ಮದ್ದೂರು (ಅ.18):  ಮಂಡ್ಯ ಜಿಲ್ಲಾ ಸಹಕಾರ ಬ್ಯಾಂಕ್‌ ಚುನಾವಣೆಗೆ ಮತದಾನ ಹಕ್ಕು ನೀಡದೇ ವಂಚಿಸಿ ದ್ರೋಹ ಮಾಡಿದ್ದಾರೆ ಆರೋಪಿಸಿ ಮಾಜಿ ಶಾಸಕ ಎನ್‌.ಚಲುವರಾಯಸ್ವಾಮಿ ವಿರುದ್ಧ ಬಂಡೆದ್ದಿರುವ ಟಿಎಪಿಸಿಎಂಎಸ್‌ನ ಮೂವರು ಕಾಂಗ್ರೆಸ್‌ ಬೆಂಬಲಿತ ಸದಸ್ಯರು ಮತದಾನದ ಹಕ್ಕು ನೀಡುವ ಸಂಬಂಧ ಕರೆಯಲಾಗಿದ್ದ ಸಭೆಯಲ್ಲಿ ಪಾಲ್ಗೊಳ್ಳದೇ ದೂರ ಉಳಿದರು.

ಪಟ್ಟಣದ ಟಿಎಪಿಸಿಎಂಎಸ್‌ ಸಭಾಂಗಣದಲ್ಲಿ ಅಧ್ಯಕ್ಷ ಎಸ್‌.ಪಿ.ಮಹದೇವು ಅಧ್ಯಕ್ಷತೆಯಲ್ಲಿ ಸಂಘದ ನಿರ್ದೇಶಕರಿಗೆ ಎಂಡಿಸಿಸಿ ಬ್ಯಾಂಕ್‌ ನಿರ್ದೇಶಕರ ಸ್ಥಾನಕ್ಕೆ ಮತದಾನದ ಹಕ್ಕು ನೀಡುವ ಸಂಬಂಧ ತುರ್ತು ಕರೆಯಲಾಗಿತ್ತು. ಸಭೆಯಿಂದ ಮೂವರು ಕಾಂಗ್ರೆಸ್‌ ಬೆಂಬಲಿತರು ದೂರ ಉಳಿಯುವ ಮೂಲಕ ಟಿಎಪಿಸಿಎಂಎಸ್‌ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರಕ್ಕೆ ಬಂದಿದ್ದ ಕಾಂಗ್ರೆಸ್‌ - ಬಿಜೆಪಿ ನಡುವೆ ಆರಂಭದ ಸಭೆಯಲ್ಲೇ ಬಿರುಕು ಕಾಣಿಸಿಕೊಂಡಂತಾಗಿದೆ.

ಬೈ ಎಲೆಕ್ಷನ್‌ನಲ್ಲಿ ಜಾತಿ ವಾರ್: ಹಳೆ ಜೋಡೆತ್ತುಗಳ ನಡುವೆ ಶುರುವಾಯ್ತು ಕಾದಾಟ

ಬಿಜೆಪಿ ಮತ್ತು ಜೆಡಿಎಸ್‌ ನ ತಲಾ ನಾಲ್ವರು ಸದಸ್ಯರು, ಓರ್ವ ಕಾಂಗ್ರೆಸ್‌ ಹಾಗೂ ಸಹಕಾರ ಸಂಘದ ಉಪನಿಬಂಧಕರನ್ನು ಹೊರತು ಪಡಿಸಿ ಉಳಿದ ಮೂವರು ಕಾಂಗ್ರೆಸ್‌ ಬೆಂಬಲಿತರಾದ ಉಪಾಧ್ಯಕ್ಷ ಪಿ.ರಾಘವ, ನಿರ್ದೇಶಕ ಶಂಕರಲಿಂಗಯ್ಯ ಹಾಗೂ ಕೆ.ಎಂ.ಇಂದಿರಾ ಸಭೆಗೆ ಗೈರು ಹಾಜರಾಗುವ ಮೂಲಕ ಮಾಜಿ ಶಾಸಕ ಎನ್‌ .ಚಲುವರಾಯಸ್ವಾಮಿ ವಿರುದ್ಧ ಅಸಮಧಾನ ಹೊರಹಾಕಿದ್ದಾರೆ.

ಚುನಾವಣೆ ಪೂರ್ವದಲ್ಲಿ ಮಾಜಿ ಶಾಸಕ ಚಲುವರಾಯಸ್ವಾಮಿಯವರು ಬಿಜೆಪಿಗೆ ಬೆಂಬಲ ನೀಡಿದ್ದಲ್ಲಿ ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣೆಯಲ್ಲಿ ಮಾಜಿ ಶಾಸಕ ಮಧುಮಾದೇಗೌಡರ ಬೆಂಬಲಿತ ಕೆ.ಎಚ್‌ .ಇಂದಿರಾ ಅವರಿಗೆ ಮತದಾನದ ಹಕ್ಕು ನೀಡುವುದಾಗಿ ಭರವಸೆ ನೀಡಿದ್ದರು. ಆ ನಂತರ ತಮ್ಮ ಬೆಂಬಲಿತ ನಿರ್ದೇಶಕ ಕೊಪ್ಪ ಭಾಗದ ಎಚ್‌ .ಕೆ.ಕರೀಗೌಡರಿಗೆ ಚಲುವರಾಯಸ್ವಾಮಿ ದುರುದ್ದೇಶ ಪೂರ್ವಕವಾಗಿ ನೀಡಿದ್ದಾರೆ ಎಂದು ಸದಸ್ಯರು ಆರೋಪಿಸಿದರು.

ಬಿಜೆಪಿಗೆ ಬೆಂಬಲ ನೀಡುವ ಮುನ್ನ 5 ಲಕ್ಷ ರು.ಗಳ ಆಮಿಷ ನೀಡಲಾಗಿತ್ತು. ಆದರೆ, ನಮಗೆ ಹಣ ಬೇಡ ಡಿಸಿಸಿ ಬ್ಯಾಂಕ್‌ ನಿರ್ದೇಶಕರ ಚುನಾವಣೆಗೆ ಮತದಾನದ ಹಕ್ಕು ನೀಡುವಂತೆ ಕೆ.ಎಚ್‌ .ಇಂದಿರಾ ಕೋರಿಕೊಂಡಿದ್ದರು. ಆದರೆ, ಈ ಎಲ್ಲಾ ಭರವಸೆಗಳನ್ನು ಹುಸಿ ಮಾಡಿರುವ ಮಾಜಿ ಶಾಸಕ ಚಲುವರಾಯಸ್ವಾಮಿ ತಮ್ಮ ಬೆಂಬಲಿತ ಕರೀಗೌಡರಿಗೆ ನೀಡಿ ನಮಗೆ ದ್ರೋಹ ಎಸಗಿದ್ದಾರೆ ಎಂದು ಕೆ.ಎಚ್‌ .ಇಂದಿರಾ ಕಿಡಿಕಾರಿದರು. ಎಪಿಸಿಎಂಎಸ್‌ ಸಭೆಯ ಪ್ರಾರಂಭಿಕ ಹಂತದಲ್ಲಿಯೇ ಕಾಂಗ್ರೆಸ್‌, ಬಿಜೆಪಿ ನಡುವೆ ಬಿರುಕು ಕಾಣಿಸಿಕೊಂಡಿರುವುದು ಸ್ಪಷ್ಟವಾಗಿದೆ.