ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿ ಕೇಂದ್ರದ ಅಸಹಕಾರ ಧೋರಣೆ, ಪ್ರಧಾನಿ ಮೌನ, ಕಳೆದ ಸುಮಾರು 3 ತಿಂಗಳಿನಿಂದ ನಡೆಯುತ್ತಿರುವ ನರಮೇಧವನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಜುಲೈ 31ರಂದು ಪ್ರತಿಭಟನೆಗೆ ಮುಂದಾಗಿದೆ.

ಮಂಗಳೂರು (ಜು.30) :  ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಘಟನೆಗಳಿಗೆ ಸಂಬಂಧಿಸಿ ಕೇಂದ್ರದ ಅಸಹಕಾರ ಧೋರಣೆ, ಪ್ರಧಾನಿ ಮೌನ, ಕಳೆದ ಸುಮಾರು 3 ತಿಂಗಳಿನಿಂದ ನಡೆಯುತ್ತಿರುವ ನರಮೇಧವನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರದ ವೈಫಲ್ಯ ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್‌ ವತಿಯಿಂದ ಜುಲೈ 31ರಂದು ನಗರದ ಲಾಲ್‌ಬಾಗ್‌ನ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಹಿರಿಯ ನಾಯಕರು, ಶಾಸಕರು ಸೇರಿದಂತೆ ಪಕ್ಷದ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಹೇಳಿದರು.

ಮಣಿಪುರ ನರಮೇಧದ ಬಗ್ಗೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶ ನಿರಾಕರಿಸಲಾಗಿದೆ. ಪ್ರಧಾನಮಂತ್ರಿ ಕೇವಲ 30 ಸೆಕೆಂಡ್‌ ಉತ್ತರ ನೀಡಿದ್ದಾರೆ. ಆದರೆ ಅಲ್ಲಿನ ಕ್ರೌರ್ಯದ ಬಗ್ಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಕೇವಲ 35 ಲಕ್ಷ ಜನಸಂಖ್ಯೆ ಇರುವ ಸಣ್ಣ ರಾಜ್ಯದಲ್ಲಿ ಮೀಸಲಾತಿ ವಿಚಾರದಲ್ಲಿ ಆರಂಭವಾದ ಪ್ರತಿಭಟನೆ ಈ ಮಟ್ಟಕ್ಕೆ ಬೆಳೆದಿದೆ. ಮಹಿಳೆಯರ ಬೆತ್ತಲೆ ಮೆರವಣಿಗೆ, ಅತ್ಯಾಚಾರದ ಬಗ್ಗೆ ಕೇಂದ್ರ ಸರ್ಕಾರ ಮೌನ ವಹಿಸಿದೆ. 200ಕ್ಕೂ ಅಧಿಕ ಜನ ಸತ್ತರೂ ಯಾವುದೇ ಕ್ರಮ ಕೈಗೊಂಡಿಲ್ಲ. ‘ಸಬ್‌ ಕಾ ಸರ್ವನಾಶ್‌’ ಆಗ್ತಿದೆ. ಮಣಿಪುರವನ್ನು ಈ ಮಟ್ಟದಲ್ಲಿ ಯಾಕೆ ಕಡೆಗಣನೆ ಮಾಡಲಾಗುತ್ತಿದೆ ಎಂದು ಹರೀಶ್‌ ಕುಮಾರ್‌ ಪ್ರಶ್ನಿಸಿದರು.

Manipur: ಒಂದಲ್ಲ.. ಎರಡಲ್ಲ.. 7 ಅತ್ಯಾಚಾರ ನಡೆದಿದೆ: ಬಗೆದಷ್ಟೂ ಬಯಲಿಗೆ ಬರ್ತಿದೆ ರೇಪ್‌ ಕೇಸ್‌!

ಉಡುಪಿ ಘಟನೆಯ ಬಗ್ಗೆ ಮಾತನಾಡುವ ಸಂಸದೆ ಶೋಭಾ ಕರಂದ್ಲಾಜೆ ಮಣಿಪುರದಲ್ಲಿ ದೌರ್ಜನ್ಯಕ್ಕೀಡಾಗುತ್ತಿರುವ ಮಹಿಳೆಯರ ಪರವಾಗಿ ಯಾಕೆ ಧ್ವನಿ ಎತ್ತಲ್ಲ? ಲವ್‌ ಜಿಹಾದ್‌ ಬಗ್ಗೆ ಅವರಿಗೆ ಆಸಕ್ತಿಯೆ ಹೊರತು ಮಹಿಳೆಯರ ರಕ್ಷಣೆ ಬಗ್ಗೆ ಚಿಂತನೆ ಇಲ್ಲ. ಬಿಜೆಪಿಯ ಈ ನೀತಿಯನ್ನು ತೀವ್ರವಾಗಿ ಖಂಡಿಸುವುದಾಗಿ ಹರೀಶ್‌ ಕುಮಾರ್‌ ಹೇಳಿದರು.

ಕಾಂಗ್ರೆಸ್‌ ಮುಖಂಡರಾದ ಜೆ.ಆರ್‌. ಲೋಬೊ, ಐವನ್‌ ಡಿಸೋಜ, ನವೀನ್‌ ಡಿಸೋಜ, ಅಶ್ರಫ್‌, ಶುಭೋದಯ ಆಳ್ವ, ಟಿ.ಕೆ. ಸುಧೀರ್‌, ವಿಕಾಸ್‌ ಶೆಟ್ಟಿ, ಮುಹಮ್ಮದ್‌ ಕುಂಜತ್ತಬೈಲ್‌, ಪದ್ಮನಾಭ ಮತ್ತಿತರರಿದ್ದರು.