ನಿಖಾಹ್ ಆದ್ರೂ ಪತಿ ದೂರ: ನ್ಯಾಯಕ್ಕಾಗಿ ಮಸೀದಿ ಮೊರೆ ಹೋದ ಮತಾಂತರಿತ ಪತ್ನಿ
ಫೇಸ್‌ಬುಕ್ ಮೂಲಕ ಪರಿಚಯ| ಇಸ್ಲಾಂ ಧರ್ಮ ಒಪ್ಪಿ ಮತಾಂತರ|ಇಸ್ಲಾಂ ಸಂಪ್ರದಾಯದಂತೆಯೇ ನಡೆದ ನಿಖಾಹ್| ಸಂತ್ತಸ್ತ ಮಹಿಳೆಗೆ ಜೀವ ಬೆದರಿಕೆ|
ಮಂಗಳೂರು(ನ.27): ದೇಶದಲ್ಲಿ ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಮದುವೆಗಾಗಿ ಮತಾಂತರ ತಡೆಗೆ ಕಾನೂನು ಜಾರಿಗೊಳಿಸುತ್ತಿರುವುದು ವ್ಯಾಪಕ ಸುದ್ದಿಯಲ್ಲಿದೆ. ಇದೇ ವೇಳೆ ಮದುವೆಗಾಗಿ ಮತಾಂತರಗೊಂಡು, ಬಳಿಕ ಪತಿ ದೂರವಾದ ಪ್ರಕರಣದಲ್ಲಿ ಸಂತ್ರಸ್ತೆಗೊಂಡ ಮತಾಂತರಿತ ಪತ್ನಿ ನ್ಯಾಯಕ್ಕಾಗಿ ಮಸೀದಿಯ ಮೊರೆ ಹೋಗಲು ತೀರ್ಮಾನಿಸಿರುವ ವಿದ್ಯಮಾನ ಮಂಗಳೂರಿನಲ್ಲಿ ನಡೆದಿದೆ.
ಮೂಲತಃ ಸುಳ್ಯ ಗಾಂಧಿನಗರ ನಿವಾಸಿ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಹಾಗೂ ಆತನ ಕುಟುಂಬದ ವಿರುದ್ಧ ಆತನ ಮತಾಂತರಿತ ಪತ್ನಿ ಶಾಂತಿ ಜೂಬಿ ಯಾನೆ ಆಸಿಯಾ ಮಂಗಳೂರಿನಲ್ಲಿ ಬುಧವಾರ ಸುದ್ದಿಗೋಷ್ಠಿ ಕರೆದು ಗಂಭೀರ ಆರೋಪ ಮಾಡಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ ಮುಸ್ಲಿಂ ಕಾನೂನಿನಂತೆ ಮದುವೆ(ನಿಖಾಹ್) ಆಗಿದ್ದ ನನ್ನನ್ನು ಪತಿ ಈಗ ದೂರ ಮಾಡುತ್ತಿದ್ದು, ಇದರಿಂದ ನಾನು ಅನಾಥವಾಗುವಂತಾಗಿದೆ. ಪೊಲೀಸರ ಮೊರೆ ಹೋದರೂ ತನಗೆ ನ್ಯಾಯ ದೊರಕಿಲ್ಲ ಎಂದು ಕೇರಳ ಕಣ್ಣೂರಿನ ಶಾಂತಿ ಜೂಬಿ ಯಾನೆ ಆಸಿಯಾ ಆರೋಪಿಸಿದ್ದಾರೆ. ಆದ್ದರಿಂದ ನ.27ರಂದು ಸುಳ್ಯ ಗಾಂಧಿನಗರ ಮಸೀದಿಯ ಮುಂದೆ ಧರಣಿ ನಡೆಸಿ ಮತ್ತೊಮ್ಮೆ ನ್ಯಾಯಕ್ಕಾಗಿ ಆಗ್ರಹಿಸುವುದಾಗಿ ಅವರು ಹೇಳಿದ್ದಾರೆ.
ನಾನು ಕೇರಳ ಕಣ್ಣೂರಿನ ತೀಯಾ ಕುಟುಂಬದವಳಾಗಿದ್ದು, 2017ರ ಜುಲೈ 12ರಂದು ಸುಳ್ಯ ಗಾಂಧಿನಗರ ನಿವಾಸಿ ಇಬ್ರಾಹಿಂ ಖಲೀಲ್ ಕಟ್ಟೆಕಾರ್ ಎಂಬವರೊಂದಿಗೆ ನಿಖಾಹ್ ಆಗಿತ್ತು. ಆದರೆ ಈಗ ಇಬ್ರಾಹಿಂರವರ ಅಣ್ಣ ಶಿಹಾಬ್ ಮತ್ತು ಅವರ ಮನೆಯವರು ನನ್ನನ್ನು ಪತಿಯಿಂದ ದೂರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
'ಲಷ್ಕರ್ ಜಿಂದಾಬಾದ್' ; ಮಂಗಳೂರಿನಲ್ಲಿ ಉಗ್ರ ಸಂಘಟನೆ ಪರ ಗೋಡೆ ಬರಹ
ಮನೆಯವರ ಒತ್ತಡಕ್ಕೆ ಮಣಿದು ನನ್ನ ಪತಿ ಇಬ್ರಾಹಿಂ ಖಲೀಲ್ ಕೂಡ ನನ್ನನ್ನು ದೂರ ಮಾಡುತ್ತಿದ್ದಾರೆ. ಇದರಿಂದ ತಾನು ಬೀದಿಗೆ ಬರುವಂತಾಗಿದೆ. ಪೊಲೀಸ್ ಠಾಣೆ ಮಾತ್ರವಲ್ಲ ಸುಳ್ಯ ಗಾಂಧಿನಗರ ಮಸೀದಿಗೆ ಹೋದರೂ ನÜನಗೆ ನ್ಯಾಯ ಸಿಕ್ಕಿಲ್ಲ. ಎಲ್ಲರೂ ತನ್ನನ್ನು ಅವಮಾನಿಸುತ್ತಿದ್ದಾರೆ ಎಂದರು.
ಇಬ್ರಾಹಿಂ ಖಲೀಲ್ ಕಟ್ಟೆಮಾರ್‌ರವರು ಫೇಸ್‌ಬುಕ್ ಮೂಲಕ ಪರಿಚಯವಾಗಿದ್ದು, ನಾನು ಇಸ್ಲಾಂ ಧರ್ಮ ಒಪ್ಪಿ ಮತಾಂತರಗೊಂಡಿದ್ದೆ. ಇಸ್ಲಾಂ ಸಂಪ್ರದಾಯದಂತೆಯೇ ನಿಖಾಹ್ ನಡೆದಿದೆ. ಆದರೆ ಇಬ್ರಾಹಿಂ ಅವರ ಅಣ್ಣ ಶಿಹಾಬ್ ಅವರು ನಮ್ಮನ್ನು ದೂರ ಮಾಡುತ್ತಿದ್ದು ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ. ಈ ವಿಷಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೂ ತಂದಿದ್ದೇನೆ. ಆದರೆ ಪ್ರಯೋಜನವಾಗಿಲ್ಲ. ಸುಳ್ಯ ಪೊಲೀಸ್ ಠಾಣೆಯಲ್ಲಿ ಕೂಡ ತನಗೆ ನ್ಯಾಯ ದೊರಕಿಲ್ಲ. ನ.27ರಂದು ಸುಳ್ಯ ಗಾಂಧಿನಗರ ಮಸೀದಿಯ ಮುಂದೆ ಮತ್ತೊಮ್ಮೆ ನ್ಯಾಯಕ್ಕಾಗಿ ಆಗ್ರಹಿಸುತ್ತೇನೆ ಮತ್ತೆ ನ್ಯಾಯ ಸಿಗದೇ ಇದ್ದರೆ ಮುಂದೆ ಬದುಕುವ ಇಚ್ಛೆ ನನಗಿಲ್ಲ ಎಂದು ಶಾಂತಿ ಜೂಬಿ ಯಾನೆ ಆಸಿಯಾ ಬೇಸರ ವ್ಯಕ್ತಪಡಿಸಿದರು. ಆಧುನಿಕ್ ಹ್ಯೂಮನ್ ರೈಟ್ಸ್ ಕಮಿಟಿ ಇಂಡಿಯಾ ಇದರ ರಾಜ್ಯಾಧ್ಯಕ್ಷ ದೀಪಕ್ ರಾಜೇಶ್ ಕುವೆಲ್ಲೊ, ಜಿಲ್ಲಾಧ್ಯಕ್ಷ ಶಬ್ಬೀರ್ ಉಳ್ಳಾಲ್, ಉಪಾಧ್ಯಕ್ಷೆ ಮಾರಿಯಾ ಡಿಸೋಜಾ, ದೂರು ಸಲಹೆ ಅಧ್ಯಕ್ಷೆ ಹಸೀನಾ ಇದ್ದರು.