ಬಳ್ಳಾರಿ(ಮಾ.12): ದುಬೈನಿಂದ ಆಗಮಿಸಿದ್ದ ಜಿಂದಾಲ್‌ ಕಂಪನಿಯ ನೌಕರ ದಂಪತಿಯನ್ನು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಮಂಗಳವಾರ ಇಡೀ ದಿನ ತಪಾಸಣೆ ನಡೆಸಿ, 14 ದಿನಗಳ ವರೆಗೆ ಮನೆ ಬಿಟ್ಟು ಹೊರಗಡೆ ಹೋಗದಂತೆ ಸೂಚನೆ ನೀಡಿ ಅವರನ್ನು ಮನೆಗೆ ಕಳಿಸಿಕೊಡಲಾಗಿದೆ. 

ಪ್ರವಾಸ ಹೋಗಿದ್ದ ನೌಕರ ದಂಪತಿ ಮಾ. 8 ರಂದು ಮರಳಿದ್ದರು. ದುಬೈನಿಂದ ಬೆಂಗಳೂರಿಗೆ ಆಗಮಿಸಿದ ದಂಪತಿಯನ್ನು ಜಿಂದಾಲ್‌ ಕಂಪನಿಯ ಮನವಿಯಂತೆ ನಗರದ ಜಿಲ್ಲಾಸ್ಪತ್ರೆಯಲ್ಲಿ ಇಡೀ ದಿನ ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸಲಾಗಿತ್ತು. ಆನಂತರ ಅವರನ್ನು ಮನೆಗೆ ಕಳಿಸಿಕೊಡಲಾಯಿತು ಎಂದು ಜಿಲ್ಲಾ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಬಸರೆಡ್ಡಿ, ದುಬೈ ಕೊರೋನಾ ಹರಡಿರುವ ದೇಶವಾಗಿರುವುದರಿಂದ ಅಲ್ಲಿಂದ ಬಂದವರಿಗೆ ತಪಾಸಣೆ ನಡೆಸಲಾಗುವುದು. 14 ದಿನಗಳ ವರೆಗೆ ವೈರಸ್‌ ಹರಡುವ ಸಾಧ್ಯತೆ ಇರುವುದರಿಂದ ಆ ದಂಪತಿ ಮನೆಯಿಂದ ಹೊರಗಡೆ ಬರದಂತೆ ಸೂಚನೆ ನೀಡಿ ಕಳುಹಿಸಿಕೊಡಲಾಗಿದೆ. ಆರೋಗ್ಯ ಇಲಾಖೆ ಕೂಡ ಆ ದಂಪತಿಯ ಕಡೆ ತೀವ್ರ ನಿಗಾ ವಹಿಸಲಿದ್ದು, ಆಗಾಗ್ಗೆ ತಪಾಸಣೆ ನಡೆಸಲಾಗುವುದು. ಇದೀಗ ನಡೆಸಿರುವ ತಪಾಸಣೆ ವೇಳೆ ಕೊರೋನಾ ವೈರಸ್‌ನ ಯಾವ ಲಕ್ಷಣಗಳೂ ಕಂಡು ಬಂದಿಲ್ಲ. ಹೀಗಾಗಿ ರಕ್ತದ ಮಾದರಿಯನ್ನು ಸಹ ಕಳಿಸಿಕೊಟ್ಟಿಲ್ಲ. ದುಬೈನಿಂದ ಬಂದಿದ್ದಾರೆ ಎಂಬ ಕಾರಣಕ್ಕಾಗಿ ತಪಾಸಣೆ ನಡೆಸಲಾಗಿದ್ದು, ಅವರ ಮೇಲೆ ಹೆಚ್ಚಿನ ನಿಗಾ ಇರಿಸಲಾಗುವುದು ಎಂದು ಡಾ. ಬಸರೆಡ್ಡಿ ತಿಳಿಸಿದರು.