RV ದೇಶಪಾಂಡೆ ವಿರುದ್ಧ ಕಾಂಗ್ರೆಸ್ ನಾಯಕನ ಆಕ್ರೋಶ
* ಈಗಾಗಲೇ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಪಡೆಯಲಾರೆ
* ದೇಶಪಾಂಡೆ ಅವರೊಂದಿಗಿನ ಹಳಸಿದ ಸಂಬಂಧವು ಎಂದಿಗೂ ಸರಿಯಾಗುವುದಿಲ್ಲ
* ನಾನು ಕಾಂಗ್ರೆಸ್‌ನ ಪ್ರಾಮಾಣಿಕ ನಿಷ್ಠಾವಂತ ಕಾರ್ಯಕರ್ತ
ಹಳಿಯಾಳ(ಆ.26): ನಾನು ಕಾಂಗ್ರೆಸ್‌ನ ಪ್ರಾಮಾಣಿಕ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಶಾಸಕ ಆರ್.ವಿ. ದೇಶಪಾಂಡೆ ಅವರು ಮತ್ತು ನನ್ನ ನಡುವಿನ ಸಂಬಂಧವು ಭವಿಷ್ಯದಲ್ಲಿಯೂ ಸುಧಾರಿಸಲು ಸಾಧ್ಯವೇ ಇಲ್ಲ ಎಂದು ವಿಧಾನಪರಿಷತ್ ಸದಸ್ಯ ಎಸ್.ಎಲ್. ಘೋಟ್ನೆಕರ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ವಿವಾದವನ್ನು ಬಗೆಹರಿಸಿ ಟಿಕೆಟ್ ನೀಡುವುದಾದರೆ ಮಾತ್ರ ಸಂಧಾನಕ್ಕೆ ಮುಂದಾಗುವೆ. ಈಗಾಗಲೇ ಇಟ್ಟ ಹೆಜ್ಜೆಯನ್ನು ಹಿಂದಕ್ಕೆ ಪಡೆಯಲಾರೆ. ದೇಶಪಾಂಡೆ ಅವರೊಂದಿಗಿನ ಹಳಸಿದ ಸಂಬಂಧವು ಎಂದಿಗೂ ಸರಿಯಾಗುವುದಿಲ್ಲ. ಅದು ಇನ್ನಷ್ಟು ಬಿರುಕು ಬಿಡಲಿದೆಯೇ ಹೊರತು ಸರಿಯಾಗುವುದಿಲ್ಲ. ಅದೊಂದು ಮುಗಿದ ಅಧ್ಯಾಯವಾಗಿದೆ ಎಂದರು.
ಪಕ್ಷ ತೊರೆದವರ ಮರು ಸೇರ್ಪಡೆ ವಿಚಾರ : ಕೈ ನಾಯಕರ ಪ್ರತಿಕ್ರಿಯೆ
ಇನ್ನಿತರ ಪಕ್ಷದ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದನ್ನು ಬ್ಲಾಕ್ ಅಧ್ಯಕ್ಷ ಸುಭಾಷ್ ಕೋರ್ವೆಕರ ಅವರು ಖಂಡಿಸಿದ್ದು ಅಲ್ಲದೇ ಅದನ್ನು ದೇಶಪಾಂಡೆ ಅವರು ನನ್ನನ್ನು ಕರೆಸಿ ಚರ್ಚಿಸುವ ಬದಲು ಪತ್ರಿಕೆಯ ಮೂಲಕ ಅಸಿಂಧು ಎಂದು ಘೋಷಿಸಿದ್ದು ನನ್ನ ಮನಸ್ಸಿಗೆ ನೋವಾಗಿದ್ದು, ಅದನ್ನು ಎಂದಿಗೂ ಮರೆಯಲಾರೆ ಎಂದರು.
ಜೋಯಿಡಾದ ಅಣಶಿಯಲ್ಲಿ ಗುಡ್ಡ ಕುಸಿತದಿಂದಾಗಿ ಸಂಚಾರ ಬಂದ್ ಆಗಿದ್ದು, ಸರ್ಕಾರ ಮತ್ತು ಅಧಿಕಾರಿಗಳು ಅದನ್ನು ತೆರವುಗೊಳಿಸಲು ಮುಂದಾಗದ ಹಿನ್ನೆಲೆ ಕಾಂಗ್ರೆಸ್ ಕಾರ್ಯಕರ್ತರು ಶ್ರಮದಾನದ ಮೂಲಕ ತೆರವುಗೊಳಿಸಿದ್ದು, ಅವರನ್ನು ಹಳಿಯಾಳದಲ್ಲಿ ಗೌರವಿಸಲಾಗುವುದು. ಅಲ್ಲದೇ ತಾಲೂಕಿನ ದುಸಗಿ ಸೇತುವೆ ದುರಸ್ತಿ ಕಾರ್ಯವು ಆರಂಭಗೊಂಡಿದ್ದು, ಸ್ಥಳಕ್ಕೆ ಭೇಟಿ ನೀಡಿ ಗುಣಮಟ್ಟದ ಕಾಮಗಾರಿಗೆ ಒತ್ತಾಯಿಸಲಾಗಿದೆ ಎಂದರು.
ಎಪಿಎಂಸಿ ಅಧ್ಯಕ್ಷ ಶ್ರೀನಿವಾಸ ಘೋಟ್ನೆಕರ, ಉಪಾಧ್ಯಕ್ಷ ಸಂತೋಷ ಮಿರಾಶಿ, ಕೈತಾನ ಬಾರಬೋಜಾ, ಅಬ್ದುಲ್ಸಲಾಂ ದಲಾಲ್, ವಾಮನ ಮಿರಾಶಿ, ಯಶವಂತ ಪಟ್ಟೇಕಾರ ಮತ್ತಿತರರು ಇದ್ದರು.