ಸಿಎಂ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನ| ಮಹಿಳಾ ಶಾಸಕಿಯರು ಸೇರಿದಂತೆ ಸದಸ್ಯರ ಗೌರವಕ್ಕೆ ಧಕ್ಕೆ ತಂದ ಸಚಿವ ಡಾ.ಕೆ. ಸುಧಾಕರ್‌ ವಿರುದ್ಧ ಕ್ರಮಕ್ಕೆ ಆಗ್ರಹ| ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿರುವ ಆರು ಸಚಿವರೂ ರಾಜೀನಾಮೆ ನೀಡಬೇಕು ಎಂಬ ಒತ್ತಾಯ| 

ಬೆಂಗಳೂರು(ಮಾ.26): ವಿಧಾನಸಭೆಯ 224 ಮಂದಿ ಸದಸ್ಯರು ಏಕಪತ್ನಿ ವ್ರತಸ್ಥರೇ ಎಂಬ ಸಚಿವ ಡಾ.ಕೆ. ಸುಧಾಕರ್‌ ಹೇಳಿಕೆಗೆ ಕಾಂಗ್ರೆಸ್‌ನ ನಾಲ್ಕು ಮಂದಿ ಮಹಿಳಾ ಶಾಸಕಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಮಹಿಳಾ ಶಾಸಕಿಯರು ಸೇರಿದಂತೆ ಸದಸ್ಯರ ಗೌರವಕ್ಕೆ ಧಕ್ಕೆ ತಂದಿರುವ ಸಚಿವ ಡಾ.ಕೆ. ಸುಧಾಕರ್‌ ಅವರು ಸಚಿವ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು.

ಗುರುವಾರ ಬೆಳಗ್ಗೆ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಅವರ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಶಾಸಕಿಯರಾದ ಲಕ್ಷ್ಮೇ ಹೆಬ್ಬಾಳ್ಕರ್‌, ರೂಪಾ ಶಶಿಧರ್‌, ಕುಸುಮಾ ಶಿವಳ್ಳಿ ಹಾಗೂ ಸೌಮ್ಯಾರೆಡ್ಡಿ, 224 ಸದಸ್ಯರ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿರುವ ಸುಧಾಕರ್‌ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಗ್ರಹಿಸಿದ್ದಾರೆ.

ಒಬ್ಳೇ ಹೆಂಡತಿ ಚಾಲೆಂಜ್: ಸಚಿವ ಸುಧಾಕರ್‌ ಸಿಡಿಸಿದ ಬಾಂಬ್‌ ಟಾರ್ಗೆಟ್‌ ಯಾರು?

ಅಲ್ಲದೆ, ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಸಾರ ಮಾಡದಂತೆ ನ್ಯಾಯಾಲಯದ ಮೊರೆ ಹೋಗಿರುವ ಆರು ಸಚಿವರೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಆರಂಭದಲ್ಲೇ ತಡೆದ ಪೊಲೀಸರು ಶಾಸಕಿಯರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದರು.