ಹೆದ್ದಾರಿ ನಿರ್ಮಾಣ ಯೋಜನೆಗಳ ವಿರುದ್ಧ ಕಾಂಗ್ರೆಸ್‌ ನಾಯಕರು ಟೀಕೆ-ಟಿಪ್ಪಣಿ ಮಾಡುವುದನ್ನು ಬಿಟ್ಟು ಸ್ವಾಗತ ಮಾಡುವುದನ್ನು ಕಲಿಯಬೇಕು. ಇದರಿಂದ ಆ ಪಕ್ಷದ ನಾಯಕರಿಗೆ ದೊಡ್ಡ ಗೌರವ ಸಿಗುತ್ತದೆ ಎಂದ ಅಬಕಾರಿ ಸಚಿವ ಕೆ.ಗೋಪಾಲಯ್ಯ. 

ಮದ್ದೂರು(ಮಾ.09): ಬೆಂಗಳೂರು- ಮೈಸೂರು ದಶಪಥ ರಸ್ತೆ ನಿರ್ಮಾಣದಲ್ಲಿ ಕಾಂಗ್ರೆಸ್‌ ಯಾವುದೇ ಕೊಡುಗೆ ನೀಡಿಲ್ಲ ಎಂದು ಅಬಕಾರಿ ಸಚಿವ ಕೆ.ಗೋಪಾಲಯ್ಯ ಹೇಳಿದರು. ತಾಲೂಕಿನ ಗೆಜ್ಜಲಗೆರೆ ಕಾಲೋನಿ ಬಳಿ ಮಾ.12ರಂದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ ಉದ್ಘಾಟಿಸುತ್ತಿರುವ ಹಿನ್ನೆಲೆಯಲ್ಲಿ ಉನ್ನತ ಅಧಿಕಾರಿಗಳಿಂದ ಸ್ಥಳ ಪರಿಶೀಲನೆ ಹಾಗೂ ಪೂರ್ವ ಸಭೆ ಉದ್ದೇಶಿಸಿ ಮಾತನಾಡಿದರು.

ಈ ಹಿಂದೆ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರದಲ್ಲಿದ್ದರೂ ಸಹ ದೇಶದ ಹೆದ್ದಾರಿಗಳ ನಿರ್ಮಾಣ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿತ್ತು. ಆ ನಂತರ ಬಿಜೆಪಿ ಸರ್ಕಾರದಲ್ಲಿ ಪ್ರಧಾನಿಯಾಗಿದ್ದ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಈಗಿನ ಪ್ರಧಾನಿ ನರೇಂದ್ರ ಮೋದಿ ಹೆದ್ದಾರಿ ನಿರ್ಮಾಣದ ಯೋಜನೆಗಳಿಗೆ ಹೆಚ್ಚು ಒತ್ತು ನೀಡಿದೆ. ಇದರ ಫಲವೇ ಬೆಂಗಳೂರು - ಮೈಸೂರು ದಶಪಥ ರಸ್ತೆಯಾಗಿ ಪರಿವರ್ತನೆಗೆ ಕಾರಣವಾಗಿದೆ ಎಂದರು.

ಮಾ.12ರಂದು ದಶಪಥ ಹೆದ್ದಾರಿ ಉದ್ಘಾಟನೆ: ಮಂಡ್ಯ ಮಾರ್ಗದ ವಾಹನ ಸಂಚಾರ ಬದಲಾವಣೆ

ಹೆದ್ದಾರಿ ನಿರ್ಮಾಣ ಯೋಜನೆಗಳ ವಿರುದ್ಧ ಕಾಂಗ್ರೆಸ್‌ ನಾಯಕರು ಟೀಕೆ-ಟಿಪ್ಪಣಿ ಮಾಡುವುದನ್ನು ಬಿಟ್ಟು ಸ್ವಾಗತ ಮಾಡುವುದನ್ನು ಕಲಿಯಬೇಕು. ಇದರಿಂದ ಆ ಪಕ್ಷದ ನಾಯಕರಿಗೆ ದೊಡ್ಡ ಗೌರವ ಸಿಗುತ್ತದೆ ಎಂದರು.
ಪ್ರಧಾನಿ ಮೋದಿ ಅವರು ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ದಶಪಥ ಹೆದ್ದಾರಿ ಉದ್ಘಾಟನೆ ಮಾಡುತ್ತಿಲ್ಲ. ಬೆಂಗಳೂರು - ಮೈಸೂರು ಜೊತೆಗೆ ಹೆದ್ದಾರಿ ವ್ಯಾಪ್ತಿಯಲ್ಲಿ ಬರುವ ನಗರಗಳು ಅಭಿವೃದ್ಧಿಗೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಬೆಂಗಳೂರು- ಮೈಸೂರು ಹೆದ್ದಾರಿ ವ್ಯಾಪ್ತಿಯ ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ, ಶ್ರೀರಂಗಪಟ್ಟಣ ನಡುವೆ ಕೆಲವೊಂದು ಸಣ್ಣ ಪುಟ್ಟಲೋಪದೋಷಗಳು ಇರುವುದು ಗಮನಕ್ಕೆ ಬಂದಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಲೋಪದೋಷ ಸರಿಪಡಿಸುವಂತೆ ಸೂಚನೆ ನೀಡಲಾಗಿದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.

ಸಚಿವ ನಾರಾಯಣಗೌಡ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಾರೆ ಎನ್ನುವುದು ಕೇವಲ ವದಂತಿ. ಅವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಸೇರುವ ಪ್ರಶ್ನೆಯೇ ಇಲ್ಲ. ಬಿಜೆಪಿ ಸರ್ಕಾರ ಅವರಿಗೆ ಸಚಿವ ಸ್ಥಾನದ ಜೊತೆಗೆ ಎಲ್ಲ ಸ್ಥಾನಮಾನ ನೀಡಿದೆ. ಅಲ್ಲದೇ, ಅವರ ಸ್ವಕ್ಷೇತ್ರ ಕೆ.ಆರ್‌.ಪೇಟೆ ಅಭಿವೃದ್ಧಿಗೆ ಸಾಕಷ್ಟುಅನುದಾನ ನೀಡಿದೆ. ಹೀಗಾಗಿ ನಾರಾಯಣಗೌಡರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರುತ್ತಾರೆ ಎನ್ನುವುದು ಕಾಂಗ್ರೆಸ್‌ ಹುಟ್ಟುಹಾಕಿರುವ ಸುಳ್ಳಿನ ಕಂತೆ ಎಂದು ಕಿಡಿಕಾರಿದರು.

ಸಂಸದ ಪ್ರತಾಪ್‌ ಸಿಂಹ, ರಾಜ್ಯ ಉಪಾಧ್ಯಕ್ಷ ನಿರ್ಮಲ್‌ಕುಮಾರ್‌ ಸುರಾನ, ಕಾರ್ಯಕಾರಿಣಿ ಸಮಿತಿ ಸದಸ್ಯ ಡಾ.ಸಿದ್ದರಾಮಯ್ಯ, ಜಿಲ್ಲಾಧ್ಯಕ್ಷ ಸಿ.ಪಿ.ಉಮೇಶ್‌, ಬಿಜೆಪಿ ಮುಖಂಡ ಎಸ್‌.ಪಿ.ಸ್ವಾಮಿ, ಜಿಪಂ ಮಾಜಿ ಸದಸ್ಯ ಬೋರಯ್ಯ, ಮುಖಂಡರಾದ ಹನುಮಂತೇಗೌಡ, ಮನುಕುಮಾರ್‌, ಜಿ.ಸಿ. ಮಹೇಂದ್ರ, ಸುನೀಲ್‌, ಶಿವರಾಂ ಮತ್ತಿತರರಿದ್ದರು.