ದಾವಣಗೆರೆ(ಮೇ.01): ಅಕ್ಕ-ತಮ್ಮ, ವೈದ್ಯಕೀಯ ವಿದ್ಯಾರ್ಥಿ ಹೀಗೆ ಮೂವರಲ್ಲಿ ಕೊರೋನಾ ಸೋಂಕು ಕಾಣಿಸಿದಾಗ ಅಷ್ಟೊಂದು ಆತಂಕ ಇರಲಿಲ್ಲ. ಆದರೆ, ಬುಧವಾರ ಶುಶ್ರೂಷಕಿಯಲ್ಲಿ ಕಾಣಿಸಿಕೊಂಡ ಸೋಂಕು ಇದೀಗ ಇಡೀ ಜಿಲ್ಲೆಯನ್ನೇ ತಲ್ಲಣಗೊಳಿಸಿರುವು ದು ಸುಳ್ಳಲ್ಲ. ಕಳೆದ ಮಾರ್ಚ್‌ನಲ್ಲಿ ಚಿತ್ರದುರ್ಗ ಮಹಿಳೆ, ಆಕೆಯ ಸಹೋದರನಲ್ಲಿ ಸೋಂಕು ಲಕ್ಷಣ ಕಾಣಿಸಿಕೊಂಡಾಗ ಹೋಂ ಕ್ವಾರಂಟೈನ್‌ ಇದ್ದು, ನಂತರ ಇಲ್ಲಿನ ಎಸ್ಸೆಸ್‌ ಹೈಟೆಕ್‌ ಆಸ್ಪತ್ರೆಗೆ ದಾಖಲಾದರು.

ಕೆಲ ದಿನಕ್ಕೆ ಪ್ಯಾರಿಸ್‌ನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಯಲ್ಲಿ ಸೋಂಕು ಲಕ್ಷಣ ಕಂಡಾಗ ತಾನೇ ಸ್ವತಃ ಬೈಕಲ್ಲಿ ಆಸ್ಪತ್ರೆಗೆ ಬಂದು ದಾಖಲಾಗಿ, ಗುಣಮುಖರಾಗಿ ಬಿಡುಗಡೆಯಾಗಿದ್ದರು.

ಕೊರೋನಾ ಕಾಟ: ರೋಡ್‌ನಲ್ಲಿ ಗರಿ ಗರಿ ನೋಟ್‌ ನೋಟ್‌ ಬಿದ್ರೂ ಮುಟ್ಟದ ಜನ..!

ಇದಾಗಿ 28-29 ದಿನಗಳ ಕಾಲ ಯಾವುದೇ ಕೊರೋನಾ ಕೇಸ್‌ ಇರಲಿಲ್ಲ. ಆದರೆ, ಗ್ರೀನ್‌ ಝೋನ್‌ ಆಗಿ ಜಿಲ್ಲೆ ಘೋಷಣೆಯಾದ ಬೆನ್ನಲ್ಲೇ ಬುಧವಾರ ಇಲ್ಲಿನ ಬಾಷಾ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಷಕಿಯಲ್ಲಿ ಸೋಂಕು ದೃಢಪಟ್ಟಿದ್ದರೆ, ಗುರುವಾರ ಜಾಲಿ ನಗರದ 69 ವರ್ಷದ ವೃದ್ಧನಲ್ಲೂ ಸೋಂಕಿರುವುದು ಸ್ಪಷ್ಟವಾಗಿದೆ. ಇದು ಸ್ವತಃ ಆಡಳಿತ ಯಂತ್ರದ ಚಿಂತೆ ಹೆಚ್ಚಿಸಿದೆ.

ಸೋಂಕಿನ ಮೂಲ ಎಲ್ಲಿ ಮಾಹಿತಿ ಶೋಧ

ಹೊಸ ಸೋಂಕಿತರಲ್ಲಿ ಶುಶ್ರೂಷಕಿಯಾಗಲೀ, ವೃದ್ಧನಾಗಲೀ ಕೆಲ ತಿಂಗಳಿನಿಂದ ಜಿಲ್ಲೆಯ ದಾಟಿಲ್ಲವೆನ್ನುತ್ತಾರೆ. ಇಬ್ಬರಿಗೂ ಸೋಂಕು ತಗುಲಿದ್ದು ಹೇಗೆಂಬುದೇ ಈಗ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಿದೆ. ಸೋಂಕಿತ ಶುಶ್ರೂಷಕಿ ಹಾಗೂ ಜಾಲಿ ನಗರದ ವೃದ್ಧನ ಪ್ರಕರಣಕ್ಕೆ ಸಂಬಂಧವಿಲ್ಲ. ಇಬ್ಬರ ಟ್ರಾವೆಲ್‌ ಹಿಸ್ಟರಿ ಶೋಧವೂ ನಡೆದಿದೆ. ಇಬ್ಬರಿಗೂ ಸೋಂಕು ತಗುಲಿದ್ದು ಹೇಗೆ, ಯಾರಿಂದ ಎಂಬುದೇ ಈಗ ಅತೀ ಮುಖ್ಯ ಪ್ರಶ್ನೆ.

ಸೋಂಕಿತ ನರ್ಸ್‌ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿದ್ದ ವೈದ್ಯೆ ಸೇರಿದಂತೆ 75 ಜನರನ್ನು ಕ್ವಾರಂಟೈನ್‌ನಲ್ಲಿಡಲಾಗಿದೆ. ಶುಶ್ರೂಷಕಿಯ ಟ್ರಾವೆಲ್‌ ಹಿಸ್ಟರಿ ಬಗ್ಗೆ ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌, ಆರೋಗ್ಯ ಇಲಾಖೆ ತಲೆ ಕೆಡಿಸಿಕೊಂಡಿವೆ. ಮೂರು ಕೋನಗಳಿಂದ ಶುಶ್ರೂಷಕಿಯ ಪ್ರಕರಣದ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ. ಜವಾಬ್ಧಾರಿಯುತ ಸ್ಥಾನದಲ್ಲಿರುವ ಶುಶ್ರೂಷಕಿ ಮಾತ್ರ ಸಮರ್ಪಕ ಮಾಹಿತಿ ನೀಡುತ್ತಿಲ್ಲ ಎನ್ನಲಾಗಿದೆ.

ಒಂದೊಂದು ಸಲ ಒಂದೊಂದು ಹೇಳಿಕೆ

ನರ್ಸ್‌ ವರ್ತನೆಯಿಂದ ಬೇಸತ್ತ ಆಡಳಿತ ಯಂತ್ರವು ಇದೀಗ ಸೈಕಿಯಾಟ್ರಿಸ್ಟ್‌ ಮೊರೆ ಹೋಗಿದೆ. ಒಂದೊಂದು ಸಲವೂ ಒಂದೊಂದು ಹೇಳಿಕೆ, ಭಿನ್ನ ವಿಭಿನ್ನ ಮಾಹಿತಿ ನೀಡುತ್ತಿರುವ ಸೋಂಕಿತ ಶುಶ್ರೂಷಕಿ ವರ್ತನೆ ಚಿಂತೆಗೀಡು ಮಾಡಿದೆ. ತನ್ನ ಮಗ ಬೆಂಗಳೂರಿಗೆ ಹೋಗಿದ್ದ. ಆತನ ಜೊತೆ ಬಂದಿದ್ದ ಇಬ್ಬರಿಂದ ಸೋಂಕು ಬಂದಿರಬಹುದೆನ್ನುವ ಆಕೆ, ಮತ್ತೊಮ್ಮೆ ತನ್ನ ಮಗ ಬಾಗಲಕೋಟೆಗೆ ಹೋಗಿ ಬಂದ ನಂತರ ಸೋಂಕು ತಗುಲಿರಬಹುದೆ ಎನ್ನುತ್ತಿದ್ದಾರೆ. ಮತ್ತೊಮ್ಮೆ ಹೆರಿಗೆ ಮಾಡಿಸಿದ ನಂತರವೇ ತನ್ನಲ್ಲಿ ಸೋಂಕು ಕಾಣಿಸಿಕೊಂಡಿತೆಂದು ಆಕೆ ಹೇಳಿಕೆ ನೀಡುತ್ತಿರುವುದು ಬಿಸಿ ತುಪ್ಪವಾಗುತ್ತಿದೆ. ಸೋಂಕಿತ ಶುಶ್ರೂಷಕಿ ಘಳಿಗೆಗೊಂದು ಹೇಳಿಕೆ ನೀಡುತ್ತಿರುವುದು ಸ್ವತಃ ಜಿಲ್ಲಾಧಿಕಾರಿ ಬೀಳಗಿ, ಜಿಲ್ಲಾ ಎಸ್ಪಿ ಹನುಮಂತರಾಯರ ಚಿಂತೆ ಹೆಚ್ಚಿಸಿದೆ.

ಟ್ರಾವೆಲ್‌ ಹಿಸ್ಟರಿ ಇಲ್ಲದ ವೃದ್ಧನ ಸೋಂಕು

ಇನ್ನು 30 ದಿನಗಳ ನಂತರ ದಿಢೀರನೇ ಬಾಷಾ ನಗರದ ನರ್ಸ್‌, ಜಾಲಿ ನಗರದ 69 ವರ್ಷದ ವೃದ್ಧನಲ್ಲಿ ಸೋಂಕು ಕಂಡು ಬಂದಿರುವುದು ಜನರ ಆತಂಕ ದುಪ್ಪುಟ್ಟುಗೊಳಿಸಿದೆ. ಯಾವುದೇ ಟ್ರಾವೆಲ್‌ ಹಿಸ್ಟರಿ ಇಲ್ಲದ ವೃದ್ಧನಿಗೆ ಸೋಂಕು ಬಂದಿದ್ದು ಹೇಗೆಂಬ ಮೂಲಕ ಹುಡುಕಾಟದ ಜೊತೆಗೆ ಆತನ ಪ್ರಾಥಮಿಕ ಸಂಪರ್ಕದಲ್ಲಿದ್ದ ಕುಟುಂಬ 2 ಮಕ್ಕಳೂ ಸೇರಿದಂತೆ 9 ಜನರನ್ನು ಹಾಸ್ಪಿಟಲ್‌ ಕ್ವಾರಂಟೈನ್‌ನಲ್ಲಿಡಲಾಗಿದೆ.