Asianet Suvarna News Asianet Suvarna News

Covid 19 Spike: ಬೆಂಗ್ಳೂರಲ್ಲಿ ಶೇ.9.8ಕ್ಕೆ ಏರಿದ ಪಾಸಿಟಿವಿಟಿ ದರ: ಹೆಚ್ಚಾದ ಆತಂಕ

*  ನಿನ್ನೆ ಒಂದೇ ದಿನ 72594 ಮಂದಿಗೆ ಕೊರೋನಾ ಟೆಸ್ಟ್‌
*  7113 ಪಾಸಿಟಿವ್‌ ಕೇಸ್‌ ಪತ್ತೆ
*  224 ದಿನದ ಗರಿಷ್ಠ
 

Corona Positivity Rate Increased to 9.8 Percent in Bengaluru grg
Author
Bengaluru, First Published Jan 9, 2022, 4:31 AM IST

ಬೆಂಗಳೂರು(ಜ.09):  ನಗರದಲ್ಲಿ ಕೊರೋನಾ(Coronavirus) ಸೋಂಕಿತ ಪ್ರಕರಣಗಳ ಸಂಖ್ಯೆ ಶನಿವಾರವೂ ಏರಿಕೆಯಾಗಿದ್ದು ಒಂದೇ ದಿನ 7113 ಜನರಲ್ಲಿ ಸೋಂಕು ಪತ್ತೆಯಾಗಿದೆ. ಪಾಸಿಟಿವಿಟಿ ದರ(Positivity Rate) ಬರೋಬ್ಬರಿ ಶೇ.9.8ರಷ್ಟು ದಾಖಲಾಗಿದೆ.

ಒಟ್ಟು 72,594 ಜನರಿಗೆ ಕೋವಿಡ್‌ ಪರೀಕ್ಷೆ(Covid Test) ಮಾಡಲಾಗಿದ್ದು, ಈ ಪೈಕಿ 7113 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮೂವರು ಸೋಂಕಿಗೆ ಬಲಿಯಾಗಿದ್ದು, ಇದುವರೆಗೆ ಮೃತಪಟ್ಟವರ(Death) ಸಂಖ್ಯೆ 16420ಕ್ಕೆ ಏರಿಕೆಯಾಗಿದೆ. ಹೊಸ ಸೋಂಕಿತ ಪ್ರಕರಣಗಳ ಪತ್ತೆಯಿಂದ ಈವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 12.90 ಲಕ್ಷಕ್ಕೆ ಹೆಚ್ಚಳವಾಗಿದೆ. ಒಂದೇ ದಿನ 323 ಮಂದಿ ಗುಣಮುಖರಾಗಿದ್ದು, ಇದುವರೆಗೆ 12.41 ಲಕ್ಷ ಜನರು ಸೋಂಕಿನಿಂದ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ ನಗರದಲ್ಲಿ(Bengaluru) ಸಕ್ರಿಯ ಪ್ರಕರಣಗಳ ಸಂಖ್ಯೆ 32,157ಕ್ಕೆ ಏರಿಕೆಯಾಗಿದೆ.

Covid 19 Spike: ಕಿತ್ತೂರು ರಾಣಿ ಚನ್ನಮ್ಮ ಬಾಲಕಿಯರ ಸೈನಿಕ ವಸತಿ ಶಾಲೆಯಲ್ಲಿ ಕೊರೋನಾ ಬ್ಲಾಸ್ಟ್!

224 ದಿನದ ಗರಿಷ್ಠ:

ಕೋವಿಡ್‌ ಎರಡನೇ ಅಲೆಯ ಸಂದರ್ಭದಲ್ಲಿ ಮೇ 23ರಂದು 7429 ಪ್ರಕರಣಗಳು ಪತ್ತೆಯಾಗಿದ್ದು ಈವರೆಗಿನ ಅತ್ಯಧಿಕ ಸೋಂಕಿತ ಪ್ರಕರಣಗಳಾಗಿತ್ತು. ಆ ನಂತರ ಸೋಂಕಿತ ಪ್ರಕರಣಗಳಲ್ಲಿ ಗಣನೀಯವಾಗಿ ಇಳಿಕೆಯಾಗಿತ್ತು. ಇದಾಗಿ ಏಳು ತಿಂಗಳು ಕಳೆದ ನಂತರ ಬರೋಬ್ಬರಿ 224 ದಿನಗಳ ಬಳಿಕ ಮತ್ತೆ 7 ಸಾವಿರಕ್ಕೂ ಅಧಿಕ ಸೋಂಕಿತರು ಪತ್ತೆಯಾಗಿದ್ದು, ಶನಿವಾರ 7113 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಮುಂದಿನ ದಿನಗಳಲ್ಲಿ ಈ ಸಂಖ್ಯೆಯೂ ಹೆಚ್ಚುವ ಸಾಧ್ಯತೆ ಇದ್ದು 10 ಸಾವಿರದ ಗಡಿ ದಾಟಲಿದೆ ಎಂದು ಆರೋಗ್ಯ ಇಲಾಖೆ(Department of Health) ಮೂಲಗಳು ಮಾಹಿತಿ ನೀಡಿವೆ.

ಪಾಲಿಕೆ(BBMP) ವ್ಯಾಪ್ತಿಯ ಹತ್ತು ವಾರ್ಡ್‌ಗಳಲ್ಲಿ ನಿತ್ಯ ಪತ್ತೆಯಾಗುತ್ತಿರುವ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು ಬೆಳ್ಳಂದೂರು ಒಂದರಲ್ಲಿಯೇ 120 ಮಂದಿ ಸೋಂಕಿತರು ಪತ್ತೆಯಾಗಿದ್ದಾರೆ. ಹಗದೂರು ವಾರ್ಡ್‌ 58, ದೊಡ್ಡನೆಕ್ಕುಂದಿ 52, ವರ್ತೂರು 44, ಎಚ್‌ಎಸ್‌ಆರ್‌ ಲೇಔಟ್‌ 39, ನ್ಯೂತಿಪ್ಪಸಂದ್ರ 37, ಬೇಗೂರು 34, ಕೋರಮಂಗಲ 31, ಹೊರಮಾವು 31 ಮತ್ತು ಶಾಂತಲಾನಗರ ವಾರ್ಡ್‌ನಲ್ಲಿ 30 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ ಎಂದು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮಹದೇವಪುರ ಒಂದರಲ್ಲೇ 116 ಕಂಟೈನ್ಮೆಂಟ್‌:

ಎಂಟು ವಲಯಗಳಲ್ಲಿ ಸೋಂಕಿತ ಪ್ರಕರಣಗಳೊಂದಿಗೆ ಮೈಕ್ರೋ ಕಂಟೈನ್ಮೆಂಟ್‌(Micro Containment) ವಲಯಗಳ ಸಂಖ್ಯೆಯೂ ಏರಿಕೆಯಾಗಿದ್ದು ಬರೋಬ್ಬರಿ 346 ಕಂಟೈನ್ಮೆಂಟ್‌ಗಳನ್ನು ಗುರುತಿಸಲಾಗಿದೆ. ಮಹದೇವಪುರ ವಲಯವೊಂದರಲ್ಲೇ 116 ಕಂಟೈನ್ಮೆಂಟ್‌ಗಳನ್ನು ಮಾಡಲಾಗಿದೆ. ಬೊಮ್ಮನಹಳ್ಳಿ 90, ದಕ್ಷಿಣ 37, ಯಲಹಂಕ 33, ಪಶ್ಚಿಮ 33, ಪೂರ್ವ 29, ದಾಸರಹಳ್ಳಿ 5 ಮತ್ತು ರಾಜರಾಜೇಶ್ವರಿ ನಗರ ವಲಯದಲ್ಲಿ 3 ಕಂಟೈನ್ಮೆಂಟ್‌ಗಳನ್ನು ಮಾಡಲಾಗಿದೆ ಎಂದು ಬಿಬಿಎಂಪಿ ವರದಿ ಮಾಹಿತಿ ನೀಡಿದೆ.

Omicron Threat: 'ಕೇಸ್‌ಗಳ ಸ್ಫೋಟ ನೋಡಿ ಶಾಲೆ ಬಂದ್‌, ಲಾಕ್‌ಡೌನ್‌ ಮಾಡಬೇಡಿ'

ವಿದೇಶದಿಂದ ಬಂದ 19 ಪ್ರಯಾಣಿಕರಿಗೆ ವೈರಸ್‌

ವಿದೇಶಗಳಿಂದ(Foreign) ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶನಿವಾರ ಬಂದಿಳಿದ ಪ್ರಯಾಣಿಕರ ಪೈಕಿ 19 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಈ ಮೂಲಕ ವಿದೇಶಗಳಿಂದ ರಾಜ್ಯಕ್ಕೆ(Karnataka) ಆಗಮಿಸಿದವರ ಪೈಕಿ ಸೋಂಕು ದೃಢಪಟ್ಟವರ ಸಂಖ್ಯೆ 158ಕ್ಕೆ ಏರಿಕೆಯಾಗಿದೆ.

ಡಿ.1ರಿಂದ ಜ.7ರ ವರೆಗೂ 139 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಶನಿವಾರ ದುಬೈ, ಶಾರ್ಜಾ, ದೋಹಾ, ಕುವೈತ್‌ ಹಾಗೂ ಜರ್ಮನಿಯಿಂದ ಬಂದ ಪ್ರಯಾಣಿಕರನ್ನು ಸೋಂಕು ಪರೀಕ್ಷೆಗೊಳಪಡಿಸಿದ್ದು, 19 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರೆಲ್ಲರ ಗಂಟಲು ದ್ರವ ಮಾದರಿಗಳನ್ನು ವಂಶವಾಹಿ ಪರೀಕ್ಷೆಗೆ ಕಳುಹಿಸಿ, ಎಲ್ಲರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಬೆಂಗಳೂರು ಗ್ರಾಮಾಂತರ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದಿನಾಂಕ - ಸೋಂಕಿತರು

ಜ.3-1041
ಜ.4-2053
ಜ.5-3605
ಜ.6-4324
ಜ.7-6812
ಜ.8-7113
 

Follow Us:
Download App:
  • android
  • ios