ಮೈಸೂರಿನಲ್ಲಿ ಟಿಪ್ಪು ಸುಲ್ತಾನ್‌ 100 ಅಡಿ ಎತ್ತರದ ಪ್ರತಿಮೆ ನಿರ್ಮಾಣ

ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದ ಅಸ್ಮಿತೆ ಉಳಿಸಿಕೊಳ್ಳಲು ಮೈಸೂರಿನಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು ಎಂದು ಶಾಸಕ ತನ್ವೀರ್‌ ಸೇಠ್‌ ಘೋಷಿಸಿದರು.

Construction of 100 feet tall statue of Tipu Sultan in Mysore snr

  ಮೈಸೂರು (ನ.11):  ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ಮುಸ್ಲಿಂ ಸಮುದಾಯದ ಅಸ್ಮಿತೆ ಉಳಿಸಿಕೊಳ್ಳಲು ಮೈಸೂರಿನಲ್ಲಿ ಟಿಪ್ಪು ಸುಲ್ತಾನರ 100 ಅಡಿ ಎತ್ತರದ ಪ್ರತಿಮೆ ನಿರ್ಮಿಸಲಾಗುವುದು ಎಂದು ಶಾಸಕ ತನ್ವೀರ್‌ ಸೇಠ್‌ ಘೋಷಿಸಿದರು.

ರಾಜೀವ್‌ನಗರ ಅಲ್‌ ಬದರ್‌ ಮೈದಾನದಲ್ಲಿ ಟಿಪ್ಪು ಕನ್ನಡ (Kannada)  ರಾಜ್ಯೋತ್ಸವ ವೇದಿಕೆಯು ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಟಿಪ್ಪು (Tipu sultan)  ಉತ್ಸವದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಸ್ಲಾಂ ಧರ್ಮದಲ್ಲಿ ಪ್ರತಿಮೆ ನಿರ್ಮಾಣಕ್ಕೆ ಅವಕಾಶವಿಲ್ಲ. ಇದ್ದಿದ್ದರೇ ಮನೆಗೊಂದರಂತೆ ಟಿಪ್ಪು ಪ್ರತಿಮೆ ನಿರ್ಮಾಣವಾಗುತ್ತಿತ್ತು. ನಮ್ಮನ್ನು ಒಗ್ಗಟ್ಟಾಗಿಸುವ ಶಕ್ತಿ ಟಿಪ್ಪು ಹೆಸರಿಗಿದೆ. ಇಂದು ವಿವಿಧ ಪಕ್ಷಗಳಲ್ಲಿರುವ ಒಂದೇ ಸಮುದಾಯದ ಮುಖಂಡರು ಟಿಪ್ಪು ಹೆಸರಲ್ಲಿ ಒಂದಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಹೇಳಿದರು.

ಟಿಪ್ಪು ಹೆಸರಿಗೆ ಅನೇಕ ಅಪಚಾರಗಳನ್ನು ಮಾಡಲಾಗುತ್ತಿದೆ. ಸುಳ್ಳು ಕತೆಗಳನ್ನು ಸೃಷ್ಟಿಸಿ ಜನರನ್ನು ತಪ್ಪು ದಾರಿಗೆ ಎಳೆಯಲಾಗುತ್ತಿದೆ. ಟಿಪ್ಪು ಅಭಿಮಾನಿಗಳು, ನಮ್ಮ ಸಮುದಾಯ ಎಲ್ಲವನ್ನೂ ಮೌನವಾಗಿ ಸಹಿಸುತ್ತಿದೆ. ಕಾಲ ಬಂದಾಗ ಅದಕ್ಕೆ ಸ್ಪಷ್ಟಉತ್ತರ ನೀಡುತ್ತೇವೆ ಎಂದು ಅವರು ತಿಳಿಸಿದರು.

ಟಿಪ್ಪು ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಕುರಾನ್‌ ಮುಂದಿಟ್ಟು ಸರ್ವಶಕ್ತವಾದ ಅಲ್ಲಾಹ್‌ ನನ್ನು ಸಾಕ್ಷೀಕರಿಸಿ ಜನಪರ ಆಡಳಿತ ನಡೆಸಿದರು. ಮೈಸೂರು ರಾಜ್ಯವನ್ನಾಳಿದರೂ 260 ವರ್ಷಗಳ ಹಿಂದೆಯೇ ಶ್ರೀರಂಗಪಟ್ಟಣದ ಗುಂಬಜ್‌ ದ್ವಾರದ ಮೇಲೆ ರಿಯಾಸತೇ ದಖನ್‌ ಕರ್ನಾಟಕ್‌ ಎಂದು ಬರೆಸಿದ್ದಾರೆ. ಅಂದರೆ ಕರ್ನಾಟಕ ಎಂಬ ಹೆಸರಿನ ಕಲ್ಪನೆಯೇ ಇಲ್ಲದ ಅವರ ಆಳ್ವಿಕೆಯಲ್ಲಿ ಈ ರಾಜ್ಯವನ್ನು ಕರ್ನಾಟಕ ಎಂದು ಮೊಟ್ಟಮೊದಲ ಬಾರಿಗೆ ಸಂಬೋಧಿಸಿದ ಕೀರ್ತಿ ಟಿಪ್ಪುಗೆ ಸಲ್ಲುತ್ತದೆ ಎಂದರು.

ಇದಕ್ಕೂ ಮುನ್ನ ಶಾಸಕರಾದ ತನ್ವೀರ್‌ ಸೇಠ್‌, ಎಚ್‌. ವಿಶ್ವನಾಥ್‌ ಅವರನ್ನು ಮೆರವಣಿಗೆಯಲ್ಲಿ ವೇದಿಕೆಗೆ ಕರೆ ತರಲಾಯಿತು. ನಂತರ ಕನ್ನಡ ಬಾವುಟ ಧ್ವಜಾರೋಹಣ ನಡೆಸಿ ನಾಡಗೀತೆ ಹಾಡಲಾಯಿತು. ಕಾರ್ಯಕ್ರಮ ಮುಗಿದ ನಂತರ ಶಾಸಕ ತನ್ವೀರ್‌ ಸೇಠ್‌ ಪಕ್ಷಭೇದ ಮರೆತು ಎಲ್ಲರ ಜತೆಗೂಡಿ ಊಟ ಮಾಡಿದರು. ಟಿಪ್ಪು ಉತ್ಸವ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದರು.

ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್‌ ಮಜೀದ್‌, ಮಾಜಿ ಮೇಯರ್‌ಗಳಾದ ಅಯೂಬ್‌ ಖಾನ್‌, ಪುಷ್ಪಲತಾ ಜಗನ್ನಾಥ್‌, ಪಾಲಿಕೆ ಸದಸ್ಯರಾದ ಆಫ್ತಾಬ್‌, ಸುಹೇಲ್‌ ಬೇಗ್‌, ಮಾಜಿ ಸದಸ್ಯ ಶೌಕತ್‌ ಪಾಷ, ಎಂ.ಎಫ್‌. ಕಲೀಂ, ಪ್ರೊ.ಪಿ.ವಿ. ನಂಜರಾಜ ಅರಸು, ಪ್ರೊ.ಬಿ.ಪಿ. ಮಹೇಶ್‌ ಚಂದ್ರಗುರು, ಎಂ. ಕಲೀಂ ಅಹಮದ್‌, ಮೌಲಾನಾ ಅರ್ಷದ್‌, ಅಬ್ದುಲ್‌ ಖಾದರ್‌ ಷಾಹೀದ್‌ ಮೊದಲಾದವರು ಇದ್ದರು.

ಟಿಪ್ಪು ಸುಲ್ತಾನ್‌ ಹೆಸರು ಕನ್ನಡ ನಾಡಿನಲ್ಲಿ ಅಜರಾಮರ- ಎಚ್‌. ವಿಶ್ವನಾಥ್‌

ಸ್ವಾಭಿಮಾನಕ್ಕೆ ಮತ್ತೊಂದು ಹೆಸರೇ ಟಿಪ್ಪು ಸುಲ್ತಾನ್‌. ಟಿಪ್ಪು ಸುಲ್ತಾನ್‌ ಹೆಸರು ಕನ್ನಡ ನಾಡಿನಲ್ಲಿ ಅಜರಾಮರ ಎಂದು ವಿಧಾನಪರಿಷತ್‌ ಸದಸ್ಯ ಹಾಗೂ ಮಾಜಿ ಸಚಿವ ಎಚ್‌. ವಿಶ್ವನಾಥ್‌ ತಿಳಿಸಿದರು.

ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪಗೇನು ಗೊತ್ತು ಟಿಪ್ಪು ಚರಿತ್ರೆ? ಇನ್ನೂ ಸಂಸದ ಪ್ರತಾಪ್‌ ಸಿಂಹ 80 ಸಾವಿರ ಜನರನ್ನು ಟಿಪ್ಪು ಕೊಂದ ಎಂದು ಸುಳ್ಳು ಸುಳ್ಳನ್ನೇ ಹೇಳುತ್ತಾರೆ. ಅಂದಿನ ಮೈಸೂರು ಸಂಸ್ಥಾನದ ಜನಸಂಖ್ಯೆ ಎಷ್ಟಿತ್ತು ಎನ್ನುವುದನ್ನು ಮೊದಲು ತಿಳಿಯಲಿ ಎಂದು ಅವರು ಕುಟುಕಿದರು.

ರೈಲಿನ ಮೇಲೆ ಟಿಪ್ಪು ಅವರ ಹೆಸರು ತೆಗೆದಿರಬಹುದು. ಆದರೆ, ಸಮಸ್ತ ಕನ್ನಡಿಗರ ಮನಸ್ಸಿನಿಂದ ಅವರ ಹೆಸರು ತೆಗೆಯಲು ಸಾಧ್ಯವಿಲ್ಲ. ಸುಳ್ಳು ಕತೆಗಳನ್ನು, ನಾಟಕಗಳನ್ನು ಸೃಷ್ಟಿಸಿ ಟಿಪ್ಪು ಹೆಸರಿಗೆ ಅಪಚಾರ ಮಾಡಲಾಗುತ್ತಿದೆ. ಎಂದಿಗೂ ಶತ್ರುಗಳ ಮುಂದೆ ಮಂಡಿಯೂರದ ಜಗತ್ತಿನ ಏಕೈಕ ನಾಯಕ ಟಿಪ್ಪು, ಅನೇಕ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಶೃಂಗೇರಿ ಮಠವನ್ನು ರಕ್ಷಿಸಿರುವುದಕ್ಕೆ ದಾಖಲೆಗಳು ಸಾಕ್ಷಿಯಾಗಿವೆ ಎಂದು ಅವರು ತಿಳಿಸಿದರು.

Latest Videos
Follow Us:
Download App:
  • android
  • ios