Asianet Suvarna News Asianet Suvarna News

ಯಲ್ಲಮ್ಮನ ಕ್ಷೇತ್ರದಲ್ಲಿ ಕೈ ಶಾಸಕರ ಆಯ್ಕೆಗೆ ಯತ್ನ

ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲ ಸಮುದಾಯವರಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನೀಡಲಾಗುತ್ತಿದೆ. ಕಾರ್ಯಕರ್ತರನ್ನು ಬೆಳೆಸುವಂತ ಕಾರ್ಯ ಪಕ್ಷದಲ್ಲಿ ನಡೆಯುತ್ತಿದೆ 

Congress  Should Win in Savadatti On 2023 Election
Author
First Published Oct 3, 2022, 6:24 AM IST

ಸವದತ್ತಿ (ಅ.03): ಕಾಂಗ್ರೆಸ್‌ ಪಕ್ಷದಲ್ಲಿ ಎಲ್ಲ ಸಮುದಾಯವರಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ನೀಡಲಾಗುತ್ತಿದೆ. ಕಾರ್ಯಕರ್ತರನ್ನು ಬೆಳೆಸುವಂತ ಕಾರ್ಯ ಪಕ್ಷದಲ್ಲಿ ನಡೆಯುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.

ಇಲ್ಲಿನ ಗುರ್ಲ ಹೊಸೂರಿನಲ್ಲಿ ಕೆಪಿಸಿಸಿ ಸದಸ್ಯರಾಗಿ ನೂತನವಾಗಿ ಆಯ್ಕೆಯಾದ ಲತೀಫ್‌ ಸವದತ್ತಿ ಅವರ ಮನೆಯಲ್ಲಿ ಹಮ್ಮಿಕೊಂಡ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ ಪಕ್ಷದಲ್ಲಿ ಕೆಪಿಸಿಸಿ ಸದಸ್ಯ ಎಂದರೆ ಅರ್ಧ ಶಾಸಕನಿದ್ದಂತೆ. ಆ ನಿಟ್ಟಿನಲ್ಲಿ ಬರುವಂತ ಚುನಾವಣೆಯಲ್ಲಿ (Election) ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ (congress) ಪಕ್ಷವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ಮಾಡಬೇಕಿದ್ದು, ಕೆಪಿಸಿಸಿ ಸದಸ್ಯರ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಸವದತ್ತಿ ಯಲ್ಲಮ್ಮಾ ಮತಕ್ಷೇತ್ರದಲ್ಲಿ ಕಾಂಗ್ರೆಸ್‌ ಪಕ್ಷದ ಶಾಸಕರನ್ನು ಆಯ್ಕೆ ಮಾಡಬೇಕೆಂಬ ಆಶಯ ನಮ್ಮದಾಗಿದ್ದು, ಎಲ್ಲರ ಸಹಕಾರ ಮತ್ತು ಪ್ರಯತ್ನ ಅತ್ಯವಶ್ಯ ಎಂದರು.

ಕಾಂಗ್ರೆಸ್‌ ಮುಖಂಡ ವಿಶ್ವಾಸ ವೈದ್ಯ, ರವೀಂದ್ರ ಯಲಿಗಾರ, ಪಂಚನಗೌಡ ದ್ಯಾಮನಗೌಡರ, ಡಿ.ಡಿ.ಟೋಪೋಜಿ, ಬಸವರಾಜ ಗುರಣ್ಣವರ, ಕೆ.ಕೆ.ಪುಣೆದ, ಜೆ.ಡಿ.ಪಟಾದ, ಎಮ್‌.ಬಿ.ಸವದತ್ತಿ, ಪಂಚಪ್ಪ ಮಲ್ಲಾಡ, ಎಮ್‌.ಬಿ.ಯಲಿಗಾರ, ಫಕ್ಕೀರಪ್ಪ ಹದ್ದನ್ನವರ, ದಿಲಾವರ ಫೀರಖಾನ, ಜಿ.ಜಿ.ಕಣವಿ, ಎಸ್‌.ಆರ್‌.ಪಾಟೀಲ ಉಪಸ್ಥಿತರಿದ್ದರು. ರಿಯಾಜ ಸವದತ್ತಿ ಸ್ವಾಗತಿಸಿದರು. ಹುಸೇನ ನದಾಫ ನಿರೂಪಿಸಿ ವಂದಿಸಿದರು.

ನನ್ನ ಕುಟುಂಬ ಯಾವುದೇ ಸರ್ಕಾರ ಬೀಳಿಸಿಲ್ಲ : 

ಇಡೀ ಜಾರಕಿಹೊಳಿ ಕುಟುಂಬ ಕೂಡಿ ಸರ್ಕಾರ ಉರುಳಿಸಿದ್ದಾರೆ ಎಂದು ಭಾಷಣಕಾರರು ಹೇಳಿದ್ದಾರೆ. ಜಾರಕಿಹೊಳಿ ಕುಟುಂಬ ಕೂಡಿ ಯಾವುದೇ ರೀತಿ ಸರ್ಕಾರ ಉರುಳಿಸಿಲ್ಲ. ಇದರಲ್ಲಿ ನನಗೂ, ಬಾಲಚಂದ್ರ ಹಾಗೂ ಲಖನ್‌ಗೂ ಯಾವುದೇ ರೀತಿ ಸಂಬಂಧವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಹೇಳಿದರು.

ನಗರದ ಹಿಲ್‌ಗಾರ್ಡನ್‌ ಕಚೇರಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸದ ಅವರು, ಸರ್ಕಾರ ಬೀಳಿಸುವಲ್ಲಿ ಯಾರ ಪಾತ್ರವಿದೆಯೋ ಅವರಿಗೆ ಮಾತ್ರ ಆ ಮಾತು ಹೋಗಲಿ. ಅದನ್ನು ಬಿಟ್ಟು ಸರ್ಕಾರ ಬೀಳಿಸುವುದರಲ್ಲಿ ಇಡೀ ಜಾರಕಿಹೊಳಿ ಕುಟುಂಬವಿದೆ ಎಂದು ಹೇಳುವುದು ಸರಿಯಲ್ಲ. ಇದು ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಆದ್ದರಿಂದ ಇಂಥ ಮಾತುಗಳಾಡುವ ಮೊದಲು ಸರಿಯಾಗಿ ಮಾತನಾಡಬೇಕು. ರಾಜ್ಯ ರಾಜಕಾರಣದಲ್ಲಿ ನಾಲ್ವರೂ ಸಹೋದರರು ರಾಜಕೀಯದಲ್ಲಿ ಇದ್ದೇವೆ. ನಾಲ್ವರೂ ಒಂದೇ ಎಂದು ಭಾವಿಸಬೇಡಿ. ನಾಲ್ವರ ಕೆಲಸವೂ ಬೇರೆ ಬೇರೆ ಇದೆ. ಈ ಬಗ್ಗೆ ಯಾರಿಗೂ ಗೊಂದಲ ಬೇಡ ಎಂದು ಹೇಳಿದರು.

Belagavi: ಮಕ್ಕಳ ಭವಿಷ್ಯದ ಚಿಂತನೆ ಆಗಬೇಕು: ಸತೀಶ್‌ ಜಾರಕಿಹೊಳಿ

ವಾಲ್ಮೀಕಿ ಜಯಂತಿ ಬಹಿಷ್ಕಾರದ ಬೆದರಿಕೆ: ಎಸ್ಸಿ, ಎಸ್ಟಿಸಮುದಾಯಕ್ಕೆ ಮೀಸಲಾತಿ ನೀಡುವಲ್ಲಿ ಬಿಜೆಪಿ ಸರ್ಕಾರ ಹಿಂದೇಟ್ಟು ಹಾಕುತ್ತಿರುವ ಕಾರಣಕ್ಕಾಗಿ ಅ.9ರಂದು ಸರ್ಕಾರದಿಂದ ಆಚರಿಸುವ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ರಾಜ್ಯಾದ್ಯಂತ ಬಹಿಷ್ಕಾರ ಮಾಡಲಾಗುವುದು ಎಂದು ಈಗಾಗಲೇ ರಾಜ್ಯಮಟ್ಟದಲ್ಲಿ ತಿರ್ಮಾನಿಸಲಾಗಿದೆ. ರಾಜನಹಳ್ಳಿಯ ವಾಲ್ಮೀಕಿ ಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಕೂಡಾ ಕಳೆದ 224 ದಿನಗಳಿಂದ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡಗಳಿಗೆ ಹೆಚ್ಚಿನ ಮೀಸಲಾತಿ ಸಿಗಬೇಕೆಂದು ಧರಣಿ ನಡೆಸುತ್ತಿದ್ದಾರೆ. ಸರ್ಕಾರ ಇಚ್ಚಾಶಕ್ತಿ ಕೊರತೆಯಿಂದ ಭರವಸೆ ಈಡೇರಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಬೇರೆ ಬೇರೆ ರೀತಿ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.

ಸಚಿವ ಶ್ರೀರಾಮುಲು ಅವರು ಸಚಿವ ಸ್ಥಾನ ಸಿಕ್ಕಕೂಡಲೇ 24 ಗಂಟೆಯಲ್ಲೇ ಎಸ್ಸಿ, ಎಸ್ಟಿಸಮುದಾಯಕ್ಕೆ ಮೀಸಲಾತಿ ನೀಡಲಾಗುವುದು ಎಂದು ಹೇಳಿದ್ದರು. ಈಗ ಅವರ ಅವಧಿ ಕೂಡಾ ಮುಗಿಯುವ ಹಂತಕ್ಕೆ ಬಂದಿದೆ. ಇನ್ನೂ ಕೂಡಾ ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದು ಬರೀ ರಾಜಕೀಯ ಆಶ್ವಾಸನೆ ಮಾತ್ರ ಎಂದು ಕಿಡಿ ಕಾರಿದರು.

Follow Us:
Download App:
  • android
  • ios