ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹಂಚಿದ್ದ ಕುಕ್ಕರ್ ಬ್ಲಾಸ್ಟ್: ಮತದಾರರಲ್ಲಿ ಆತಂಕ
ಶೃಂಗೇರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶಾಸಕ ಟಿಡಿ ರಾಜೇಗೌಡ ಮತದಾರರಿಗೆ ಹಂಚಿಕೆ ಮಾಡಿದ್ದ ಕಳಪೆ ಕುಕ್ಕರ್ ಬ್ಲಾಸ್ಟ್ ಆಗಿದೆ. ಈ ಘಟನೆಯಿಂದ ಕುಕ್ಕರ್ ಪಡೆದವರು ಆತಂಕಕ್ಕೆ ಒಳಗಾಗಿದ್ದಾರೆ.
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.04): ಕಾಂಗ್ರೆಸ್ ಶಾಸಕ ಟಿ. ಡಿ ರಾಜೇಗೌಡ ಬೆಂಬಲಿಗರು ಹಂಚಿದ ಕುಕ್ಕರ್ ಒಂದು ಬ್ಲಾಸ್ಟ್ ಆಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಶಾನುವಳ್ಳಿ ಸಮೀಪ ನಡೆದಿದೆ.ಕೊಪ್ಪ ತಾಲ್ಲೂಕಿನ ಶಾನುವಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಅಗ್ಲಿ ದೇವರಾಜ್ ಎಂಬುವವರ ಮನೆಯಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿದೆ.
ಮನೆಯಲ್ಲಿ ದೇವರಾಜ್ ಅವರ ಪತ್ನಿ ಅಡಿಗೆ ಮಾಡಲೆಂದು ಕುಕ್ಕರ್ ಇಟ್ಟಿದ್ದು, ಎರಡು ವಿಶಲ್ ಕೂಗಿದ ಬಳಿಕ ಭಾರೀ ಶಬ್ದದೊಂದಿಗೆ ಬ್ಲಾಸ್ಟ್ ಆಗಿದೆ. ಜೋರಾಗಿ ಶಬ್ದ ಕೇಳಿಬಂದಿದ್ದರಿಂದ ಅಕ್ಕಪಕ್ಕದ ಮನೆಯವರು ಬಂದಿದ್ದು ಕುಕ್ಕರ್ ಅನ್ನು ಹೊರಗೆಸೆದಿದ್ದಾರೆ. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಬೆಂಬಲಿಗರು ನೀಡಿದ್ದಾರೆ ಎನ್ನಲಾದ ಕುಕ್ಕರ್ ಸ್ಫೋಟಗೊಂಡ ಶಾನುವಳ್ಳಿಯಲ್ಲಿ ನಡೆದಿದ್ದು, ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಕೊಪ್ಪ ತಾಲೂಕಿನ ಶಾನುವಳ್ಳಿಯ ದೇವರಾಜ್ ಎನ್ನುವವರ ಮನೆಯಲ್ಲಿ ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಬೆಂಬಲಿಗರು ನೀಡಿರುವ ಕುಕ್ಕರ್‌ನಲ್ಲಿ ತರಕಾರಿ ಬೇಯಿಸಲು ಇಡಲಾಗಿತ್ತು. ಕಳಪೆ ಗುಣಮಟ್ಟದ ಕುಕ್ಕರ್ ಏಕಾಏಕಿ ಬ್ಲಾಸ್ ಆಗಿದ್ದು, ಸಮೀಪದಲ್ಲೇ ಇದ್ದ ತಾಯಿ ಮಗು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ವಶ: ಶೃಂಗೇರಿ ಶಾಸಕ ರಾಜೇಗೌಡಗೆ ಹಿನ್ನಡೆ
ಶಾಸಕ ಟಿ. ಡಿ. ರಾಜೇಗೌಡ ಬೆಂಬಗಲಿಗರು ಇತ್ತೀಚೆಗೆ ಕುಕ್ಕರ್ ಹಂಚಿದ್ದರು. 450 ರೂಪಾಯಿ ಕುಕ್ಕರ್‌ಗೆ 1,399 ರೂಪಾಯಿ ಲೇಬಲ್ ಅಂಟಿಸಿ ಮನೆ ಮನೆಗೆ ನೀಡಿದ್ದರು. ಕಳಪೆ ಗುಣಮಟ್ಟದ ಕುಕ್ಕರ್ ಆದ ಪರಿಣಾಮ ಬ್ಲಾಸ್ ಆಗಿದೆ ಎಂದು ಸ್ಥಳೀಯರು ಶಾಸಕರ ಬೆಂಬಲಿಗರ ವಿರುದ್ಧ ಆಕ್ರೋಶ ಹೊರ ಹಾಕಿದ್ದು, ಆ ಕುಕ್ಕರ್ ಬೇಡವೇ ಬೇಡ ಎಂದು ಕಿಡಿಕಾರಿದ್ದಾರೆ. ಅಲ್ಲದೇ ಕಾಂಗ್ರೆಸ್ ಶಾಸಕರು ಕಳಪೆ ಕುಕ್ಕರ್ ನೀಡಿ ಜನರ ಜೀವಕ್ಕೆ ಅಪಾಯ ತಂದಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ವಿರುದ್ದ ಬಿಜೆಪಿ ನಾಯಕರ ಕಿಡಿ: ಬಿಜೆಪಿಯವರು ಪ್ರಚಾರಕ್ಕೆಂದು ತೆರಳಿದಾಗ ಕುಕ್ಕರ್ ಬ್ಲಾಸ್ಟ್ ಕುರಿತು ಮಹಿಳೆಯೊಬ್ಬರು ಮಾತನಾಡಿರುವ ವೀಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಕುರಿತು ಕಿಡಿಕಾರಿರುವ ಬಿಜೆಪಿ, ಕಾಂಗ್ರೆಸ್ ನವರು ಕಳಪೆ ಗುಣಮಟ್ಟದ ಕುಕ್ಕರ್ ನೀಡಿ ಜನರ ಜೀವದ ಜೊತೆ ಆಟವಾಡುತ್ತಿದ್ದಾರೆ ಎಂದು ಕಿಡಿ ಕಾರಿದೆ. ಇತ್ತೀಚೆಗೆ ಮಾಜಿ ಶಾಸಕ ಡಿ ಎನ್ ಜೀವರಾಜ್ ‘ಕುಕ್ಕರ್ ತಗೊಳ್ಳಬೇಡಿ ಎಂದು ನಾನು ಹೇಳಲ್ಲ.. ಆದರೆ ಅವು ತುಂಬಾ ಕಡೆ ಬ್ಲಾಸ್ಟ್ ಆಗ್ತಿವೆ, ಹೀಗಾಗಿ ನೀವು ಅದನ್ನು ಕುಕ್ಕರ್ ರೀತಿ ಬಳಸದೆ ಪಾತ್ರೆ ರೀತಿಯಲ್ಲಿ ಬಳಸಿ’ ಎಂದು ಹೇಳಿದ್ದರು. ಇದು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೊಳಗಾಗಿತ್ತು.
ಬೆಂಗಳೂರು: ಜೆಡಿಎಸ್ ಶಾಸಕ ಮಂಜುನಾಥ್ ಫೋಟೋ ಇದ್ದ 800 ಬಾಕ್ಸ್ ಕುಕ್ಕರ್ ಜಪ್ತಿ
ಆರೋಪ ನಿರಾಕರಣೆ ಮಾಡಿರುವ ಕಾಂಗ್ರೆಸ್ : ಕಾಂಗ್ರೆಸ್ ಪಕ್ಷದಿಂದ ಯಾವುದೇ ಕುಕ್ಕರನ್ನು ಶಾನುಹಳ್ಳಿ ಗ್ರಾಮದಲ್ಲಿ ಹಂಚಿಕೆ ಮಾಡಿಲ್ಲ, ವಿನಾಕಾರಣ ಶಾಸಕರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುವ ಕೆಲಸವನ್ನು ಬಿಜೆಪಿ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಮಾಡುತ್ತಿದ್ದಾರೆ ಇದು ಸತ್ಯಕ್ಕೆ ದೂರವಾದ ಘಟನೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಮುಖಂಡ ನವೀನ್ ಸಮರ್ಥನೆ ನೀಡಿದ್ದಾರೆ. ಶಾನುವಳ್ಳಿ ಗ್ರಾಮದ ದೇವರಾಜ್ ರವರ ಮನೆಯಲ್ಲಿ ಬ್ಲಾಸ್ಟ್ ಆಗಿರುವ ಕುಕ್ಕರ್ ತುಂಬಾ ಹಳೆಯ ಕುಕ್ಕರ್ ಎಂದು ಸಾಮಾಜಿಕ ಜಾಲತಾಣದಲ್ಲಿ ನವೀನ್ ವಿಡಿಯೋ ಒಂದನ್ನು ಅಪ್ಲೋಡ್ ಮಾಡಿದ್ದಾರೆ.