ಐಸಿಯು ಬೆಡ್, ವೆಂಟಿಲೇಟರ್ ಸಿಗದೇ ನರಳಿ ನರಳಿ ಪ್ರಾಣ ಬಿಟ್ಟ ಸೋಂಕಿತ
20ಕ್ಕೂ ಹೆಚ್ಚು ಆಸ್ಪತ್ರೆ ಸಂಪರ್ಕಿಸಿದರೂ ಸಿಗಲಿಲ್ಲ ಬೆಡ್| ರಾಜ್ಯ ಸರ್ಕಾರ ತಡ ಮಾಡದೇ ಲಾಕ್‌ಡೌನ್ ಮಾಡಬೇಕು| ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿಹಾರ| ಜೀವ ಉಳಿದರೆ ಏನುಬೇಕಾದರೂ ಮಾಡಬಹುದು| ಕಣ್ಣೀರಿಡುತ್ತಾ ಸರ್ಕಾರಕ್ಕೆ ಮನವಿ ಮಾಡಿದ ಮೃತನ ಪುತ್ರ ಕೃಷ್ಣಪ್ಪ|
ಬೆಂಗಳೂರು(ಏ. 21): ನಗರದ 20ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆ ಸಂಪರ್ಕಿಸಿದರೂ ಐಸಿಯು ಬೆಡ್ ಹಾಗೂ ವೆಂಟಿಲೇಟರ್ ಸಿಗದೇ 62 ವರ್ಷದ ಕೊರೋನಾ ಸೋಂಕಿತ ನರಳಿ ನರಳಿ ಪ್ರಾಣಬಿಟ್ಟಿರುವ ಅಮಾನವೀಯ ಘಟನೆ ನಗರದಲ್ಲಿ ಜರುಗಿದೆ.
ಮೃತ ವ್ಯಕ್ತಿ ವಿದ್ಯಾರಣ್ಯಪುರ ನಿವಾಸಿಯಾಗಿದ್ದು, ಅನಾರೋಗ್ಯದ ಹಿನ್ನೆಲೆಯಲ್ಲಿ ಕಳೆದ ಶನಿವಾರ ಕೊರೋನಾ ಪರೀಕ್ಷೆ ಮಾಡಿಸಿದ್ದರು. ಭಾನುವಾರ ಬೆಳಗ್ಗೆ ವರದಿ ಬಂದಿದ್ದು, ಕೊರೋನಾ ಸೋಂಕಿರುವುದು ದೃಢಪಟ್ಟಿದೆ. ಈ ವೇಳೆ ಪುತ್ರ ಕೃಷ್ಣಪ್ಪ ಅವರು ಬಿಬಿಎಂಪಿಯ ಸಹಾಯವಾಣಿಗೆ ಕರೆ ಮಾಡಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ಬಗ್ಗೆ ವಿಚಾರಣೆ ಮಾಡಿದ್ದಾರೆ. ಆದರೆ, ಯಾವ ಆಸ್ಪತ್ರೆಯಲ್ಲಿಯೂ ಬೆಡ್ ಖಾಲಿ ಇಲ್ಲ ಎಂಬ ಉತ್ತರ ಬಂದಿದೆ.
ಖಾಸಗಿ ಆಸ್ಪತ್ರೆಗಳಿಂದ ಹೋಂ ಕ್ವಾರಂಟೈನ್ ಪ್ಯಾಕೇಜ್
ಬಳಿಕ ಎಂ.ಎಸ್.ರಾಮಯ್ಯ ಆಸ್ಪತ್ರೆ, ಬ್ಯಾಪ್ಟಿಸ್ಟ್, ಸೇವಾ ಕ್ಷೇತ್ರ ಆಸ್ಪತ್ರೆ, ಸಂತೋಷ್ ಆಸ್ಪತ್ರೆ ಸೇರಿದಂತೆ 20ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಸಂಪರ್ಕಿಸಿ ಬೆಡ್ ಬಗ್ಗೆ ವಿಚಾರಿಸಿದ್ದಾರೆ. ಇಷ್ಟುಆಸ್ಪತ್ರೆಗಳ ಪೈಕಿ ಒಂದು ಆಸ್ಪತ್ರೆಯಲ್ಲಿಯೂ ಬೆಡ್ ದೊರೆತಿಲ್ಲ. ಕೊನೆಗೆ ಕುಮಾರಸ್ವಾಮಿ ಲೇಔಟ್‌ನ ಸಾಗರ್ ಆಸ್ಪತ್ರೆಯಲ್ಲಿ ಐಸಿಯು ಬೆಡ್ ಇರುವ ವಿಚಾರ ತಿಳಿದು ತಂದೆಯನ್ನು ದಾಖಲಿಸಿದ್ದಾರೆ. ಆದರೆ, ಮಧ್ಯಾಹ್ನ 2ರ ವೇಳೆಗೆ ಈ ಆಸ್ಪತ್ರೆಯಲ್ಲಿಯೂ ಐಸಿಯು ಬೆಡ್ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಕರೆ ಮಾಡಿದ್ದಾರೆ. ಬಳಿಕ ವೈದ್ಯರು ಕರೆ ಮಾಡಿ ತುರ್ತಿದೆ ಬೇಗ ಆಸ್ಪತ್ರೆಗೆ ಬನ್ನಿ ಎಂದು ಕರೆಸಿಕೊಂಡಿದ್ದಾರೆ. ರಾತ್ರಿ 10 ಗಂಟೆ ವೇಳೆಗೆ ತಂದೆ ಐಸಿಯು ಹಾಗೂ ವೆಂಟಿಲೇಟರ್ ಸಿಗದೇ ಮೃತಪಟ್ಟಿದ್ದಾರೆ.
ಐಸಿಯು ಹಾಗೂ ವೆಂಟಿಲೇಟರ್ ಇರುವ ಬೆಡ್ ಸಿಗದೇ ತಂದೆಯನ್ನು ಕಳೆದುಕೊಂಡಿದ್ದೇನೆ. ರಾಜ್ಯ ಸರ್ಕಾರ ತಡ ಮಾಡದೇ ಲಾಕ್‌ಡೌನ್ ಮಾಡಬೇಕು. ಕೊರೋನಾ ನಿಯಂತ್ರಣಕ್ಕೆ ಲಾಕ್‌ಡೌನ್ ಒಂದೇ ಪರಿಹಾರವಾಗಿದೆ. ಜೀವ ಉಳಿದರೆ ಏನುಬೇಕಾದರೂ ಮಾಡಬಹುದು. ಈಗ ಕೆಲಸ ಸಿಗದಿರಬಹುದು. ಜೀವ ಉಳಿದರೆ ಹೇಗಾದರೂ ಬದುಕಬಹುದು ಎಂದು ಬನಶಂಕರಿಯ ವಿದ್ಯುತ್ ಚಿತಾಗಾರದ ಬಳಿ ಮೃತನ ಪುತ್ರ ಕೃಷ್ಣಪ್ಪ ಕಣ್ಣೀರಿಡುತ್ತಾ ಸರ್ಕಾರಕ್ಕೆ ಮನವಿ ಮಾಡಿದರು.