*  ಆರೆಸ್ಸೆಸ್‌ ಅಣತಿಯಂತೆ ಕೆಲಸ: ಹರಿಪ್ರಸಾದ್‌ ಕಿಡಿ*  ಅವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚುತ್ತಿರುವ ಪಾಲಿಕೆ*  ಪಾಲಿಕೆ ಮುಖ್ಯ ಆಯುಕ್ತರು ತಮ್ಮ ನೇತೃತ್ವದಲ್ಲೇ ವಾರ್ಡ್‌ ವಿಂಗಡಣೆ ಮಾಡಬೇಕು 

ಬೆಂಗಳೂರು(ಫೆ.06): ಕಾಂಗ್ರೆಸ್‌(Congress) ವತಿಯಿಂದ ರಾಜ್ಯ ಸರ್ಕಾರ(Government of Karnataka) ಹಾಗೂ ಬಿಬಿಎಂಪಿ(BBMP) ಆಡಳಿತದ ವಿರುದ್ಧ ಬಿಬಿಎಂಪಿ ಕಚೇರಿ ಎದುರು ಶನಿವಾರ ಬೃಹತ್‌ ಪ್ರತಿಭಟನೆ ನಡೆಸಲಾಗಿದೆ. ಈ ವೇಳೆ ರಸ್ತೆ ಗುಂಡಿ ಮುಚ್ಚದಿರುವುದು, ಬಿಬಿಎಂಪಿ ವಾರ್ಡ್‌ಗಳ ಅವೈಜ್ಞಾನಿಕ ಪುನರ್‌ ವಿಂಗಡಣೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.

ಶನಿವಾರ ಬೆಳಗ್ಗೆ ಬಿಬಿಎಂಪಿ ಕಚೇರಿ ಎದುರು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಹಾಗೂ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್‌ ನೇತೃತ್ವದಲ್ಲಿ ಪ್ರತಿಭಟನೆ(Protest) ನಡೆಸಿದ ಕಾಂಗ್ರೆಸ್ಸಿಗರು, ವಾರ್ಡ್‌ ಪುನರ್‌ ವಿಂಗಡಣೆಯಲ್ಲಿ ಬಿಜೆಪಿ(BJP) ಹಾಗೂ ಆರ್‌ಎಸ್‌ಎಸ್‌(RSS) ಹಸ್ತಕ್ಷೇಪ ಮಾಡುತ್ತಿದೆ. ಅಧಿಕಾರ ದುರುಪಯೋಗ ಮಾಡಿಕೊಂಡು ಮುಂದಿನ ಚುನಾವಣೆಯನ್ನು(Election) ದೃಷ್ಟಿಯಲ್ಲಿಟ್ಟುಕೊಂಡು ಅವೈಜ್ಞಾನಿಕವಾಗಿ ವಾರ್ಡ್‌ ವಿಂಗಡಣೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ಇದೇ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ ಗುಪ್ತಾ ಅವರಿಗೆ ಮನವಿ ಪತ್ರ ಸಲ್ಲಿಸಿದರು.

News Hour : ರಾಜ್ಯದಲ್ಲಿ ತಾರಕಕ್ಕೇರಿದ ಹಿಜಾಬ್ ಸಂಘರ್ಷ

ಈ ವೇಳೆ ಮಾತನಾಡಿದ ರಾಮಲಿಂಗಾರೆಡ್ಡಿ, ವಾರ್ಡ್‌ ಪುನರ್‌ ವಿಂಗಡಣೆಗೆ ರಚಿಸಿರುವ ಅಧಿಕಾರಿಗಳ ತಂಡ ನಿಷ್ಕಿ್ರಯವಾಗಿದೆ. ಆರ್‌ಎಸ್‌ಎಸ್‌ ಕಚೇರಿ ಹಾಗೂ ಬಿಜೆಪಿ ಶಾಸಕರ ಕಚೇರಿಗಳಲ್ಲಿ ವಾರ್ಡ್‌ ಪುನರ್‌ ವಿಂಗಡಣೆ ಕೆಲಸ ನಡೆಯುತ್ತಿದೆ. ಬಿಜೆಪಿ ಶಾಸಕರು ಇರುವ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರು, ಕಾಂಗ್ರೆಸ್‌ ಶಾಸಕರಿರುವ ಕ್ಷೇತ್ರಗಳಲ್ಲಿ ಬಿಜೆಪಿ ಸಂಸದರು ವಾರ್ಡ್‌ ಪುನರ್‌ ವಿಂಗಡಣೆ ಮಾಡುತ್ತಿದ್ದಾರೆ. ಹೀಗಾಗಿ ಈ ಬಗ್ಗೆ ಅಧಿಕಾರಿಗಳ ಬಳಿ ಯಾವುದೇ ಮಾಹಿತಿ ಇಲ್ಲ. ಕೂಡಲೇ ಬಿಬಿಎಂಪಿ ಮುಖ್ಯ ಆಯುಕ್ತರು ಎಚ್ಚೆತ್ತುಕೊಂಡು ತಮ್ಮ ನೇತೃತ್ವದಲ್ಲಿ ವೈಜ್ಞಾನಿಕವಾಗಿ ವಾರ್ಡ್‌ ಪುನರ್‌ ವಿಂಗಡಣೆ ಮಾಡಬೇಕು ಎಂದು ಆಗ್ರಹಿಸಿದರು.

ವಿಧಾನಸಭೆ, ನ್ಯಾಯಾಲಯದಲ್ಲೂ ಹೋರಾಟ:

ನಾವು ಮುಖ್ಯ ಆಯುಕ್ತರಾದ ಗೌರವ್‌ ಗುಪ್ತಾ(Gaurav Gupta) ಅವರಿಗೆ ಮನವಿ ಕೊಟ್ಟಿದ್ದೇವೆ. ಅವರು ನ್ಯಾಯಯುತವಾಗಿ ಈ ಪ್ರಕ್ರಿಯೆ ಮಾಡಬೇಕು. ಇಷ್ಟಾದರೂ ಸೂಕ್ತವಾಗಿ ಮಾಡದಿದ್ದರೆ ನಾವು ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇವೆ, ನಂತರ ನ್ಯಾಯಾಲಯದ ಮೊರೆ ಹೋಗುತ್ತೇವೆ. ಬೆಂಗಳೂರು ಇವರ ಆಸ್ತಿಯಲ್ಲ. ವೈಜ್ಞಾನಿಕ ರೀತಿಯಲ್ಲಿ ಮರು ವಿಂಗಡಣೆ ಮಾಡಬೇಕು. ಇಲ್ಲದಿದ್ದರೆ ನಾವು ಹೋರಾಟ ಕೈಬಿಡುವುದಿಲ್ಲ ಎಂದು ಎಚ್ಚರಿಸಿದರು.

ಮುಖ್ಯ ಆಯುಕ್ತರ ಬಳಿ ವಾರ್ಡ್‌ ಪುನರ್‌ ವಿಂಗಡಣೆ ಬಗ್ಗೆ ಸಣ್ಣ ದಾಖಲೆಯೂ ಇಲ್ಲ. ಬಿಜೆಪಿಯವರು ಕೊಟ್ಟಕರಡನ್ನೇ ನಂತರ ಅಧಿಕಾರಿಗಳು ನೀಡುತ್ತಿದ್ದಾರೆ. 198 ವಾರ್ಡ್‌ಗಳ ಬದಲು 243 ವಾರ್ಡ್‌ ಮಾಡುತ್ತೇವೆ. ಬೆಂಗಳೂರಿಗೆ ವಿಶೇಷ ಕಾಯಿದೆ ಮಾಡುತ್ತೇವೆ ಎಂದಾಗ ಬೆಂಗಳೂರಿಗೆ ಒಳ್ಳೆಯದಾಗುತ್ತದೆ ಎಂದು ಸಹಕರಿಸಿದ್ದೆವು. ಆರು ತಿಂಗಳ ಸಮಯ ಕೇಳಿದ್ದವರು ಒಂದೂವರೆ ವರ್ಷದಿಂದ ಈ ಕೆಲಸ ಮಾಡಿಲ್ಲ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಸಚಿವ ಕೃಷ್ಣ ಬೈರೇಗೌಡ ಸೇರಿ ಹಲವರು ಹಾಜರಿದ್ದರು.

ಕೋರ್ಟ್‌ ಹೇಳಿದರೂ ಗುಂಡಿ ಮುಚ್ಚಿಲ್ಲ

ರಸ್ತೆ ಗುಂಡಿ ಮುಚ್ಚುವ ಕೆಲಸವನ್ನೂ ಬಿಬಿಎಂಪಿ ಮಾಡುತ್ತಿಲ್ಲ. ಕಳೆದ ಒಂದು ವರ್ಷದಿಂದ 9 ಮಂದಿ ರಸ್ತೆಗುಂಡಿಗೆ ಬಲಿಯಾಗಿದ್ದಾರೆ. ಈ ಬಗ್ಗೆ ಹೈಕೋರ್ಟ್‌(High Court) ಸಹ ಛೀಮಾರಿ ಹಾಕಿದೆ. ಕಳೆದ ಎರಡು ತಿಂಗಳಿಂದ ಮಳೆಯೂ ಇಲ್ಲ. ಹೀಗಿದ್ದರೂ ಗುಂಡಿ ಮುಚ್ಚುತ್ತಿಲ್ಲ ಎಂದು ರಾಮಲಿಂಗಾರೆಡ್ಡಿ ಕಿಡಿ ಕಾರಿದರು. ಇನ್ನು ಟೋಯಿಂಗ್‌ ಕಿರುಕುಳದ ಬಗ್ಗೆ ಬೆಂಗಳೂರು ಪೊಲೀಸ್‌ ಆಯುಕ್ತರಿಗೆ ಮನವಿ ಪತ್ರ ನೀಡುತ್ತೇವೆ ಎಂದರು.

ಆರೆಸ್ಸೆಸ್‌ ಅಣತಿಯಂತೆ ಕೆಲಸ: ಹರಿಪ್ರಸಾದ್‌ ಕಿಡಿ

ಬಿ.ಕೆ.ಹರಿಪ್ರಸಾದ್‌ ಮಾತನಾಡಿ, ವಾರ್ಡ್‌ ವಿಂಗಡಣೆ ಸಮಿತಿ ನಿಷ್ಕ್ರೀಯವಾಗಿದೆ. ಆರ್‌ಎಸ್‌ಎಸ್‌, ಬಿಜೆಪಿಯವರು ಹೇಳಿದಂತೆ ಕೆಲಸ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ಕಚೇರಿಯಲ್ಲಿ ಅವರ ಅಣತಿಯಂತೆ ವಾರ್ಡ್‌ ವಿಂಗಡಣೆ ಮಾಡುತ್ತಿದ್ದಾರೆ. ಇದು ಸಂವಿಧಾನ ಬಾಹಿರ ಹಾಗೂ ಅವೈಜ್ಞಾನಿಕ. ಚುನಾವಣೆ ಗೆಲ್ಲುವ ಉದ್ದೇಶದಿಂದ ಈ ರೀತಿ ಕುತಂತ್ರ ಹೆಣೆಯುವುದು ಸರಿಯಲ್ಲ ಎಂದು ಕಿಡಿ ಕಾರಿದರು.

Hijab Row ಹಿಜಾಬ್ ವಿವಾದ, ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ರಾಮಲಿಂಗಾರೆಡ್ಡಿ ಅವರು ವೈಜ್ಞಾನಿಕವಾಗಿ ವಾರ್ಡ್‌ ಪುನರ್‌ವಿಂಗಡಣೆ ಮಾಡುವಂತೆ ಮನವಿ ಪತ್ರ ನೀಡಿದ್ದಾರೆ. ನಾವು ವೈಜ್ಞಾನಿಕವಾಗಿ ಜನಸಂಖ್ಯೆ ಆಧಾರದ ಮೇಲೆಯೇ ವಾರ್ಡ್‌ ಪುನರ್‌ವಿಂಗಡಣೆ ಕರಡು ಮಾಡುತ್ತಿದ್ದೇವೆ. ಕೆಲವು ವಿಚಾರಗಳನ್ನು ಮಾಧ್ಯಮಗಳ ಮುಂದೆ ತಿಳಿಸಲು ಆಗುವುದಿಲ್ಲ. ಎಲ್ಲಾ ಮಾಹಿತಿಯನ್ನೂ ಸರ್ಕಾರಕ್ಕೆ ಒದಗಿಸಲಾಗುವುದು ಅಂತ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ ತಿಳಿಸಿದ್ದಾರೆ. 

ಬಿಬಿಎಂಪಿ ವಿರುದ್ಧ ನಗರದಲ್ಲಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಬೃಹತ್‌ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ರಾಮಲಿಂಗಾರೆಡ್ಡಿ, ಸಲೀಂ ಅಹ್ಮದ್‌, ಬಿ.ಕೆ.ಹರಿಪ್ರಸಾದ್‌, ಮಾಜಿ ಸಚಿವ ಕೃಷ್ಣ ಬೈರೇಗೌಡ ಇತರರಿದ್ದರು.