ರಾಮನಗರ [ಮಾ.05]:  ತಾಲೂಕಿನ ಕೂಟಗಲ್‌ ಹೋಬಳಿಯ ಜಾಲಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2020-25 ರ ಆಡಳಿತಾವಧಿಯ ನಿರ್ದೇಶಕರ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಜಾಲಮಂಗಲ ವಿಎಸ್‌ಎಸ್‌ಎನ್‌ ನಲ್ಲಿ ಒಟ್ಟು 12 ಸ್ಥಾನಗಳಿದ್ದು, ಇಬ್ಬರು ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ. ಇನ್ನುಳಿದ 10 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಒಬ್ಬ ಅಭ್ಯರ್ಥಿ ಮಾತ್ರ ಆಯ್ಕೆಯಾಗಿದ್ದು, ಇನ್ನುಳಿದ 9 ಸ್ಥಾನಗಳಲ್ಲಿ ಮಾಜಿ ಶಾಸಕ ಎಚ್‌.ಸಿ.ಬಾಲಕೃಷ್ಣ ಅವರ ಬೆಂಬಲಿಗರೇ ಜಯಭೇರಿ ಬಾರಿಸುವ ಮೂಲಕ ಆಡಳಿತವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ.

ಸಾಲಗಾರರಲ್ಲದ ಕ್ಷೇತ್ರ ಹಾಗೂ ಸಾಲಗಾರರಲ್ಲದ ಪರಿಶಿಷ್ಟಪಂಗಡ ಮೀಸಲು ಕ್ಷೇತ್ರಕ್ಕೆ ಕ್ರಮವಾಗಿ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿಗಳಾದ ಜೆ.ಸಿ.ರಾಜು ಹಾಗೂ ರಾಮಕೃಷ್ಣಯ್ಯ ಅವಿರೋಧ ಆಯ್ಕೆಯಾಗಿದ್ದಾರೆ. ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಮತ್ತೊಬ್ಬ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ನಿಜಿಯಪ್ಪ ಆಯ್ಕೆಯಾದರೆ, ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿಗಳಾದ ಎನ್‌.ರಾಮಯ್ಯ, ಆರ್‌ .ನಂಜಪ್ಪ, ಮಹದೇವಸ್ವಾಮಿ, ಶಿವರಾಜು, ಹಿಂದುಳಿದ ಎ ಪ್ರವರ್ಗ ಕ್ಷೇತ್ರದಿಂದ ರಾಮಶೆಟ್ಟಿ, ಹಿಂದುಳಿದ ಬಿ ಪ್ರವರ್ಗ ಕ್ಷೇತ್ರದಿಂದ ಕೆ.ಎಲ್ ಕೃಷ್ಣಪ್ಪ, ಪರಿಶಿಷ್ಟಜಾತಿ ಮೀಸಲು ಕ್ಷೇತ್ರದಿಂದ ಬೋರಲಿಂಗಯ್ಯ, ಸಾಲಗಾರರ ಕ್ಷೇತ್ರ ಮಹಿಳಾ ಮೀಸಲು ಸ್ಥಾನಗಳಿಗೆ ಉಮಾ ಮತ್ತು ಸಾವಿತ್ರಮ್ಮ ಜಾಲಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್‌. ಸುಭಾಷಿಣಿ ಘೋಷಿಸಿದರು.

ಜಿಲ್ಲಾ ಕೇಂದ್ರ ರಾಮನಗರಕ್ಕಿಲ್ಲ ನೇರ ಬಸ್!...

ಸಾಲಗಾರರ ಸಾಮಾನ್ಯ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ನಿಜಿಯಪ್ಪ ಹಾಗೂ ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಟಿ.ವಿ.ವೆಂಕಟೇಗೌಡ ನಡುವೆ ತೀವ್ರ ಪೈಪೋಟಿ ಏರ್ಪಟ್ಟು ಕೊನೆಗೂ ಇಬ್ಬರೂ ಸಮಾನ ಮತ ಗಳಿಸಿದ ಪರಿಣಾಮ, ಇಬ್ಬರಿಗೂ ಕ್ರಮವಾಗಿ ತಲಾ ಎರಡೂವರೆ ವರ್ಷ ನಿರ್ದೇಶಕರಾಗಿ ಕಾರ್ಯನಿರ್ವಹಿಸಲು ಸಹಕಾರಿ ಕಾಯ್ದೆಯಡಿ ಅವಕಾಶ ಕಲ್ಪಿಸಲಾಗಿದ್ದು, ಅದರಂತೆ ಮೊದಲ ಎರಡೂವರೆ ವರ್ಷ ನಿಜಿಯಪ್ಪ ಹಾಗೂ ನಂತರದ ಎರಡೂವರೆ ವರ್ಷ ಟಿ.ವಿ. ವೆಂಕಟೇಗೌಡ ನಿರ್ದೇಶಕರಾಗಿ ಸೇವೆ ಸಲ್ಲಿಸಲು ಸರ್ವಾನುಮತದ ಮೇರೆಗೆ ತೀರ್ಮಾನಿಸಲಾಯಿತು ಎಂದು ಚುನಾವಣಾಧಿಕಾರಿ ಎಸ್‌. ಸುಭಾಷಿಣಿ ಪ್ರಕಟಿಸಿದರು.

ವಿಎಸ್‌ ಎಸ್‌ಎನ್‌ ಮಾಜಿ ಅಧ್ಯಕ್ಷ ಚಂದ್ರು, ಎಂಪಿಸಿಎಸ್‌ ಅಧ್ಯಕ್ಷ ಬೋರೇಗೌಡ, ಗ್ರಾಪಂ ಸದಸ್ಯ ಮಾದಪ್ಪ, ಮುಖಂಡರಾದ ಪುಟ್ಟಮಾದೇಗೌಡ, ನಾಗರಾಜು, ಮರಿಸ್ವಾಮಿ, ರಂಗಸ್ವಾಮಿ, ವಿಜಯ ಕುಮಾರ್‌ , ಯುವ ಮುಖಂಡರಾದ ಕೆ.ಧನಂಜಯ, ಕೆ.ಪ್ರಕಾಶ್‌ ಮತ್ತಿತರರು ನೂತನ ನಿರ್ದೇಶಕರನ್ನು ಅಭಿನಂದಿಸಿದರು.