಗುತ್ತದೆ. ಪ್ರಸ್ತುತ ಆರೋಗ್ಯ ಇಲಾಖೆ ಮಾಹಿತಿಯಂತೆ ನಗರದಲ್ಲಿ 1,37,813 ಸಕ್ರಿಯ ಸೋಂಕಿತರು ಇದ್ದು, ಇದರ ಆಧಾರದ ಮೇಲೆ ಲೆಕ್ಕಾಚಾರ ಮಾಡಿದರೆ ಪ್ರತಿ 70 ಜನರಲ್ಲಿ ಸರಾಸರಿ ಒಬ್ಬರು ಸೋಂಕು ಹೊಂದಿರುವುದು ವೇದ್ಯವಾಗುತ್ತದೆ. ಗುರುವಾರ ಪತ್ತೆಯಾಗಿರುವ 15,244 ಹೊಸ ಸೋಂಕಿತ ಪ್ರಕರಣಗಳ ಅಂಕಿ-ಅಂಶದ ಪ್ರಕಾರ ನಗರದಲ್ಲಿ ಪ್ರತಿ ನಿಮಿಷಕ್ಕೆ 10.58 ಮಂದಿ ಸೋಂಕಿತರಾಗುತ್ತಿದ್ದಾರೆ.
ನ್ಯೂಸ್ ಅವರ್; ನಿಲ್ಲದ ಕೊರೋನಾ ಅಬ್ಬರ, ಪಾಸಿಟಿವ್, ನೆಗೆಟಿವ್ ರಿಪೋರ್ಟ್ ಕೈಚಳಕ ..
ಸಕ್ರಿಯ ಪ್ರಕರಣಗಳ ಸಂಖ್ಯೆ 1,37,813ಕ್ಕೆ ಏರಿಕೆಯಾಗಿದ್ದು ಒಟ್ಟು ಸೋಂಕಿತರ ಸಂಖ್ಯೆ 5,98,919ಕ್ಕೆ ಹೆಚ್ಚಳವಾಗಿದೆ. ಅಂತೆಯೇ 2257 ಮಂದಿ ಬಿಡುಗಡೆಯಾಗಿದ್ದು 4,55,655 ಮಂದಿ ಈವರೆಗೂ ಸೋಂಕಿನಿಂದ ಗುಣಮುಖರಾಗಿದ್ದಾರೆ. ಗುರುವಾರ 68 ಮಂದಿ ಕೊರೋನಾ ಸೋಂಕಿತರು ಮೃತಪಟ್ಟಿದ್ದು, ಈವರೆಗೆ ಸಾವನ್ನಪ್ಪಿದವರ ಸಂಖ್ಯೆ 5450ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರವೊಂದರಲ್ಲೇ 243 ಮಂದಿ ಸೋಂಕಿತರು ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
