ಬೆಳಗಾವಿ(ಡಿ.23): ಕಳೆದ ಹತ್ತು ತಿಂಗಳಿಂದ ಇಡೀ ಜಗತ್ತನ್ನು ತಲ್ಲಣಗೊಳಿಸಿದ್ದ ಮಹಾಮಾರಿ ಕೊರೋನಾ ಅಟ್ಟಹಾಸ ಇಳಿಮುಖವಾಗುತ್ತಿರುವುದರಿಂದ ನಿಟ್ಟುಸಿರು ಬಿಟ್ಟಿದ್ದ ಜಿಲ್ಲೆಯ ಜನರೀಗ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ. ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ ನಾನಾ ರೂಪಗಳಲ್ಲಿ ಪಸರಿಸುತ್ತಿದೆ. ಹೀಗಾಗಿ ಅಲ್ಲಿಂದ ಬರುವವರಿಗೆ ರಾಜ್ಯ ಸರ್ಕಾರ ಕಡ್ಡಾಯ 14 ದಿನಗಳ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿದೆ. ಮಹಿಳೆಯ ವರದಿ ಬಂದಿದ್ದು ಇದೀಗ ವರದಿ ನೆಗೆಟಿವ್‌ ಬಂದಿದೆ. 

ಇವೆಲ್ಲದರ ನಡುವೆ ಲಂಡನ್‌ನಿಂದ ಮಹಿಳೆಯೊಬ್ಬಳು ಬೆಂಗಳೂರಿನಿಂದ ಬೆಳಗಾವಿಗೆ ಬಂದಿರುವ ಮಾಹಿತಿ ಲಭ್ಯವಾಗಿದೆ. ಬೆಳಗಾವಿಗೆ ಆಗಮಿಸಿದ್ದ 32 ವರ್ಷದ ಮಹಿಳೆ ನಗರದ ಖಡೇಬಜಾರ ಪ್ರದೇಶದ ಮನೆಯಲ್ಲಿ ವಾಸವಾಗಿದ್ದಳು.
ಡಿ.14 ರಂದು ಲಂಡನ್‌ನಿಂದ ಬೆಂಗಳೂರಿಗೆ ಆಗಮಿಸಿದ್ದ ಮಹಿಳೆ, ನಂತರ ರಸ್ತೆ ಮೂಲಕ ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿರುವ ತನ್ನ ಪತಿಯ ಮನೆಗೆ ತೆರಳಿದ್ದಾಳೆ. ನಂತರ ಡಿ.21 ರಂದು ಬೆಳಗಾವಿಯಲ್ಲಿರುವ ತನ್ನ ತವರು ಮನೆಗೆ ಆಗಮಿಸಿದ್ದಳು. ಲಂಡನ್‌ನಿಂದ ಮಹಿಳೆ ಆಗಮಿಸಿರುವ ಬಗ್ಗೆ ಬೆಂಗಳೂರಿನ ವಾರ್‌ ರೂಮ್‌ನಿಂದ ಬೆಳಗಾವಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ಮಾಹಿತಿ ಬಂದಿದೆ.

ಲಂಡನ್‌ನಿಂದ ಬೆಂಗಳೂರಿಗೆ ಬಂತಾ ರೂಪಾಂತರಿ ವೈರಸ್.. ಮಹಿಳೆ ತಂದ ಆತಂಕ!

ಬೆಳಗಾವಿಗೆ ಆಗಮಿಸಿದ್ದ ಮಹಿಳೆ ಮನೆಗೆ ಮಂಗಳವಾರ ಭೇಟಿ ನೀಡಿದ ಆರೋಗ್ಯ ಸಿಬ್ಬಂದಿ, ಆರೋಗ್ಯ ತಪಾಸಣೆ ನಡೆಸಿದ್ದಾರೆ. ಬಳಿಕ ಕೋವಿಡ್‌ ಪರೀಕ್ಷೆಗಾಗಿ ಗಂಟಲು ದ್ರವ ಸಂಗ್ರಹವನ್ನು ಮಾಡಿಕೊಂಡಿದ್ದಾರೆ. ಮಹಿಳೆ ಸೇರಿದಂತೆ ಆಕೆಯ ಪ್ರಾಥಮಿಕ ಸಂಪರ್ಕಕ್ಕೆ ಬಂದವರ ಮೇಲೆ ಅಧಿಕಾರಿಗಳು ತೀವ್ರ ನಿಗಾ ಇಟ್ಟಿದ್ದಾರೆ. ಮಹಿಳೆಯ ಹಾಗೂ ಕುಟುಂಬಸ್ಥರನ್ನು ಕ್ವಾರಂಟೈನ್‌ ಮಾಡಲಾಗಿದೆ. ವಿದೇಶದಿಂದ ಬಂದವರಿಗಾಗಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ತೀವ್ರ ಶೋಧ ನಡೆಸಿದೆ.