ಬೆಂಗಳೂರಲ್ಲಿ 53 ಸಾವಿರಕ್ಕೇರಿದ ಕೊರೋನಾ ಸಕ್ರಿಯ ಪ್ರಕರಣ: ಆತಂಕದಲ್ಲಿ ಜನತೆ
ಸೋಂಕು ಹೆಚ್ಚಳದೊಂದಿಗೆ ಸಕ್ರಿಯ ಕೇಸ್ ಸಂಖ್ಯೆಯೂ ಹೆಚ್ಚಳ| ಬೆಂಗಳೂರಲ್ಲಿ ಶನಿವಾರ 14 ಮಂದಿ ಪುರುಷರು ಹಾಗೂ 17 ಮಂದಿ ಮಹಿಳೆಯರು ಸೇರಿ 21 ಮಂದಿ ಸೋಂಕಿಗೆ ಬಲಿ| ಬಿಬಿಎಂಪಿ ಮತ್ತು ಖಾಸಗಿ ಆರೈಕೆ ಕೇಂದ್ರದಲ್ಲಿ 2,508 ಮಂದಿಗೆ ಆರೈಕೆ|
ಬೆಂಗಳೂರು(ಅ.04): ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ 3,925 ಹೊಸ ಸೋಂಕು ಪ್ರಕರಣ ಪತ್ತೆಯಾಗಿದೆ. ಇದೇ ವೇಳೆ ಸಕ್ರಿಯ ಪ್ರಕರಣಗಳ ಸಂಖ್ಯೆ ಬರೋಬ್ಬರಿ 53,292ಕ್ಕೆ ಏರಿಕೆಯಾಗಿದೆ.
ನಗರದಲ್ಲಿ ದಿನದಿಂದ ದಿನಕ್ಕೆ ಹೊಸ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುವುದರ ಜೊತೆಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಶನಿವಾರಕ್ಕೆ ನಗರದ ಸರ್ಕಾರಿ, ಖಾಸಗಿ ಕೋವಿಡ್‌ಆಸ್ಪತ್ರೆ, ಸರ್ಕಾರಿ ಮತ್ತು ಖಾಸಗಿ ಮೆಡಿಕಲ್‌ನಲ್ಲಿ 8,372 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಬಿಎಂಪಿ ಮತ್ತು ಖಾಸಗಿ ಆರೈಕೆ ಕೇಂದ್ರದಲ್ಲಿ 2,508 ಮಂದಿ ಆರೈಕೆ ಪಡೆಯುತ್ತಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ 4923 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 20 ಸಾವಿರಕ್ಕೂ ಅಧಿಕ ಮಂದಿ ಹೋಂ ಐ ಸೋಲೇಷನ್‌ನಲ್ಲಿ ಇದ್ದು, ಒಟ್ಟಾರೆ ನಗರದಲ್ಲಿ 53 ಸಾವಿರ ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 291 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳ ತೀವ್ರ ನಿಗಾ ಘಟಕಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೊರೋನಾ, ಗರಿಷ್ಠ ಸಾವಿನಲ್ಲಿ ರಾಜ್ಯದ ಎರಡು ಜಿಲ್ಲೆಗಳು!
ನಗರದಲ್ಲಿ ಶನಿವಾರ 3,925 ಹೊಸ ಸೋಂಕು ಪ್ರಕರಣ ಪತ್ತೆಯಾಗಿದ್ದು, ಒಟ್ಟು ಕೊರೋನಾ ಸೋಂಕಿತರ ಸಂಖ್ಯೆ 2,45,700ಕ್ಕೆ ಏರಿಕೆಯಾಗಿದೆ. ಶನಿವಾರ ಒಂದೇ ದಿನ 2,001 ಮಂದಿ ಗುಣಮುಖರಾಗಿದ್ದು, ಒಟ್ಟು ಸಂಖ್ಯೆ 1,89,362ಕ್ಕ ಏರಿಕೆಯಾಗಿದೆ.
21 ಮಂದಿ ಸೋಂಕಿಗೆ ಬಲಿ:
ನಗರದಲ್ಲಿ ಶನಿವಾರ 14 ಮಂದಿ ಪುರುಷರು ಹಾಗೂ 17 ಮಂದಿ ಮಹಿಳೆಯರು ಸೇರಿ 21 ಮಂದಿ ಸೋಂಕಿಗೆ ಬಲಿಯಾಗಿದ್ದು, ಈವರೆಗೆ ಸೋಂಕಿನಿಂದ ಮೃತಪಟ್ಟವರ ಒಟ್ಟು ಸಂಖ್ಯೆ 3,045ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.