ಲಸಿಕೆ ಪಡೆದ ಮೂರೇ ದಿನಕ್ಕೆ ಸೋಂಕು: ಚಿಕಿತ್ಸೆ ಸಿಗದೆ ಮಹಿಳೆ ಸಾವು
ಲಸಿಕೆ ಪಡೆದ ಮಹಿಳೆಗೆ ಜ್ವರ ಬಂದಿದ್ದು, ಮೂರು ದಿನ ಕಳೆದರೂ ಕಡಿಮೆಯಾಗಿರಲಿಲ್ಲ| ಕೊರೋನಾ ಸೋಂಕು ಪರೀಕ್ಷೆ ಮಾಡಿಸಿದಾಗ ಸೋಂಕು ದೃಢ| ಬಿಬಿಎಂಪಿ ಸಹಾಯವಾಣಿಗೆ ಹಲವು ಬಾರಿ ಕರೆ ಮಾಡಿದರೂ ಸ್ಪಂದನೆ ಸಿಗಲಿಲ್ಲ| ಆಸ್ಪತ್ರೆಗಳಿಗೆ ಅಲೆದಾಡಿದರೂ ಬೆಡ್ ಸಿಗಲಿಲ್ಲ. ಕಡೆಗೆ ಮನೆಯಲ್ಲೇ ಮೃತಪಟ್ಟ ಮಹಿಳೆ|
ಬೆಂಗಳೂರು(ಏ.23): ಕೊರೋನಾ ಲಸಿಕೆ ಪಡೆದ ಮೂರೇ ದಿನಕ್ಕೆ ಕೊರೋನಾ ಸೋಂಕಿಗೆ ತುತ್ತಾಗಿದ್ದ 56 ವರ್ಷದ ಮಹಿಳೆ ಆಸ್ಪತ್ರೆಯಲ್ಲಿ ಬೆಡ್ ಸಿಗದೆ ಅಸುನೀಗಿರುವ ದಾರುಣ ಘಟನೆ ನಗರದಲ್ಲಿ ನಡೆದಿದೆ.
ಗಿರಿನಗರದ ನಿವಾಸಿಯಾದ ಮೃತ ಮಹಿಳೆ ಕೊರೋನಾ ಲಸಿಕೆ ಪಡೆದಿದ್ದರು. ಲಸಿಕೆ ಪಡೆದ ಹಿನ್ನೆಲೆಯಲ್ಲಿ ಜ್ವರ ಬಂದಿದ್ದು, ಮೂರು ದಿನ ಕಳೆದರೂ ಕಡಿಮೆಯಾಗಿರಲಿಲ್ಲ. ಬಳಿಕ ಕೊರೋನಾ ಸೋಂಕು ಪರೀಕ್ಷೆ ಮಾಡಿಸಿದಾಗ ಸೋಂಕಿರುವುದು ದೃಢಪಟ್ಟಿತು. ಈ ಸಂದರ್ಭದಲ್ಲಿ ಬಿಬಿಎಂಪಿ ಸಹಾಯವಾಣಿಗೆ ಹಲವು ಬಾರಿ ಕರೆ ಮಾಡಿದರೂ ಸ್ಪಂದನೆ ಸಿಗಲಿಲ್ಲ. ಮತ್ತೊಂದೆಡೆ ಆಸ್ಪತ್ರೆಗಳಿಗೆ ಅಲೆದಾಡಿದರೂ ಬೆಡ್ ಸಿಗಲಿಲ್ಲ. ಕಡೆಗೆ ಮನೆಯಲ್ಲೇ ಮೃತಪಟ್ಟರು ಎಂದು ಮೃತರ ಅಳಿಯ ವಿನಯ್ ಕಣ್ಣೀರಿಟ್ಟರು.
ಸೋಂಕಿನ ಭಯಕ್ಕೆ ವೃದ್ಧೆ ಜತೆ ಕುಟುಂಬ ಮನೆಯಿಂದ ಹೊರಹಾಕಿದ ಮಾಲೀಕ
ಆಸ್ಪತ್ರೆಗೆ ಸೇರಿಸಲು ನೆರವಾಗಿ ಎಂದು ಬಿಬಿಎಂಪಿಗೆ ಅಂಗಲಾಚಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಕಾಲಕ್ಕೆ ಚಿಕಿತ್ಸೆ ಸಿಕ್ಕಿದ್ದರೆ ಅತ್ತೆ ಬದುಕುಳಿಯುತ್ತಿದ್ದರು. ಈ ರೀತಿಯ ಸಾವು ಯಾರಿಗೂ ಬಾರದಿರಲಿ ಎಂದು ಗೋಳಾಡಿದರು.