ಬೆಂಗಳೂರು [ಮಾ.12]:  ಕೊರೋನಾ ಭೀತಿ ಹಿನ್ನೆಲೆಯಲ್ಲಿ ಮಾ.31ರಿಂದ ಏ.8ರ ವರೆಗೆ ನಡೆಯುವ ಕರಗ ಮಹೋತ್ಸವದ ಆಚರಣೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ, ಒಂದು ವೇಳೆ ಪರಿಸ್ಥಿತಿ ಬದಲಾದರೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಕರಗ ಮಹೋತ್ಸವ ಆಚರಣೆ ಸಿದ್ಧತೆ ಹಾಗೂ ಕೊರೋನಾ ಮತ್ತು ಕಾಲರ ಭೀತಿ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಮೇಯರ್‌ ಗೌತಮಕುಮರ್‌ ಹಾಗೂ ಚಿಕ್ಕಪೇಟೆ ಶಾಸಕ ಉದಯ್‌ ಗರುಡಾಚಾರ್‌ ನೇತೃತ್ವದಲ್ಲಿ ಶ್ರೀ ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯರು, ಪಾಲಿಕೆ ಮುಖಂಡರೊಂದಿಗೆ ಸಭೆ ನಡೆಸಿದ ನಂತರ ಆಯುಕ್ತರು ಈ ವಿಷಯ ತಿಳಿಸಿದರು.

ಕರಗ ಮಹೋತ್ಸವ ಆಚರಣೆ ವೇಳೆ ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು, ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ದುರಸ್ತಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ನಗರದಲ್ಲಿ ಕೊರೋನಾ ಪ್ರಕರಣ ಪತ್ತೆಯಾಗಿರುವುದರಿಂದ ಮಾ.31ರಿಂದ ಏ.8ರವರೆಗೆ ನಡೆಯುವ ಕರಗ ಮಹೋತ್ಸವದ ಆಚರಣೆ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ. ಒಂದು ವೇಳೆ ಪರಿಸ್ಥಿತಿ ಆಚರಣೆಗೆ ಪೂರಕವಾಗಿರದಿದ್ದರೆ ಕೊನೆಯ 24 ಗಂಟೆಯಲ್ಲಿ ಆಚರಣೆ ನಿಲ್ಲಿಸುವುದಕ್ಕೆ ಅವಕಾಶವಿದೆ. ಹಾಗಾಗಿ, ಈಗಲೇ ಕರಗ ಆಚರಣೆ ಮಾಡುವ ಅಥವಾ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಆದರೆ, ಆಚರಣೆಗೆ ಬೇಕಾದ ಸಿದ್ಧತೆ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಬಳ್ಳಾರಿ: ದುಬೈನಿಂದ ಬಂದ ದಂಪತಿಗೆ ಕೊರೋನಾ ಭೀತಿ!.

ಇನ್ನು ಸಾಂಪ್ರದಾಯಕವಾಗಿ ಪ್ರತಿವರ್ಷ ಕರಗ ಮಹೋತ್ಸವದ ದಿನದಂದೇ ಬಿಬಿಎಂಪಿ ವತಿಯಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸುತ್ತೇವೆ. ಕಳೆದೆರಡು ವರ್ಷ ಚುನಾವಣೆ ನೀತಿ ಸಂಹಿತೆಯಿಂದ ಆಚರಣೆ ವಿಳಂಬವಾಗಿತ್ತು. ಈ ವರ್ಷ ಕರಗ ಮಹೋತ್ಸವದಂದೇ ಜಯಂತಿ ಆಚರಣೆಗೆ ತೀರ್ಮಾನಿಸಲಾಗಿದೆ. ಆದರೆ, ಮುಖ್ಯಮಂತ್ರಿ ಅವರ ದಿನಾಂಕದ ಲಭ್ಯತೆ ಹಾಗೂ ಪರಿಸ್ಥಿತಿ ಅನುಗುಣವಾಗಿ ಆಚರಣೆ ಬಗ್ಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.

ಮೇಯರ್‌ ಗೌತಮ್‌ಕುಮಾರ್‌ ಮಾತನಾಡಿ, ನಗರದಲ್ಲಿ ಕೊರೋನಾ ಮತ್ತು ಕಾಲರಾ ಭೀತಿ ಇರುವುದರಿಂದ ಕರಗ ವೇಳೆ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವುದಕ್ಕೆ ಸೂಚಿಸಲಾಗಿದೆ. ಗುರುವಾರ ದೇವಸ್ಥಾನಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು ಎಂದು ತಿಳಿಸಿದರು.

ಸಭೆಯಲ್ಲಿ ಚಿಕ್ಕಪೇಟೆ ಶಾಸಕ ಉದಯ್‌ ಗರುಡಾಚಾರ್‌, ಆಡಳಿತ ಪಕ್ಷದ ನಾಯಕ ಮುನೀಂದ್ರಕುಮಾರ್‌, ವಿರೋಧ ಪಕ್ಷದ ನಾಯಕ ಅಬ್ದುಲ್‌ವಾಜಿದ್‌, ಜೆಡಿಎಸ್‌ ಪಕ್ಷದ ನಾಯಕಿ ನೇತ್ರಾನಾರಾಯಣ್‌, ಬಿಬಿಎಂಪಿ ಹಾಗೂ ಮುಜರಾಯಿ ಇಲಾಖೆಯ ಅಧಿಕಾರಿಗಳು ಹಾಗೂ ಶ್ರೀ ಧರ್ಮರಾಯಸ್ವಾಮಿ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು, ಮೊದಲಾದವರು ಉಪಸ್ಥಿತರಿದ್ದರು.

ಪರಿಸ್ಥಿತಿ ಕೈ ಮೀರಿದರೆ ದೇವಸ್ಥಾನಕ್ಕೆ ಸೀಮಿತ

ವಿಧಾನಪರಿಷತ್ತು ಸದಸ್ಯಹಾಗೂ ಧರ್ಮರಾಯಸ್ವಾಮಿ ದೇವಾಲಯದ ಆಡಳಿತ ಮಂಡಳಿಯ ಸದಸ್ಯಪಿ.ಆರ್‌.ರಮೇಶ್‌, ನೂರಾರು ವರ್ಷಗಳಿಂದ ಆಚರಣೆ ಮಾಡಿಕೊಂಡು ಬರಲಾದ ಕರಗ ಮಹೋತ್ಸವ ನಿಲ್ಲಿಸುವುದಕ್ಕೆ ಸಾಧ್ಯವಿಲ್ಲ. ಪರಿಸ್ಥಿತಿ ಕೈಮೀರಿ ಹೋದರೆ, ದೇವಸ್ಥಾನದ ಆವರಣದ ಒಳಭಾಗದಲ್ಲಿ ಮಾತ್ರ ಸಂಪ್ರದಾಯ ಮಾಡಿ ಮುಗಿಸಲಾಗುತ್ತದೆ. ಅದ್ಧೂರಿ ಆಚರಣೆ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

‘ಕೊರೋನಾಗೆ ಔಷಧಿ ಇದೆ!’

ಕೊರೋನಾ ಭೀತಿ ಹಿನ್ನೆಲೆಯಲ್ಲಿ ಸಭೆ ಸಮಾರಂಭವನ್ನು ಸಾಧ್ಯವಾದ ಮಟ್ಟಿಗೆ ಆಚರಣೆ ಮಾಡದಂತೆ ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಸೂಚಿಸಿದೆ. ಆದರೂ ಕರಗ ಮಹೋತ್ಸವ ಆಚರಣೆಯ ಸಿದ್ಧತೆ ಕುರಿತ ಪ್ರಶ್ನೆಗೆ, ಉತ್ತರಿಸಿದ ವಿಧಾನ ಪರಿಷತ್ತು ಸದಸ್ಯ ಪಿ.ಆರ್‌.ರಮೇಶ್‌, ಕೇರಳದಲ್ಲಿ ಕೊರೋನಾ ಸೋಂಕಿತ ಮಹಿಳೆ ಈಗಾಗಲೇ ಗುಣಮುಖರಾಗಿದ್ದಾರೆ. ಎಲ್ಲ ವೈರಸ್‌ಗಳಂತೆ ಕೊರೋನಾ ಸಹ ಒಂದು ವೈರಸ್‌. ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದರೆ ತೊಂದರೆ ಇಲ್ಲ, ಕೊರೋನಾ ವೈರಸ್‌ಗೆ ಔಷಧಿ ಇದೆ ಎಂದು ಹೇಳಿದರು. ಆಗ ಪತ್ರಕರ್ತರು ಔಷಧಿ ಯಾವುದು ಹೇಳಿ ಎಂದು ಪ್ರಶ್ನಿಸಿದಾಗ, ನಾನು ಹೇಳಿದ್ದು ಆ ರೀತಿ ಅಲ್ಲ ಎಂದು ಜಾರಿಕೊಂಡರು.