Asianet Suvarna News Asianet Suvarna News

ಕೊರೋನಾ ಹಿನ್ನೆಲೆ 15 ದಿನ ಸೆಲೂನ್‌ಗಳು ಬಂದ್‌..!

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕೊರೋನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಡೂರು ತಾಲೂಕಿನಲ್ಲಿ 15 ದಿನಗಳ ಕಾಲ ಸಲೂನ್ ಬಂದ್ ಮಾಡಲು ಸವಿತಾ ಸಮಾಜದವರು ತೀರ್ಮಾನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Corona Fear Salon  Shops are close for 15 Days in Kadur Chikkamagaluru District
Author
Kadur, First Published Jul 6, 2020, 8:42 AM IST

ಕಡೂರು(ಜು.06): ಕೊರೋನಾ ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಾಲೂಕಿನಲ್ಲಿ 15 ದಿನಗಳ ಕಾಲ ಸೆಲೂನ್‌ಗಳನ್ನು ಬಂದ್‌ ಮಾಡಲು ಸವಿತ ಸಮಾಜದ ಮುಖಂಡರು ನಿರ್ಧರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಶನಿವಾರ ಪಟ್ಟಣದಲ್ಲಿ ತುರ್ತು ಸಭೆ ನಡೆಸಿದ ಸಮಾಜದ ಮುಖಂಡರು, ತಾಲೂಕಿನಲ್ಲಿ ಸೋಂಕು ಹೆಚ್ಚಾಗಿ ಒಬ್ಬರು ಮೃತಪಟ್ಟಿದ್ದಾರೆ. ಕ್ಷೌರಿಕ ವೃತ್ತಿಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿರುವುದರಿಂದ 15 ದಿನಗಳ ಕಾಲ ಎಲ್ಲ ಕ್ಷೌರಿಕರು ತಮ್ಮ ಅಂಗಡಿಗಳನ್ನು ಮುಚ್ಚುವ ನಿರ್ಣಯ ಕೈಗೊಂಡಿದ್ದಾರೆ.

ಕರ್ನಾಟಕ ರಾಜ್ಯ ಸವಿತಾ ಸಮಾಜದ ಕಾರ್ಯಾಧ್ಯಕ್ಷರ ಆದೇಶದ ಮೇರೆಗೆ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಈ ಸಂದರ್ಭದಲ್ಲಿ ಮಾತನಾಡಿದ ಸವಿತಾ ಸಮಾಜದ ತಾಲೂಕು ಅಧ್ಯಕ್ಷ ಕೆ. ಸಿ.ಪರಮೇಶ್‌, ಈ ನಿಟ್ಟಿನಲ್ಲಿ ತಾಲೂಕಿನಾದ್ಯಂತ 15ದಿನಗಳ ಕಾಲ ಸಲೂನ್‌ಗಳನ್ನು ಸ್ವಯಂ ಪ್ರೇರಿತವಾಗಿ ಬಂದ್‌ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಎಸ್‌.ಬಾಲು, ಕೆ.ಸಿ.ವೆಂಕಟೇಶ್‌, ಎಂ.ಎಚ್‌.ಪ್ರಕಾಶ್‌, ಎನ್‌.ವೆಂಕಟೇಶ್‌, ವೈ.ವಿ.ಸುರೇಶ್‌, ಕೆ.ಸಿ.ಮಂಜುನಾಥ್‌ ಮತ್ತಿತರರಿದ್ದರು.

ಕಡೂರು ಪಟ್ಟಣ ಸಂಪೂರ್ಣ ಸ್ತಬ್ಧ

ಕಡೂರು: ಪಟ್ಟಣ ಸಂಪೂರ್ಣ ಲಾಕ್‌ಡೌನ್‌ ಆಗುವ ಮೂಲಕ ಎಲ್ಲ ಚಟುವಟಿಕೆಗಳು ಸ್ಥಗಿತಗೊಂಡವು ಕೆಲವೆಡೆ ಸ್ವಯಂ ಪ್ರೇರಿತವಾಗಿ ಬಂದ್‌ ಆಗಿದ್ದವು. ಅಗತ್ಯ ವಸ್ತುಗಳಾದ ತರಕಾರಿ, ಸೊಪ್ಪು, ಹೂವು, ಹಾಲು, ಔಷಧ ಸ್ವಲ್ಪಮಟ್ಟಿಗೆ ಅಲ್ಲಲ್ಲಿ ಕೆಲವು ಗಂಟೆಗಳ ಕಾಲ ಲಭ್ಯವಿದ್ದರೂ, ಅನಂತರದಲ್ಲಿ ಪೊಲೀಸರು ಪಟ್ಟಣದಾದ್ಯಂತ ಗಸ್ತು ತಿರುಗುವ ಮೂಲಕ ಬಂದ್‌ ಮಾಡಿಸಿದರು. 

ಕಾಫಿನಾಡು ಚಿಕ್ಕಮಗಳೂರಲ್ಲಿ ಭಾನುವಾರದ ಲಾಕ್‌ಡೌನ್‌ ಯಶಸ್ವಿ

ರಜೆಯ ಭಾನುವಾರವಾದ ಕಾರಣ ಮೊಬೈಲ್‌ ಅಂಗಡಿ, ಕಬ್ಬಿಣ, ಪಾತ್ರೆ ಅಂಗಡಿ, ಸಾಮಿಲ್‌ಗಳಿಗೆ ರಜೆ ನೀಡಿದ್ದರೆ, ಪಟ್ಟಣದ ಖಾಸಗಿ ಆಸ್ಪತ್ರೆಗಳು ಮತ್ತು ಸರ್ಕಾರಿ ಆಸ್ಪತ್ರೆ ತೆರೆದಿದ್ದವು. ಪಟ್ಟಣ ಸೇರಿ ತಾಲೂಕಿನಲ್ಲಿ ಕೊರೊನಾ ಪಾಸಿಟಿವ್‌ ಪ್ರಕರಣಗಳು ಹೆಚ್ಚಾಗಿವೆ. ಅಲ್ಲದೆ, ಒಂದು ಸಾವಿನ ಪ್ರಕರಣದಿಂದ ಪಟ್ಟಣದ ಜನರಲ್ಲಿ ಆತಂಕ ಮನೆ ಮಾಡಿದ ಕಾರಣವೂ ಕೂಡಾ ಭಾನುವಾರದ ಎಲ್ಲ ಚಟುವಟಿಕೆಗಳಿಗೆ ಜನರೇ ಬ್ರೇಕ್‌ ಹಾಕುವಂತೆ ಮಾಡಿತು.

ಇನ್ನು ಕಡೂರು ಮಾರ್ಗದ ಮೂಲಕ ಸಾಗುವ ಬೆಂಗಳೂರು-ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಸರಕು ಸಾಗಾಣಿಕೆ ವಾಹನಗಳು ಬಿಟ್ಟರೆ ಉಳಿದಂತೆ ಯಾವುದೇ ಬಸ್‌ಗಳು, ವಾಹನಗಳು, ಆಟೋಗಳು ರಸ್ತೆಗೆ ಇಳಿಯಲಿಲ್ಲ. ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಂಡಿರುವ ಲಾಕ್‌ಡೌನ್‌ಗೆ ಕಡೂರು-ಬೀರೂರು ಪಟ್ಟಣದಲ್ಲಿ ಸ್ವಯಂಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚಲು ವ್ಯಾಪಾರಸ್ಥರು, ಸಾರ್ವಜನಿಕರು ಕೂಡ ವ್ಯಾಪಕ ಬೆಂಬಲ ವ್ಯಕ್ತಪಡಿಸಿದರು.

 

Follow Us:
Download App:
  • android
  • ios