ಪಕ್ಷದ ನಿರ್ಣಯಕ್ಕೇ ಸೆಡ್ಡು ಹೊಡೆದ ಕಾಂಗ್ರೆಸ್ ಶಾಸಕ ತುಕಾರಾಂ..!
* ಜಿಂದಾಲ್‌ಗೆ ಭೂಮಿ ನೀಡಲು ಕಾಂಗ್ರೆಸ್ ಶಾಸಕ ತುಕಾರಾಂ ಆಗ್ರಹ
* ಜಿಂದಾಲ್ ಕಂಪನಿ ನೇರ ಹಾಗೂ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ
* ಕೊರೋನಾ ಸಂಕಷ್ಟದ ಕಾಲದಲ್ಲಿ ಆಕ್ಸಿಜನ್ ಒದಗಿಸಿ ಮಾನವೀಯ ಕೆಲಸ ಮಾಡಿದ ಜಿಂದಾಲ್
ಸಂಡೂರು(ಜೂ.06): ರಾಜ್ಯ ಸರ್ಕಾರ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿದಾಗ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್‌ನ ಶಾಸಕರೇ ಇದೀಗ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಬೇಕು ಎಂದು ಒತ್ತಾಯಿಸುವ ಮೂಲಕ ಪಕ್ಷದ ನಿರ್ಣಯಕ್ಕೆ ಸೆಡ್ಡು ಹೊಡಿದ್ದಾರೆ.
ಎರಡು ದಿನಗಳ ಹಿಂದೇ ವಿಧಾನಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ಜಿಂದಾಲ್ ಪರ ಧ್ವನಿ ಎತ್ತಿದ್ದರೆ, ಇದೀಗ ಸಂಡೂರು ಶಾಸಕ ಈ. ತುಕಾರಾಂ ಸಹ ಭೂಮಿ ಪರಭಾರೆ ಮಾಡಲೇಬೇಕು ಎಂದು ಆಗ್ರಹಿಸಿದ್ದಾರೆ.
ಏಕಾಏಕಿ ನಿರ್ಧಾರ ಬದಲಿಸಿದ ಬಿಎಸ್‌ವೈ: ಯಡಿಯೂರಪ್ಪ ವಿರುದ್ಧ ಹರಿಹಾಯ್ದ ಪಾಟೀಲ್..!
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಂದಾಲ್ ಕಂಪನಿ ನೇರ ಹಾಗೂ ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದೆ. ಜತೆಗೆ ಅಭಿವೃದ್ಧಿ ಪೂರಕವಾಗಿ ಕೆಲಸ ಮಾಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸಾವಿರಾರು ಕೋಟಿ ಆರ್ಥಿಕ ಬಲ ತುಂಬಿದೆ. ಕೊರೋನಾ ಸಂಕಷ್ಟದ ಕಾಲದಲ್ಲಿ 1000 ಬೆಡ್ ಆಸ್ಪತ್ರೆ ನಿರ್ಮಾಣ, 800 ಮೆಟ್ರಿಕ್ ಟನ್ ಆಕ್ಸಿಜನ್ ಒದಗಿಸಿ ಮಾನವೀಯ ಕೆಲಸ ಮಾಡಿದೆ. ಹೀಗಿರುವಾಗ ರಾಜ್ಯ ಸರ್ಕಾರ ಜಿಂದಾಲ್‌ಗೆ ಭೂಮಿ ಪರಭಾರೆ ಮಾಡಿ ಇದೀಗ ಹಿಂಪಡೆದಿರುವುದು ಖಂಡನೀಯ. ತಕ್ಷಣ ಸರ್ಕಾರ ಭೂಮಿ ನೀಡಬೇಕು ಎಂದಿರುವ ತುಕಾರಂ, ಇದರಲ್ಲಿ ರಾಜಕೀಯ ಮಾಡದೆ ಕಾನೂನಾತ್ಮಕವಾಗಿ ಬೆಂಬಲಿಸಿದರೆ ತಪ್ಪೇನಿದೆ ಎಂದು ಪ್ರಶ್ನಿಸಿದರು.
ಈ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಾಹಿತಿ ಕೇಳಿದ್ದು ಎಲ್ಲ ವಿವರಗಳನ್ನು ನೀಡುವೆ. ಅಲ್ಲದೆ ಜಿಂದಾಲ್‌ಗೆ ನೀಡುವಂತೆ ವಿಧಾನಸಭೆಯಲ್ಲಿ ಧ್ವನಿ ಎತ್ತುವೆ ಎಂದರು.
ಜಿಂದಾಲ್ 2000 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎಂದು ಎಚ್.ಕೆ. ಪಾಟೀಲ್ ಹೇಳಿದ್ದಾರೆ ಎಂಬ ಪ್ರಶ್ನೆಗೆ, ಅದು ನ್ಯಾಯಾಲಯದಲ್ಲಿದ್ದು ಅದರ ಬಗ್ಗೆ ಮಾತನಾಡುವುದಿಲ್ಲ. ಆ ತೀರ್ಪು ಏನಾಗುತ್ತದೆ ಆಗಲಿ. ಹಿಂದುಳಿದ ಕಲ್ಯಾಣ ಕರ್ನಾಟಕ ಮತ್ತು ಬಳ್ಳಾರಿ ಭಾಗದ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯ ಹಿತದೃಷ್ಟಿಯಿಂದ ಸರ್ಕಾರ ಭೂಮಿಯನ್ನು ಪರಭಾರೆ ಮಾಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಎಂಎಲ್‌ಸಿ ಕೆ.ಎಸ್.ಎಲ್. ಸ್ವಾಮಿ, ಏಕಾಂಬರಪ್ಪ, ಆಶಾಲತಾ ಸೋಮಪ್ಪ, ಪುರಸಭೆ ಅಧ್ಯಕ್ಷೆ ಅನಿತಾ ವಸಂತಕುಮಾರ, ಉಪಾಧ್ಯಕ್ಷ ಈರೇಶ ಸಿಂಧೆ, ಜಿಪಂ ಸದಸ್ಯ ಅಕ್ಷಯ್ ಲಾಡ್ ಇದ್ದರು.