ಕಾರವಾರ(ಜೂ.26): ಸಾಕಷ್ಟು ವಿರೋಧ ಹಾಗೂ ಕೊರೋನಾ ಭೀತಿಯ ನಡುವೆಯೇ SSLC ಮೊದಲ ಪರೀಕ್ಷೆ ಯಶಸ್ವಿಯಾಗಿ ನಡೆದಿದೆ. ಕೆಲವು ಕಡೆ ಗೊಂದಲ ಮತ್ತೆ ಕೆಲವು ಕಡೆ ವಿಚಿತ್ರ ಹಾಗೂ ಅಪರೂಪದ ಸನ್ನಿವೇಷಕ್ಕೂ ಮೊದಲ ದಿನದ  SSLC ಪರೀಕ್ಷೆ ಸಾಕ್ಷಿಯಾಗಿದೆ

ಕೇವಲ ಒಬ್ಬ ವಿದ್ಯಾರ್ಥಿಗಾಗಿ ಬಸ್‌ ವ್ಯವಸ್ಥೆಗೆ ಗ್ರಾಮಸ್ಥರ ವಿರೋಧ ವ್ಯಕ್ತವಾಗಿದ್ದರಿಂದ ಪರೀಕ್ಷೆಯಿಂದ ವಂಚಿತವಾಗಬೇಕಿದ್ದ ವಿದ್ಯಾರ್ಥಿಯೊಬ್ಬಳಿಗೆ ಇಲ್ಲಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿ ರೂಪಾ ನಾಯ್ಕ ತಮ್ಮ ಮನೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ನೀಡಿದ ಘಟನೆ ಇಲ್ಲಿ ಗುರುವಾರ ನಡೆದಿದೆ. 

SSLC ಪರೀಕ್ಷೆ: ಕೊರೋನಾಗೆ ಹೆದರಬೇಡಿ ಮಕ್ಕಳೇ, ಧೈರ್ಯವಾಗಿರಿ, ಶುಭವಾಗಲೆಂದು ಹಾರೈಸಿದ ಪೊಲೀಸಪ್ಪ..!

ಪರೀಕ್ಷೆಗಾಗಿ ಶಿರಸಿಗೆ ಹೋಗಿ ಬಂದರೆ ತಮ್ಮ ಊರಿಗೂ ಸೋಂಕು ಹರಡುವ ಸಾಧ್ಯತೆ ಇರುತ್ತದೆ ಎಂಬ ಆತಂಕದಿಂದ ಆಕೆ ಪರೀಕ್ಷೆ ಬರೆಯುವುದನ್ನು ಗ್ರಾಮಸ್ಥರು ವಿರೋಧಿಸಿದ್ದರು. ವಿಷಯ ತಿಳಿದ ಶಾಲೆ ಶಿಕ್ಷಕಿ ರೂಪಾ, ಜಿಲ್ಲಾಡಳಿತ ಒಪ್ಪಿಗೆ ಪಡೆದು ತಮ್ಮ ಮನೆಯಲ್ಲಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದೇ ಗ್ರಾಮದ ಮತ್ತೊಬ್ಬ ವಿದ್ಯಾರ್ಥಿಗೆ ಪರೀಕ್ಷಾ ಕೇಂದ್ರಕ್ಕೆ ತೆರಳಲು ಜಿಲ್ಲಾಡಳಿತ ಪ್ರತ್ಯೇಕ ಬಸ್‌ ವ್ಯವಸ್ಥೆ ಮಾಡಿತ್ತು.

ವಾಹನ ಸೌಲಭ್ಯವಿಲ್ಲದೆ 10 ಕಿ.ಮೀ ನಡೆದು ಬಂದು ಪರೀಕ್ಷೆ ಬರೆದರು!

ಯಾದಗಿರಿ: ಪರೀಕ್ಷಾ ಕೇಂದ್ರಕ್ಕೆ ತೆರಳಲು ಸಾರಿಗೆ ಬಸ್‌ ಸೌಲಭ್ಯವಿಲ್ಲದೇ ಪರದಾಡಿದ ತಾಲೂಕಿನ ಕಂಚಗಾರ ತಾಂಡಾದ ನಾಲ್ವರು ವಿದ್ಯಾರ್ಥಿಗಳು ಗುರುವಾರ 10 ಕಿ.ಮೀ. ನಡೆದುಕೊಂಡು ಬಂದು ಪರೀಕ್ಷೆ ಬರೆದ ಘಟನೆ ನಡೆದಿದೆ. 

ನಗರದ ಚಿರಂಜೀವಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಬೇಕಿದ್ದ ಈ ವಿದ್ಯಾರ್ಥಿಗಳು, ತಮ್ಮ ಗ್ರಾಮದಿಂದ 10 ಕಿ.ಮೀ. ದೂರದ ಯರಗೋಳವರೆಗೆ ಮಾತ್ರ ಸಾರಿಗೆ ಬಸ್‌ ವ್ಯವಸ್ಥೆ ಮಾಡಿದ್ದರಿಂದ ನಿಗದಿತ ಸಮಯಕ್ಕಿಂತ ಮುನ್ನ ಕೇಂದ್ರ ತಲುಪಬೇಕಾಗಿದ್ದ ಹಿನ್ನೆಲೆಯಲ್ಲಿ ಯರಗೋಳವರೆಗೆ ನಡೆದುಕೊಂಡೆ ಬಂದು ಪರೀಕ್ಷೆ ಬರೆದರು.