ಬೆಂಗಳೂರು (ಏ.20): ಆಟೋ ರಿಕ್ಷಾದಲ್ಲಿ ಮೂರು ದಿನಗಳ ಕಾಲ ಹತ್ತಾರು ಆಸ್ಪತ್ರೆ ಸುತ್ತಾಡಿದರೂ ಸಕಾಲಕ್ಕೆ ಆ್ಯಕ್ಸಿಜನ್‌ ಹಾಗೂ ಬೆಡ್‌ ಸಿಗದೆ ಕೊರೋನಾ ಸೋಂಕಿತ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ರಾಜಾಜಿನಗರದ ನಿವಾಸಿ ಶಕುಂತಲಾ ಮೃತ ದುರ್ದೈವಿ. ಕಳೆದ ಶನಿವಾರ ಶಕುಂತಲಾಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಿಸಲು ಕುಟುಂಬದ ಸದಸ್ಯರು ಆಟೋದಲ್ಲಿ ನಗರದ ಹತ್ತಾರು ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಬೌರಿಂಗ್‌ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ, ಎಂ.ಎಸ್‌.ರಾಮಯ್ಯ ಸೇರಿದಂತೆ ಎಲ್ಲ ಪ್ರಮುಖ ಆಸ್ಪತ್ರೆಗಳನ್ನು ಸಂಪರ್ಕಿಸಿದ್ದಾರೆ. ಆದರೆ, ಯಾವ ಆಸ್ಪತ್ರೆಯಲ್ಲಿಯೂ ಬೆಡ್‌ ದೊರೆತ್ತಿಲ್ಲ.

ಉಸಿರಾಟದ ಸಮಸ್ಯೆ ಹೆಚ್ಚಾಗಿದ್ದು, ಆಕ್ಸಿಜನ್‌ ಸಹ ಸಿಕಿಲ್ಲ. ಯಾವ ಆಸ್ಪತ್ರೆಗೆ ಹೋದರೂ ಬೆಡ್‌ ಇಲ್ಲ. ಆಕ್ಸಿಜನ್‌ ಇಲ್ಲ ಎಂದು ಹೇಳಿ ಅಲ್ಲಿಂದ ಸಾಗ ಹಾಕಿದ್ದಾರೆ. ಕಡೆಗೆ ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಬೆಡ್‌ ಸಿಕ್ಕರೂ ಚಿಕಿತ್ಸೆ ಫಲಿಸದೇ ಶಕುಂತಲಾ ಕೊನೆಯುಸಿರೆಳೆದಿದ್ದಾರೆ.

ಬೆಂಗಳೂರಲ್ಲಿ ಬೆಚ್ಚಿ ಬೀಳಿಸಿದ ಕೊರೋನಾ : ದಾಖಲೆಯ ಸಾವು ..

ನಗರದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೊರೋನಾ ಸೋಂಕಿತರಿಗೆ ಬೆಡ್‌ ಹಾಗೂ ಆಕ್ಸಿಜನ್‌ ವ್ಯವಸ್ಥೆ ಇಲ್ಲ. ಆಕ್ಸಿಜನ್‌ ಸಿಕ್ಕಿದ್ದರೆ ನಮ್ಮ ತಾಯಿ ಬದುಕುತ್ತಿದ್ದರು. ಸರ್ಕಾರ ಕೊರೋನಾ ಸೋಂಕಿತರಿಗೆ ಅಷ್ಟುಬೆಡ್‌, ಇಷ್ಟುಬೆಡ್‌ ಮೀಸಲಿರಿಸಿದ್ದೇವೆ ಎಂದು ಹೇಳುತ್ತಿದೆ. ಎಲ್ಲಿದೆ ಬೆಡ್‌? ಆಸ್ಪತ್ರೆ ಸಿಬ್ಬಂದಿ ಕಾಲಿಗೆ ಬಿದ್ದರೂ ಬೆಡ್‌ ಕೊಡಲಿಲ್ಲ ಎಂದು ಮೃತರ ಪುತ್ರ ದೇವೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ಕನಿಷ್ಠ ಪಕ್ಷ ಒಂದು ಆ್ಯಂಬುಲೆನ್ಸ್‌ ಸಿಗುತ್ತಿಲ್ಲ. ಮೂರು ದಿನಗಳ ಕಾಲ ತಾಯಿಯನ್ನು ಆಟೋದಲ್ಲಿ ಕೂರಿಸಿಕೊಂಡು ನಗರದ ಪ್ರಮುಖ ಆಸ್ಪತ್ರೆಗಳಿಗೆ ಅಲೆದಾಡಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಕಡೆಗೆ ಖಾಸಗಿ ಆಸ್ಪತ್ರೆಯೊಂದರಲ್ಲಿ ಬೆಡ್‌ ಸಿಕ್ಕಿತು. ಆದರೆ, ಅಷ್ಟರಲ್ಲಿ ಉಸಿರಾಟದ ಸಮಸ್ಯೆ ಹೆಚ್ಚಾಗಿ ತಾಯಿ ಮೃತಪಟ್ಟರು. ಬೆಡ್‌ ಹಾಗೂ ಆಕ್ಸಿಜನ್‌ ಸಿಗದೆ ತಾಯಿ ಅನುಭವಿಸಿದ ಯಾತನೆ ಯಾರಿಗೂ ಬಾರದಿರಲಿ ಎಂದು ಕಣ್ಣೀರಿಟ್ಟರು.