Asianet Suvarna News Asianet Suvarna News

ಜೆಡಿಎಸ್‌ ಕೋಟೆಯೊಳಗೆ ಮಹಾಯುದ್ಧಕ್ಕೆ ಕಾಂಗ್ರೆಸ್‌ ರಣವೀಳ್ಯ

ಭಾರತ್‌ ಜೋಡೋ ಯಾತ್ರೆ ಬಳಿಕ ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್‌ ಪಡೆ ಸಜ್ಜಾಗಿದೆ. ಮಂಡ್ಯ ಜಿಲ್ಲೆ ಜೆಡಿಎಸ್‌ ಭದ್ರಕೋಟೆ. ಈ ಕೋಟೆಯೊಳಗೆ ಚುನಾವಣಾ ಮಹಾಸಂಗ್ರಾಮಕ್ಕೆ ಕಾಂಗ್ರೆಸ್‌ ರಣವೀಳ್ಯ ನೀಡಿದೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಮೇಲುಗೈ ಸಾಧಿಸಲು ದೃಢ ಸಂಕಲ್ಪ ಮಾಡಿದೆ.

Congress Prajadwani yatra enter Mandya snr
Author
First Published Jan 27, 2023, 6:49 AM IST

 ಮಂಡ್ಯ ಮಂಜುನಾಥ್‌

 ಮಂಡ್ಯ:  ಭಾರತ್‌ ಜೋಡೋ ಯಾತ್ರೆ ಬಳಿಕ ಮತ್ತೊಂದು ಶಕ್ತಿ ಪ್ರದರ್ಶನಕ್ಕೆ ಕಾಂಗ್ರೆಸ್‌ ಪಡೆ ಸಜ್ಜಾಗಿದೆ. ಮಂಡ್ಯ ಜಿಲ್ಲೆ ಜೆಡಿಎಸ್‌ ಭದ್ರಕೋಟೆ. ಈ ಕೋಟೆಯೊಳಗೆ ಚುನಾವಣಾ ಮಹಾಸಂಗ್ರಾಮಕ್ಕೆ ಕಾಂಗ್ರೆಸ್‌ ರಣವೀಳ್ಯ ನೀಡಿದೆ. ಮುಂಬರುವ ಚುನಾವಣೆಯಲ್ಲಿ ಜಿಲ್ಲೆಯೊಳಗೆ ಮೇಲುಗೈ ಸಾಧಿಸಲು ದೃಢ ಸಂಕಲ್ಪ ಮಾಡಿದೆ.

ಜೆಡಿಎಸ್‌ನ ಪಂಚರತ್ನ ರಥಯಾತ್ರೆ, ಬಿಜೆಪಿಯ ಜನಸಂಕಲ್ಪ ಯಾತ್ರೆ ಬಳಿಕ ಕಾಂಗ್ರೆಸ್‌ ಪಕ್ಷದಿಂದ ಪ್ರಜಾಧ್ವನಿ ಬಸ್‌ ಯಾತ್ರೆ ನಗರಕ್ಕೆ ಆಗಮಿಸುತ್ತಿದೆ. ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯುವ ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಸುರ್ಜೇವಾಲ ಸೇರಿದಂತೆ ಕಾಂಗ್ರೆಸ್‌ ನಾಯಕರು ಆಗಮಿಸುತ್ತಿದ್ದಾರೆ. ಜೆಡಿಎಸ್‌, ಬಿಜೆಪಿ ಯಾತ್ರೆಗಳನ್ನು ಮೀರಿಸುವ ರೀತಿಯಲ್ಲಿ ಕಾರ್ಯಕ್ರಮಕ್ಕೆ ಜನರನ್ನು ಸಂಘಟಿಸಲು ಕಾಂಗ್ರೆಸ್‌ ನಾಯಕರು, ಮುಖಂಡರು, ಕಾರ್ಯಕರ್ತರು ಅವಿರತವಾಗಿ ಶ್ರಮಿಸುತ್ತಿದ್ದಾರೆ.

2018ರಲ್ಲಿ ಜಿಲ್ಲೆಯ ಏಳೂ ಕ್ಷೇತ್ರಗಳನ್ನು ಕಳೆದುಕೊಂಡು ಅಸ್ತಿತ್ವವಿಲ್ಲದಂತಾಗಿದ್ದ ಕಾಂಗ್ರೆಸ್‌ ಮತ್ತೆ ಮೈಕೊಡವಿ ನಿಂತಿದೆ. ಜಿಲ್ಲಾ ನಾಯಕ ಎನ್‌.ಚಲುವರಾಯಸ್ವಾಮಿ ನೇತೃತ್ವದಲ್ಲಿ ಪಕ್ಷ ನವ ಚೈತನ್ಯ, ಶಕ್ತಿಯನ್ನು ಪಡೆದುಕೊಂಡಿದೆ. ಅಸ್ತಿತ್ವವೇ ಇಲ್ಲದ ಜಿಲ್ಲೆಯೊಳಗೆ ಎರಡು ವಿಧಾನಪರಿಷತ್‌ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ಸಿಕ್ಕ ಗೆಲುವು ಮುಖಂಡರು, ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು, ಉತ್ಸಾಹವನ್ನು ತಂದುಕೊಟ್ಟಿದೆ. ಮುಂದಿನ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆಲ್ಲಬಹುದೆಂಬ ಆಶಾಭಾವನೆ, ಭರವಸೆಯನ್ನು ಮೂಡಿಸಿದೆ.

ಜಿಲ್ಲಾ ನಾಯಕರಾದ ಎನ್‌.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ ಅವರು ಎಲ್ಲಾ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಾ, ಭಿನ್ನಮತ, ಅಸಮಾಧಾನ ಎದುರಾಗದಂತೆ ಜಾಗೃತಿ ವಹಿಸಿದ್ದಾರೆ. ಮೂಲ, ವಲಸಿಗರೆಲ್ಲರನ್ನೂ ಜೊತೆಯಾಗಿ ಕರೆದೊಯ್ಯುವುದರೊಂದಿಗೆ ಒಗ್ಗಟ್ಟು ಮೂಡಿಸುವಲ್ಲಿ ಯಶಸ್ವಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

ರಾರಾಜಿಸುತ್ತಿರುವ ಫ್ಲೆಕ್ಸ್‌: ನಗರದಲ್ಲಿ ಗಣ್ಯರಿಗೆ ಶುಭ ಕೋರುವ ಬೃಹದಾಕಾರದ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಬೆಂಗಳೂರು-ಮೈಸೂರು ಹೆದ್ದಾರಿಯುದ್ದಕ್ಕೂ ಟಿಕೆಟ್‌ ಆಕಾಂಕ್ಷಿಗಳು ತಮ್ಮ ನಾಯಕರ ಭಾವಚಿತ್ರಗಳೊಂದಿಗೆ ಶುಭಕೋರುವ ಫ್ಲೆಕ್ಸ್‌ಗಳನ್ನು ಅಳವಡಿಸಿದ್ದಾರೆ. ಪ್ರಮುಖ ವೃತ್ತಗಳು, ರಸ್ತೆಯ ಇಕ್ಕೆಲಗಳು ಹಾಗೂ ವಿದ್ಯುತ್‌ ಕಂಬಗಳು ಫ್ಲೆಕ್ಸ್‌ಗಳಿಂದ ಆವೃತವಾಗಿವೆ.

ಬೃಹತ್‌ ವೇದಿಕೆ ನಿರ್ಮಾಣ: ಮಂಡ್ಯ ವಿಶ್ವವಿದ್ಯಾನಿಲಯದ ಆವರಣದಲ್ಲಿ ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಬೃಹತ್‌ ವೇದಿಕೆಯನ್ನು ನಿರ್ಮಾಣ ಮಾಡಲಾಗಿದ್ದು, ಕಾಂಗ್ರೆಸ್‌ ಬಣ್ಣವುಳ್ಳ ಪರದೆಯನ್ನು ವೇದಿಕೆ ಹಿಂಭಾಗಕ್ಕೆ ಅಲಂಕರಿಸಲಾಗಿದೆ. 40*80 ಅಡಿ ಅಳತೆಯಲ್ಲಿ ವೇದಿಕೆಯನ್ನು ನಿರ್ಮಿಸಲಾಗಿದ್ದು, 50 ಸಾವಿರ ಜನರಿಗೆ ಆಸನಗಳ ವ್ಯವಸ್ಥೆ ಮಾಡಲಾಗಿದೆ.

ವೇದಿಕೆ ಮುಂಭಾಗ ಜರ್ಮನ್‌ ಟೆಂಟ್‌ಹೌಸ್‌ ನಿರ್ಮಿಸಲಾಗಿದ್ದು, ಅದರ ಎರಡೂ ಬದಿಯಲ್ಲಿ ಶಾಮಿಯಾನ ವ್ಯವಸ್ಥೆ ಮಾಡಲಾಗಿದೆ. ನಗರದ ಹೊರವಲಯದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬರುವ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ.

1 ಲಕ್ಷ ಜನ ಸೇರುವ ನಿರೀಕ್ಷೆ: ಪ್ರಜಾಧ್ವನಿ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ 1 ಲಕ್ಷ ಜನರನ್ನು ಸೇರಿಸಲು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ. ಆ ನಿಟ್ಟಿನಲ್ಲಿ ಜನರನ್ನು ಸಂಘಟಿಸಿ ಕರೆತರಲು ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳು, ಮಿನಿ ಬಸ್‌ಗಳು ಸೇರಿದಂತೆ ಇನ್ನಿತರ ವಾಹನ ನಿಯೋಜಿಸಿದ್ದಾರೆ. ಆಯಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಿಗೆ ಜನರನ್ನು ಸಂಘಟಿಸಿಕೊಂಡು ಬರುವ ಜವಾಬ್ದಾರಿಯನ್ನು ನೀಡಲಾಗಿದೆ. ಮಂಡ್ಯ ಕ್ಷೇತ್ರದಲ್ಲಿ ಕಾರ್ಯಕ್ರಮ ನಡೆಯುತ್ತಿರುವುದರಿಂದ ಮಂಡ್ಯ ತಾಲೂಕಿನಿಂದ 30 ಸಾವಿರ ಜನರು, ಉಳಿದ ಕ್ಷೇತ್ರಗಳಿಂದ ತಲಾ 10 ಸಾವಿರ ಜನರನ್ನು ಕರೆತರುವಂತೆ ಟಾಸ್‌್ಕ ನೀಡಲಾಗಿದೆ.

Follow Us:
Download App:
  • android
  • ios