ಚಿಕ್ಕಮಗಳೂರು(ಜು.06): ಕೊರೋನಾ ನಿಯಂತ್ರಣ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿದ್ದ ಸಂಡೇ ಲಾಕ್‌ಡೌನ್‌ಗೆ ಜಿಲ್ಲೆಯ ಜನ ಸಂಪೂರ್ಣ ಸ್ಪಂದಿಸಿದರು. ಅಗತ್ಯ ಸೇವೆಗಳು ಹೊರತುಪಡಿಸಿ ಜನ, ವಾಹನ ಸಂಚಾರ ಸೇರಿ ಎಲ್ಲ ವ್ಯವಸ್ಥೆಗಳು ಸಂಪೂರ್ಣ ಬಂದ್‌ ಆಗಿದ್ದವು. ಪ್ರವಾಸಿಗರಿಂದ ಗಿಜಿಗುಡುತ್ತಿದ್ದ ಜಿಲ್ಲಾ ಕೇಂದ್ರ ಬಿಕೋ ಎನ್ನುತ್ತಿತ್ತು.

ಜಿಲ್ಲೆಯಲ್ಲಿ ಶನಿವಾರ ರಾತ್ರಿ 8 ಗಂಟೆಯಿಂದಲೇ ಲಾಕ್‌ಡೌನ್‌ ಜಾರಿಯಾಗಿದ್ದರಿಂದ ಭಾನುವಾರ ಬೆಳಗ್ಗೆ ಜನ ರಸ್ತೆಗೇ ಬರಲಿಲ್ಲ. ಒಂದೆಡೆ ಲಾಕ್‌ಡೌನ್‌ ಇದ್ದರೆ ಇನ್ನೊಂದೆಡೆ ಬೆಳಗ್ಗೆ 10 ಗಂಟೆಯವರೆಗೆ ಬಂದ ಮಳೆ ಜನರನ್ನು ಮನೆಗಳಲ್ಲೇ ಲಾಕ್‌ ಆಗುವಂತೆ ಮಾಡಿತು.

ಹಣ್ಣು ಮತ್ತು ತರಕಾರಿ, ಮೀನು, ಮಾಂಸ ಮಾರಾಟದ ಅಂಗಡಿಗಳು, ಪೆಟ್ರೋಲ್‌ ಬಂಕ್‌ಗಳು ಎಂದಿನಂತೆ ತೆರೆದಿದ್ದವು. ಆದರೆ, ಜನರ ಓಡಾಟ ಕಡಿಮೆ ಇದ್ದಿದ್ದರಿಂದ ವಾರದ ನಿರೀಕ್ಷಿತ ವ್ಯಾಪಾರ ಆಗಿಲ್ಲ ಎಂಬ ಮಾತುಗಳು ವರ್ತಕರಿಂದ ಸಾಮಾನ್ಯವಾಗಿ ಕೇಳಿಬರುತ್ತಿತ್ತು. ಆದರೆ, ಸಂಡೇ ಸ್ಪೆಷಲ್‌ ಬಾಡೂಟಕ್ಕೆ ಯಾವುದೇ ರೀತಿಯಲ್ಲಿ ತೊಡಕಾಗಲಿಲ್ಲ. ಮಾಂಸ ಮಾರಾಟ ಮತ್ತು ಖರೀದಿ ಎಂದಿನಂತೆ ಸಾಂಗವಾಗಿ ಸಾಗಿತ್ತು.

ಹೋಟೆಲ್‌ಗಳು ಬಂದ್‌:

ಜಿಲ್ಲೆಯಲ್ಲಿ ಹೋಟೆಲ್‌ಗಳು ಬಂದ್‌ ಆಗಿದ್ದರಿಂದ ಇವುಗಳನ್ನು ಅವಲಂಬಿಸಿದ ಹೊರಗಿನ ಜನ ತೊಂದರೆ ಅನುಭವಿಸುವಂತಾಯಿತು. ಆದರೆ, ಚಿಕ್ಕಮಗಳೂರು ನಗರದ ಕೆಲವೆಡೆ ಹೋಟೆಲ್‌ಗಳಲ್ಲಿ ಪಾರ್ಸಲ್‌ ವ್ಯವಸ್ಥೆ ತೆರೆಯಮರೆಯಲ್ಲಿ ನಡೆಯಿತು. ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಇರುವ ಇಂದಿರಾ ಕ್ಯಾಂಟಿನ್‌ ಹಲವರಿಗೆ ಮಂದಿ ಆಶ್ರಯವಾಯಿತು. ಬೇರೆ ದಿನಗಳಂದು ಇತ್ತ ತಿರುಗಿ ನೋಡದ ಹಲವರು ಬೇರೆ ದಾರಿ ಇಲ್ಲದೆ ಇಲ್ಲಿಯೇ ಮಧ್ಯಾಹ್ನದ ಊಟ ಸವಿದು ಸಂತೃಪ್ತರಾದರು.

ಪೆಟ್ರೋಲ್‌ ಬಂಕ್‌ಗಳು ಇದ್ದರೂ ವಾಹನಗಳ ಸಂಖ್ಯೆ ತೀರಾ ಕಡಿಮೆ ಇದ್ದಿದ್ದರಿಂದ ಬಿಕೋ ಎನ್ನುವಂತಾಗಿದ್ದವು. ಕೆಎಸ್‌ಆರ್‌ಟಿಸಿ ಬಸ್‌, ಆಟೋ, ಮ್ಯಾಕ್ಸಿಕ್ಯಾಬ್‌ ಸಂಪೂರ್ಣ ಸ್ಥಗಿತಗೊಂಡಿತ್ತು. ದ್ವಿಚಕ್ರ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿಯಲಿಲ್ಲ. ಹೀಗಾಗಿ, ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿದ್ದವು. ಒಟ್ಟಾರೆ ಜಿಲ್ಲೆಯಲ್ಲಿ ಸಂಡೇ ಲಾಕ್‌ಡೌನ್‌ ಯಶಸ್ವಿಯಾಯಿತು.

ಫಸ್ಟ್‌ ಟೈಂ ಪೆಟ್ರೋಲ್‌ ಬಂಕ್‌ ಬಂದ್‌

ಕೊಪ್ಪ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪಟ್ಟಣದ ಎಲ್ಲ ಅಂಗಡಿ, ಹೋಟೆಲ್‌ಗಳು ಬಂದ್‌ ಆಗಿದ್ದವು. ಆಟೋ ರಿಕ್ಷಾಗಳು ಮತ್ತು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಶಿವಮೊಗ್ಗ ಜಿಲ್ಲೆಯಲ್ಲಿ ಸಂಡೇ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ

ಔಷಧ ಅಂಗಡಿಗಳು ಮಧ್ಯಾಹ್ನದವರೆಗೆ ಮಾತ್ರ ತೆರೆದಿದ್ದವು. ವಿಶೇಷವಾಗಿ ಇದೇ ಮೊದಲಬಾರಿಗೆ ಎಂಬಂತೆ ಕೊಪ್ಪ ಪಟ್ಟಣ ವ್ಯಾಪ್ತಿಯ ಎಲ್ಲ ಪೆಟ್ರೋಲ್‌ ಬಂಕ್‌ಗಳನ್ನು ಬಂದ್‌ ಮಾಡುವ ಮೂಲಕ ಬಂಕ್‌ ಮಾಲೀಕರು ಲಾಕ್‌ಡೌನ್‌ಗೆ ಬೆಂಬಲ ಸೂಚಿಸಿದರು. ಪಟ್ಟಣ ಸೇರಿ ಗ್ರಾಮೀಣ ಪ್ರದೇಶಗಳೂ ಸಂಪೂರ್ಣ ಬಂದ್‌ ಆಗಿದ್ದವು. ವಾಹನಗಳು ಮತ್ತು ಜನಸಂಚಾರವಿಲ್ಲದೆ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಬೆಳಗಿನಿಂದ ಸುರಿದ ಮಳೆ ದ್ವಿಚಕ್ರ ವಾಹನ ಸವಾರರನ್ನು ಸಂಪೂರ್ಣ ನಿಬಂರ್‍ಧಿಸಿ ಮನೆಗಳಲ್ಲೇ ಉಳಿಯುವಂತೆ ಮಾಡಿತು.

ಮನೆಯಲ್ಲೇ ಉಳಿದ ಜನ

ಎನ್‌.ಆರ್‌.ಪುರ: ಪಟ್ಟಣದ ಎಲ್ಲ ಅಂಗಡಿ, ಹೋಟೆಲ್‌, ವಾಣಿಜ್ಯ ಮಳಿಗೆಗಳು ಸಂಪೂರ್ಣ ಬಂದ್‌ ಆಗಿದ್ದವು. ಜನ ಸ್ವಯಂಪ್ರೇರಣೆಯಿಂದ ಮನೆಯಲ್ಲೇ ಉಳಿದಿದ್ದರು. ಆಟೋ ಸೇರಿ ಯಾವುದೇ ವಾಹನಗಳು ಸಂಚರಿಸಲಿಲ್ಲ. ಎಲಲ್ಲ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಕುದುರೆಗುಂಡಿ, ಶೆಟ್ಟಿಕೊಪ್ಪ, ಮುತ್ತಿನಕೊಪ್ಪಗಳೂ ಸಂಪೂರ್ಣ ಲಾಕ್‌ಡೌನ್‌ ಆಗಿದ್ದವು.

ಲಾಕ್‌ಡೌನ್‌ ಕರೆಗೆ ಓಗೊಟ್ಟ ಜನ

ತರೀಕೆರೆ: ಲಾಕ್‌ಡೌನ್‌ಗೆ ಸ್ವಯಂಪ್ರೇರಿತರಾಗಿ ಪಟ್ಟಣದ ಜನತೆ ಸ್ಪಂದಿಸಿದರು. ಶನಿವಾರ ರಾತ್ರಿ 8 ಗಂಟೆಯಿಂದಲೇ ಪಟ್ಟಣದ ಅಂಗಡಿ, ಹೋಟೆಲ್‌ಗಳು ಬಾಗಿಲು ಮುಚ್ಚಿದ್ದವು. ಭಾನುವಾರ ಫುಲ್‌ ಲಾಕ್‌ಡೌನ್‌ ಆದ್ದರಿಂದ ಬೆಳಗಿನಿಂದಲೇ ರಸ್ತೆಗಳಲ್ಲಿ ಜನಸಂಚಾರ ಇರಲಿಲ್ಲ. ಆಟೋ, ಲಗೇಜ್‌ ವಾಹನ ಮತ್ತಿತರರ ಯಾವುದೇ ಬಗೆಯ ವಾಹನಗಳಾಗಲಿ ರಸ್ತೆಗಿಳಿಯಲಿಲ್ಲ. ಉಪ ವಿಭಾಗಾಧಿಕಾರಿ ಎ.ಸಿ.ರೇಣುಕಪ್ರಸಾದ್‌ ಅವರು ಕನ್ನಡಪ್ರಭದೊಂದಿಗೆ ಮಾತನಾಡಿ, ಲಾಕ್‌ಡೌನ್‌ಗೆ ಜನ ಸ್ವಯಂಪ್ರೇರಿತರಾಗಿ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಪಟ್ಟಣದಲ್ಲಿ ಅವಶ್ಯಕ ಪದಾರ್ಥಗಳ ಅಂಗಡಿ ಹೊರತಾಗಿ ಬೇರೆ ಅಂಗಡಿ ಹೋಟೆಲ್‌ ಬಾಗಿಲು ಮುಚ್ಚಿವೆ. ಸಹಕರಿಸಿದ ಜನರಿಗೆ ಕೃತಜ್ಞತೆಗಳು ಎಂದು ತಿಳಿಸಿದರು.