ಬೆಂಗಳೂರು [ಮಾ.14]:  ಕೊರೋನಾ ನಿಯಂತ್ರಣಕ್ಕೆ ಬರುವವರೆಗೆ ಬಿಬಿಎಂಪಿ ಆರೋಗ್ಯ ವಿಭಾಗದ ಎಲ್ಲ ಹಂತದ ಅಧಿಕಾರಿ ಸಿಬ್ಬಂದಿಗೆ ಸಾರ್ವತ್ರಿಕ ರಜೆ ರದ್ದುಪಡಿಸಿ ಬಿಬಿಎಂಪಿ ಆದೇಶಿಸಿದೆ.

ರಾಜ್ಯದಲ್ಲಿ ಕೊರೋನ ವೈರಾಣು ಹರಡುವುದನ್ನು ನಿಯಂತ್ರಿಸಲು ಆರೋಗ್ಯ ಇಲಾಖೆ ಅನೇಕ ತುರ್ತು ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಮಾ.14 ಎರಡನೇ ಶನಿವಾರ ಮಾ.15ರ ಭಾನುವಾರ ಪಾಲಿಕೆ ಆರೋಗ್ಯ ವಿಭಾಗದ ಅಧಿಕಾರಿ ಸಿಬ್ಬಂದಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ.

ಜತೆಗೆ ಕೊರೋನಾ ನಿಯಂತ್ರಕ್ಕೆ ಬರುವವರೆಗೆ ಮುಂಬರುವ ಎಲ್ಲಾ ಸಾರ್ವತ್ರಿಕ ರಜಾ ದಿನಗಳಂದು ಪಾಲಿಕೆಯ ರೆಫರಲ್‌ ಹಾಗೂ ಹೆರಿಗೆ ಆಸ್ಪತ್ರೆಗಳು, ನಗರ ಆರೋಗ್ಯ ಕುಟುಂಬ ಕಲ್ಯಾಣ ಕೇಂದ್ರ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ವೈದ್ಯರುಗಳು, ಕಚೇರಿಯ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ ಹಾಗೂ ಎಲ್ಲಾ ಕಾಯಂ ಮತ್ತು ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿ ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ರವಿಕುಮಾರ್‌ ಸುರಪೂರ ಆದೇಶಿಸಿದ್ದಾರೆ.

ಕೊರೋನಾ ವೈರಸ್‌ ತಗು​ಲಿ​ದ್ದ ನಗರದ ಟೆಕ್ಕಿ ಗುಣ​ಮು​ಖ...

ಪರಿಸ್ಥಿತಿ ಸುಧಾರಿಸುವವರೆಗೂ ಆಸ್ಪತ್ರೆಯ ಕಚೇರಿ ಮುಖ್ಯಸ್ಥರು ವೈದ್ಯರು, ಅಧಿಕಾರಿ, ಸಿಬ್ಬಂದಿಗೆ ರಜೆ ಮಂಜೂರು ಮಾಡದಂತೆ ಸೂಚಿಸಿದ್ದಾರೆ. ಈಗಾಗಲೇ ರಜೆಯ ಮೇಲೆ ತೆರಳಿರುವವರನ್ನು ಕೂಡಲೇ ಕರ್ತವ್ಯಕ್ಕೆ ಹಾಜರಾಗಲು ವಿಶೇಷ ಆಯುಕ್ತರು ಸೂಚಿಸಿದ್ದಾರೆ.

ಕೊರೊನಾ ವೈರಸ್‌ ಹರಡುತ್ತಿರುವ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಪಬ್‌, ಮಾಲ್‌, ರೆಸ್ಟೋರೆಂಟ್‌, ಥಿಯೇಟರ್‌ಗಳನ್ನು ಬಂದ್‌ ಮಾಡಲು ಸೂಚಿಸಿದೆ. ಆದರೆ, ಬಿಬಿಎಂಪಿ ನಗರದಲ್ಲಿ ಮೊದಲು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಆರೋಗ್ಯ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸಬೇಕು.

-ಆರ್‌.ವಿ.ಗೋಪಿ, ಅಧ್ಯಕ್ಷ, ಕಲಾಸಿಪಾಳ್ಯ ತರಕಾರಿ ಹಾಗೂ ಹಣ್ಣು ವ್ಯಾಪಾರಿಗಳ ಸಂಘ.