ಹಗರಿಬೊಮ್ಮನಹಳ್ಳಿ(ಜೂ.08): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ರಾಷ್ಟ್ರೀಯ ನಾಯಕರು ಬಳ್ಳಾರಿ ಜಿಲ್ಲೆಯ ಮೇಲೆ ವಿಶೇಷ ಕಾಳಜಿ ಮತ್ತು ನಂಬಿಕೆ ಹೊಂದಿದ್ದಾರೆ ಎಂದು ಕಾಂಗ್ರೆಸ್‌ ಟಾಸ್ಕ್‌ಪೋರ್ಸ್‌ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಸಿರಾಜ್‌ಶೇಕ್‌ ಹೇಳಿ​ದ್ದಾರೆ. 

ಪಟ್ಟಣದ ಎಂ.ವೈ. ಘೋರ್ಪಡೆ ಶಾಲಾ ಆವರಣದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಡಿ.ಕೆ. ಶಿವಕುಮಾರ್‌ ಪದಗ್ರಹಣ ಪೂರ್ವಭಾವಿ ಪ್ರತಿಜ್ಞಾ ಸಭೆಯ ನೇತೃತ್ವ ವಹಿಸಿ ಮಾತನಾಡಿದರು.

ಹಗರಿಬೊಮ್ಮನಹಳ್ಳಿ: ತೆಪ್ಪ ಮಗುಚಿ ಮದು​ಮಗ ಸೇರಿ ಇಬ್ಬರ ದುರ್ಮರಣ

ಕೆಪಿಸಿಸಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಕಾಂಗ್ರೆಸ್‌ ಪಕ್ಷಕ್ಕೆ ಪುಷ್ಠಿ ಸಿಕ್ಕಂತಾಗಿದೆ. ಗ್ರಾಮೀಣ ಪ್ರದೇಶದಿಂದಲೇ ಪಕ್ಷವನ್ನು ಬಲಪಡಿಸಲು ಯುವಶಕ್ತಿಯನ್ನು ಸೆಳೆಯುವ ತಂತ್ರಗಾರಿಕೆ ಮಾಡುತ್ತಿದ್ದಾರೆ. ಪದಗ್ರಹಣಕ್ಕೆ ಬೆಂಗಳೂರಿಗೆ ರಾಜ್ಯದ ಮೂಲೆಮೂಲೆಯಿಂದಲೂ ಪಕ್ಷದ ಅಭಿಮಾನಿಗಳು, ಮುಖಂಡರು, ಕಾರ್ಯಕರ್ತರು ಲಕ್ಷಾಂತರ ಸಂಖ್ಯೆಯಲ್ಲಿ ಸೇರುವವರಿದ್ದರು. ಈ ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷರೇ ತೆಗೆದುಕೊಂಡಿರುವ ತೀರ್ಮಾನದಂತೆ, ಇಂದಿನ ಕಾಲಕ್ಕೆ ತಕ್ಕಂತೆ ಅಂತರ್ಜಾಲ, ಸಾಮಾಜಿಕ ಜಾಲತಾಣ, ಇತರೆ ಮಾರ್ಗಗಳ ಮೂಲಕ ಜನತೆಯನ್ನು ತಲುಪುವಂತ ಕೆಲಸಕ್ಕೆ ಮುಂದಾಗಿದ್ದಾರೆ ಎಂದರು.

ಇದೇ ಜೂ. 14ರಂದು ನಡೆಯಲಿರುವ ಪದಗ್ರಹಣದಂದು 8 ಸಾವಿರ ಸ್ಥಳಗಳಲ್ಲಿ ನೇರ ವೀಕ್ಷಣೆ ಮತ್ತು ಕಾರ್ಯಕರ್ತರೊಂದಿಗೆ ನೇರ ಚರ್ಚೆಯನ್ನು ಮಾಡಲಿರುವ ಕಾರ್ಯಕ್ರಮದ ಯಶಸ್ವಿಯ ಪೂರ್ವಭಾವಿ ಸಭೆ ಇದಾಗಿದೆ ಎಂದರು.
ವಿಶ್ವವೇ ಕೊರೋನಾ ವೈರಸ್‌ನ ಹಾವಳಿಗೆ ತುತ್ತಾಗಿ ನಲುಗುತ್ತಿರುವ ಸಂದರ್ಭದಲ್ಲಿ, ರಾಜ್ಯದಲ್ಲೂ ಲಾಕ್‌ಡೌನ್‌ ಆಗಿದ್ದಾಗ ರಾಜ್ಯಾಧ್ಯಕ್ಷರು ರಚಿಸಿದ ಟಾಸ್ಕ್‌ಪೋರ್ಸ್‌ ಸಮಿತಿಗಳಿಂದ ನಿರ್ಗತಿಕರು, ಬಡವರು, ಅಶಕ್ತರು ಹಾಗೂ ರೈತರ ಸಂಕಷ್ಟಗಳಿಗೆ ಸ್ಪಂದಿಸುವಂತ ಕೆಲಸ ಮಾಡಿ, ಆಡಳಿತ ಪಕ್ಷಕ್ಕೆ ಪ್ರತಿಯಾಗಿ ಜನರ ಮಧ್ಯೆಯೇ ಕೆಲಸ ಮಾಡಿ ತೋರಿಸಲಾಯಿತು ಎಂದರು. ಆಡಳಿತ ಪಕ್ಷ ಬಿಜೆಪಿಯ ಹೇಳಿಕೆಗಳು, ಯೋಜನೆಗಳು ಜನಸಾಮಾನ್ಯರಿಗೆ ತಲುಪುವಲ್ಲಿ ವಿಫಲವಾಗಿವೆ ಎಂಬುದನ್ನು ನಾವು ಮುಂದೆ ಮನವರಿಕೆ ಮಾಡಿಕೊಡಬೇಕಾಗಿದೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಕೊಟ್ಟೂರು ಬ್ಲಾಕ್‌ ಅಧ್ಯಕ್ಷ ಗುರುಪ್ರಸಾದ್‌, ನಿಂಬಗಲ್‌ ರಾಮಕೃಷ್ಣ, ಯುವ ಮುಖಂಡ ಹಫೀಜ್‌ಶೇಕ್‌, ಮುಖಂಡರಾದ ಏಕಾಂಬ್ರೇಶ್‌ ನಾಯ್ಕ, ಫಕ್ಕೀರ್‌ಸಾಬ್‌, ಎಣ್ಣಿ ಇಬ್ರಾಹಿಂಸಾಬ್‌, ಇಮಾಮ್‌ಸಾಬ್‌, ಅಲಬೂರು ರಾಮಣ್ಣ, ಆಟೋರಾಜ, ದೇವಲಾನಾಯ್ಕ, ಆನಂದ, ಸುರೇಶ್‌ ರಾಥೋಡ್‌, ಸಂಪತ್‌, ಎಣ್ಣಿಭಾಷ, ಆನೇಕಲ್‌ ಲಿಂಗರಾಜ್‌, ಅಶೋಕ, ಬಂಡಿರಫಿ, ರೋಷನ್‌, ಟೈಲರ್‌ ವೆಂಕಟೇಶ್‌, ಯೂಸೂಫ್‌ಸಾಬ್‌ ಮತ್ತಿತರರು ಇದ್ದರು.