ಬಿಬಿಎಂಪಿ: ಮುಂದುವರಿದ ರಾಜ್ಯ ಗುತ್ತಿಗೆದಾರರ ಕಮಿಷನ್ ಗದ್ದಲ
ನಮ್ಮ ಬಳಿ ಯಾರೂ ಕಮಿಷನ್ ಕೇಳಿಲ್ಲ. ಕಮಿಷನ್ ಕೇಳಲಾಗಿದೆ ಎಂಬ ಆರೋಪ ಮಾಡಿದವರು ದೊಡ್ಡ ಗುತ್ತಿಗೆದಾರರು. ಉಪ ಮುಖ್ಯಮಂತ್ರಿಗಳ ಮೇಲಿನ ಆರೋಪ ನಿರಾಧಾರ. ಬದಲಾಗಿ ಅವರು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬಿಲ್ ಪಾವತಿಗೆ ಸಮ್ಮತಿಸಿದ್ದಾರೆ ಎಂದ ಸಂಘದ ಅಧ್ಯಕ್ಷ ಬಿ.ಕೆ. ನಾಗೇಂದ್ರ
ಬೆಂಗಳೂರು(ಆ.11): ಬಿಬಿಎಂಪಿ ಗುತ್ತಿಗೆದಾರರ ಒಂದು ಸಂಘವು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮೇಲೆ ಕಮಿಷನ್ ಆರೋಪ ಮಾಡಿದ್ದರೆ, ಇನ್ನೊಂದು ಸಂಘವು ಇದನ್ನು ನಿರಾಕರಿಸಿದೆ. ‘ಶಿವಕುಮಾರ್ ಮೇಲೆ ಮಾಡಿರುವ ಕಮಿಷನ್ ಆರೋಪಗಳು ಸತ್ಯಕ್ಕೆ ದೂರವಾಗಿವೆ. ಈವರೆಗೂ ನಮಗೆ ಯಾರೂ ಕಮಿಷನ್ ಕೇಳಿಲ್ಲ’ ಎಂದು ‘ಕರ್ನಾಟಕ ರಾಜ್ಯ ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಹಾಗೂ ಬಿಬಿಎಂಪಿ ಗುತ್ತಿಗೆದಾರರ ಸಂಘ’ ಹೇಳಿದೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಿ.ಕೆ. ನಾಗೇಂದ್ರ, ‘ನಮ್ಮ ಬಳಿ ಯಾರೂ ಕಮಿಷನ್ ಕೇಳಿಲ್ಲ. ಕಮಿಷನ್ ಕೇಳಲಾಗಿದೆ ಎಂಬ ಆರೋಪ ಮಾಡಿದವರು ದೊಡ್ಡ ಗುತ್ತಿಗೆದಾರರು. ಉಪ ಮುಖ್ಯಮಂತ್ರಿಗಳ ಮೇಲಿನ ಆರೋಪ ನಿರಾಧಾರ. ಬದಲಾಗಿ ಅವರು ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಬಿಲ್ ಪಾವತಿಗೆ ಸಮ್ಮತಿಸಿದ್ದಾರೆ’ ಎಂದರು.
ನಗರದಲ್ಲಿ ಮತ್ತೆ ಫ್ಲೆಕ್ಸ್, ಬ್ಯಾನರ್‌ಗೆ ಅವಕಾಶ ನೀಡಿ ಆದಾಯ ಗಳಿಸಲು ಬಿಬಿಎಂಪಿ ಚಿಂತನೆ?
‘ಪ್ರತಿ ಬಾರಿ ಹೊಸ ಸರ್ಕಾರ ಬಂದಾಗ ಕಾಮಗಾರಿಗಳ ಬಿಲ್‌ಗಳ ಹಣ ಪಾವತಿಸುವಲ್ಲಿ ತಡವಾಗುತ್ತದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಕಾಮಗಾರಿಗಳ ನೈಜತೆ ಪರಿಶೀಲಿಸಿ ಬಿಲ್ ಮೊತ್ತವನ್ನು ಪಾವತಿಸುವ ಭರವಸೆ ನೀಡಿದ್ದಾರೆ’ ಎಂದು ಹೇಳಿದರು.
‘ಸಣ್ಣ ಮತ್ತು ಮಧ್ಯಮ ಗುತ್ತಿಗೆದಾರರು ಬಿಬಿಎಂಪಿ ವ್ಯಾಪ್ತಿಯಲ್ಲಿ 2021ರ ಏಪ್ರಿಲ್‌ನಿಂದ 2023ರ ಜೂನ್‌ವರೆಗೂ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಂಡಿದ್ದಾರೆ. ವಾರ್ಡ್ ಮಟ್ಟದಲ್ಲಿ ಕೈಗೊಂಡ ಅಭಿವೃದ್ಧಿ ಕಾಮಗಾರಿಗಳ 4,440ಕ್ಕೂ ಹೆಚ್ಚು ಬಿಲ್‌ಗಳ . 2,595.42 ಕೋಟಿಗೂ ಹೆಚ್ಚು ಬಾಕಿ ಮೊತ್ತವನ್ನು ಕೂಡಲೇ ಪಾವತಿಸಬೇಕಿದೆ. ಸಾಕಷ್ಟುಬಾರಿ ಕೇಳಿಕೊಂಡರೂ ಈವರೆಗೆ ಹಣ ಬಿಡುಗಡೆಯಾಗಿಲ್ಲ. ಇದರಿಂದ, ಗುತ್ತಿಗೆದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ 28 ತಿಂಗಳಿಂದ ಬಿಬಿಎಂಪಿ ಕಚೇರಿಗೆ ಅಲೆದಾಡುತ್ತಿದ್ದಾರೆ. ಬಿಬಿಎಂಪಿ ಮುಖ್ಯ ಆಯುಕ್ತರು ಸ್ಪಂದಿಸುತ್ತಿಲ್ಲ’ ಎಂದು ದೂರಿದರು. ಈ ವೇಳೆ ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ ಸ್ವಾಮಿ ಜಿ. ಇದ್ದರು.