ಮಾಲೂರು (ನ.11):  ಹದಿನೈ ವರ್ಷದ ನಂತರ ಇಲ್ಲಿನ ಪುರಸಭೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್‌ ಯಶಸ್ವಿಯಾಗಿದೆ. ಮಂಗಳವಾರ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಮುರಳಿ ಅಧ್ಯಕ್ಷರಾಗಿ, ಭಾರತಮ್ಮ ಶಂಕರಪ್ಪ ಉಪಾಧ್ಯಕ್ಷೆಯಾಗಿ ಆಯ್ಕೆಯಾದರು.

ಪುರಸಭೆಯ 27 ಸದಸ್ಯ ಬಲದಲ್ಲಿ ಕಾಂಗ್ರೆಸ್‌ 12 ಸದಸ್ಯರಿದ್ದಾರೆ. ಜೆಡಿಎಸ್‌ ಒಂದು ಹಾಗೂ ಬಿಜೆಪಿ ಬಂಡಾಯ ಸದಸ್ಯನ ಸಹಕಾರದಿಂದ 14 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ ತನ್ನ ಬುಟ್ಟಿಗೆ ಹಾಕಿತಕೊಂಡಿತು.

ಹತ್ತು ಸದಸ್ಯರಿರುವ ಬಿಜೆಪಿಯಲ್ಲಿ ಒಬ್ಬ ಸದಸ್ಯೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಪಕ್ಷದ ಸದಸ್ಯರ ಸಂಖ್ಯೆ ಒಂಭತ್ತುಕ್ಕೆ ಇಳಿಯಿತು. ಆದರೂ ಮೂವರು ಪಕ್ಷೇತರ ಸದಸ್ಯರ ಸಹಕಾರ ಪಡೆದ ಸಂಸದ ಮುನಿಸ್ವಾಮಿ ತಮ್ಮ ಮತವನ್ನು ಹಾಕಿದರೂ 13 ಮತಕ್ಕೆ ಸಿಮೀತಗೊಳ್ಳಬೇಕಾಯಿತು. ಪರಿಣಾಮ 2 ಮತಗಳ ಅಂತರದಿಂದ ಬಿಜೆಪಿಯ ಅನಿತಾ ನಾಗರಾಜ್‌ ಮತ್ತು ಮಂಜುಳಾ ಮಂಜುನಾಥ್‌ ಸೋಲನ್ನು ಅನುಭವಿಸಬೇಕಾಯಿತು. ಚುನಾವಣಾಧಿಕಾರಿಯಾಗಿ ತಹಸೀಲ್ದಾರ್‌ ಮಂಜುನಾಥ್‌ ಚುನಾವಣೆ ಪ್ರಕ್ರಿಯೆ ನಡೆಸಿದರು.

ಕಾಂಗ್ರೆಸ್ ಪರವಾಗಿ ನಿಂತ ಸುಮಲತಾ : ನನಗೆ ಬೆಂಬಲಿಸಿದ್ದಕ್ಕೆ ಸಪೋರ್ಟ್ ಎಂದ ಸಂಸದೆ ...

ಕಳೆದ 24 ದಿನದಿಂದ ಪ್ರವಾಸದಲ್ಲಿದ್ದ ಕಾಂಗ್ರೆಸ್‌ ಸದಸ್ಯರ ತಂಡವು ಮಂಗಳವಾರ ಬೆಳಿಗ್ಗೆ ಇಲ್ಲಿನ ಪುರಸಭೆಗೆ ಮತದಾನ ಮಾಡಲು ವಿಸೇಷ ಬಸ್‌ನಲ್ಲಿ ಶಾಸಕರ ನೇತೃತ್ವದಲ್ಲಿ ಆಗಮಿಸಿದರು. ಎಲ್ಲ ಸದಸ್ಯರು ಶ್ವೇತಧಾರಿಗಳಾಗಿ ಬಂದಿದ್ದು ವಿಶೇಷವಾಗಿತ್ತು. ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್‌ ಪಾಲಾಗುತ್ತಿದ್ದ ಹಾಗೆ ಪಕ್ಷದ ಕಾರ‍್ಯಕರ್ತರು ಪಟಾಕಿ ಸಿಡಿಸಿ, ಗೆದ್ದ ಅಭ್ಯರ್ಥಿಗಳ ಮೇಲೆ ಹೂವುಗಳನ್ನು ಎರಚಿ ಮೆರವಣಿಗೆ ನಡೆಸಿದರು.

ಬಂಡಾಯ ಸದಸ್ಯನ ವಿರುದ್ಧ ಪ್ರತಿಭಟನೆ : ಬಿಜೆಪಿಯ ಟಿಕೆಟ್‌ ಸಿಗದೆ ಬಂಡಾಯವೆದ್ದು ಸ್ಪರ್ಧಿಸಿ ಆಯ್ಕೆಯಾಗಿದ್ದ ರಾಜಪ್ಪ ಅವರು ಶಾಸಕ ನಂಜೇಗೌಡನೊಂದಿಗೆ ಪುರಸಭೆ ಬಳಿ ಬಂದಾಗ ಬ್ಯಾರಿಕೇಡ್‌ ಹಿಂದೆ ನಿಂತಿದ್ದ ಬಿಜೆಪಿ ಕಾರ‍್ಯಕರ್ತರು ರಾಜಪ್ಪ ಹಾಗೂ ಗೈರು ಹಾಜರಾದ ವಿಜಯಲಕ್ಷ್ಮೇ ವಿರುದ್ಧ ಘೋಷಣೆ ಕೂಗಿದರು.

ಬಿಗಿ ಪೊಲೀಸ್‌ ಬಂದೋಬಸ್ತ್ : ಪುರಸಭೆ ಸುತ್ತಮುತ್ತ ಜಿಲ್ಲಾ ರಕ್ಷಣಾಧಿಕಾರಿ ಕಾರ್ತಿಕ್‌ ರೆಡ್ಡಿ, ಹೆಚ್ಚುವರಿ ಎಸ್‌ಪಿ ಜಾಹ್ನವಿ ನೇತೃತ್ವದಲ್ಲಿ ಮೂವರು ಡಿವೈಎಸ್‌ಪಿ ಹಾಗೂ 7 ಇನ್ಸ್‌ಪೆಕ್ಟರ್‌ಗಳು ಸೇರಿದಂತೆ ಪೊಲೀಸ್‌ ಬಂದೋಬಸ್‌್ತ ಮಾಡಲಾಗಿತ್ತು. ಪುರಸಭೆಯಿಂದ ಬಸ್‌ ನಿಲ್ದಾಣ ವರೆಗಿನ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಲಾಗಿತ್ತು.

ಸಂಸದ ಮುನಿಸ್ವಾಮಿ ಹಾಗೂ ಕಾಂಗ್ರೆಸ್‌ ಶಾಸಕ ನಂಜೇಗೌಡ ಅವರ ಪ್ರತಿಷ್ಠೆಯಾಗಿದ್ದ ಈ ಚುನಾವಣೆ ಬಿಜೆಪಿ ಸಂಸದರ ಸೋಲೆಂದೆ ಇಲ್ಲಿನ ರಾಜಕೀಯ ವಲಯದಲ್ಲಿ ಪರಿಗಣಿಸಲಾಗುತ್ತಿದೆ.