ಕೋವಿಡ್ ಆಸ್ಪತ್ರೆಗೆ ಭೇಟಿ: ಕೊರೋನಾ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಿದ ಸಚಿವ ಆನಂದ ಸಿಂಗ್
ಬಳ್ಳಾರಿ(ಜು.08): ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಅವರು ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ ಸೋಂಕಿತರ ಅಹವಾಲುಗಳನ್ನು ಆಲಿಸಿ, ಆತ್ಮಸ್ಥೈರ್ಯ ತುಂಬಿದರು. ಚಿಂತೆ ಬೇಡ ತಾವು ಗುಣಮುಖರಾಗಿ ಹೊರಬರುತ್ತೀರಿ ಎಂದು ಹೇಳಿದ್ದಾರೆ.
ಇಲ್ಲಿ ಗುಣಮಟ್ಟದ ಊಟ, ಚಿಕಿತ್ಸೆ ಕೊಡಲಾಗುತ್ತಿದೆ ಮತ್ತು ಸ್ವಚ್ಛತೆಯೂ ಚೆನ್ನಾಗಿದೆ. ಆದರೆ, ಶೌಚಾಲಯ ದಿನಕ್ಕೆ ಒಂದು ಬಾರಿ ಮಾತ್ರ ಕ್ಲೀನ್ ಮಾಡಲಾಗುತ್ತಿದ್ದು, ಎರಡು ಬಾರಿ ಕ್ಲೀನ್ ಮಾಡುವಂತೆ ಸಚಿವರಲ್ಲಿ ಕೋರಿದ ಕೊರೋನಾ ಸೋಂಕಿತರು
ರೋಗಿಗಳ ಮನವಿಗೆ ಸ್ಪಂದಿಸಿದ ಸಚಿವ ಆನಂದ ಸಿಂಗ್ ಸ್ಥಳದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ ಅವರಿಗೆ ಸೂಚಿಸಿ ದಿನಕ್ಕೆ ಮೂರು ಬಾರಿ ಶೌಚಾಲಯ ಸ್ವಚ್ಛಗೊಳಿಸಿ, ಆಹಾರದಲ್ಲಿ ಈಗಿರುವ ಗುಣಮಟ್ಟವನ್ನು ಕಾಯ್ದುಕೊಳ್ಳಿ ಎಂದು ಸೂಚಿಸಿದ್ದಾರೆ.
ನಂತರ ಸಚಿವರು ಜಿಲ್ಲಾಶಸ್ತ್ರಚಿಕಿತ್ಸಕ ಬಸರೆಡ್ಡಿ ಅವರ ಕೊಠಡಿಯಲ್ಲಿ ಎಲ್ಲ ವೈದ್ಯರು ಹಾಗೂ ಅಧಿಕಾರಿಗಳ ಸಭೆ ನಡೆಸಿದರು.
ಸಭೆಯಲ್ಲಿ ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಜಿಲ್ಲಾಡಳಿತದಿಂದ ಹಾಗೂ ಸರ್ಕಾರದಿಂದಾಗ ಬೇಕಾಗುವ ಸಹಾಯ- ಸಹಕಾರಗಳ ಮಾಹಿತಿಯನ್ನು ವಿವರವಾಗಿ ಪಡೆದರು ಮತ್ತು ವೈದ್ಯರಿಗೆ ಆತ್ಮಸ್ಥೈರ್ಯ ತುಂಬಿದರು.
ಇಷ್ಟು ದಿನಗಳ ಕಾಲ ಸಭೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದೆ ಮತ್ತು ಅಲ್ಲಿಯೇ ಅನೇಕ ಸಲಹೆ- ಸೂಚನೆಗಳನ್ನು ಅಧಿಕಾರಿಗಳಿಗೆ ನೀಡುತ್ತಿದ್ದೆ. ಅವುಗಳ ಅನುಷ್ಠಾನ ಸಮರ್ಪಕವಾಗಿ ಆಗುತ್ತಿವೆಯೋ ಇಲ್ಲವೋ ಎಂಬುದನ್ನು ಪರಿಶೀಲಿಸಲು ಹಾಗೂ ಕೊರೋನಾ ಸೋಂಕಿತರಿಗೆ ಧೈರ್ಯ ತುಂಬಲು ಭೇಟಿ ನೀಡಿ ಪರಿಶೀಲಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಎಸ್ಪಿ ಸಿ.ಕೆ. ಬಾಬಾ, ಜಿಪಂ ಸಿಇಒ ಕೆ. ನಿತೀಶ್, ವಿಮ್ಸ್ ನಿರ್ದೇಶಕ ಡಾ. ದೇವಾನಂದ, ಅಪರ ಜಿಲ್ಲಾಧಿಕಾರಿ ಪಿ.ಎಸ್. ಮಂಜುನಾಥ, ಡಿಎಚ್‌ಒ ಡಾ. ಜನಾರ್ಧನ್ ಮತ್ತಿತರರು ಇದ್ದರು.