ಗದಗ(ಏ.28): ಜಿಂದಾಲ್‌ ಕಂಪನಿಗೆ ಎಕರೆಗೆ ಕೇವಲ 1.22 ಲಕ್ಷ ರು.ನಂತೆ ರಾಜ್ಯದ ಅತ್ಯಮೂಲ್ಯ 3665 ಎಕರೆ ಭೂಮಿ ನೀಡುವ ಮಂಗಳವಾರದ ಕ್ಯಾಬಿನೆಟ್‌ ನಿರ್ಧಾರ ರಾಜ್ಯದ ಜನತೆಗೆ ಮಾಡುವ ಮೋಸವಾಗಿದ್ದು, ಕೂಡಲೇ ಈ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಹಿರಿಯ ಕಾಂಗ್ರೆಸ್‌ ಮುಖಂಡ, ಶಾಸಕ ಎಚ್‌.ಕೆ. ಪಾಟೀಲ ಆಗ್ರಹಿಸಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಕೊರೋನಾದಿಂದಾಗಿ ಸಾವಿನ ಮೆರವಣಿಗೆ ನಡೆದಿದೆ. ಜನತೆಗೆ ಅಗತ್ಯ ಸೌಲಭ್ಯಗಳಾದ ಆಸ್ಪತ್ರೆ, ಆಕ್ಸಿಜೆನ್‌, ಆ್ಯಂಬುಲೆನ್ಸ್‌ ಸಿಗದೇ ಪರದಾಡುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಜನತೆಯ ಹಿತ ಕಾಯುವ ಬದಲಾಗಿ ಕ್ಯಾಬಿನೆಟ್‌ನಲ್ಲಿ ಜಿಂದಾಲ್‌ ಕಂಪನಿಗೆ ಭೂಮಿ ನೀಡುವ ನಿರ್ಧಾರ ಮಾಡಿದ್ದು ಯಾವ ಕಾರಣಕ್ಕೆ? ಈ ಹಿಂದೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರವಿದ್ದ ಸಂದರ್ಭದಲ್ಲಿ ಇದೇ ವಿಷಯವಾಗಿ ನಾನು ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಪತ್ರ ಬರೆದಾಗ ಇದೇ ಯಡಿಯೂರಪ್ಪ ಹಾಗೂ ಬಿಜೆಪಿಯವರು ಜಿಂದಾಲ್‌ ಕಂಪನಿಗೆ ಒಂದಿಂಚು ಭೂಮಿ ನೀಡಲು ಬಿಡುವುದಿಲ್ಲ ಎಂದು ದೊಡ್ಡ ಹೋರಾಟ ಮಾಡಿದ್ದರು. ಈಗ್ಯಾಕೆ ನಿಮ್ಮ ನಿರ್ಧಾರ ಬದಲಾಗಿದೆ? ನಿಮ್ಮ ಸರ್ಕಾರದ ಸಚಿವರಿಂದ ಒತ್ತಡವಿದೆಯೇ ಅಥವಾ ನಿಮ್ಮ ಪಕ್ಷದ ಹಿರಿಯರ ಒತ್ತಡವಿದೆಯೇ? ಎನ್ನುವುದನ್ನು ನೀವು ರಾಜ್ಯದ ಜನತೆಯ ಮುಂದೆ ಹೇಳಬೇಕು. ಯಾವ ಕಾರಣಕ್ಕಾಗಿ ಏಕಾಏಕಿ ನಿಮ್ಮ ನಿರ್ಧಾರ ಬದಲಿಸಿ ಆ ಕಂಪನಿಗೆ ಭೂಮಿ ನೀಡುವ ನಿರ್ಧಾರಕ್ಕೆ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಂದಾಲ್‌ಗೆ 3,677 ಎಕರೆ ಜಮೀನು ಮಾರಾಟ: ಸರ್ಕಾರದ ವಿರುದ್ಧ ಎಚ್‌ಡಿಕೆ ಕೆಂಡ

1.22 ಲಕ್ಷಕ್ಕೆ ಒಂದು ಎಕರೆ ಭೂಮಿ

ಸದ್ಯ ಪ್ರತಿ ಎಕರೆ ಜಮೀನಿಗೆ 1.22 ಲಕ್ಷದಂತೆ ಜಿಂದಾಲ್‌ ಕಂಪನಿಗೆ ಭೂಮಿ ಪರಭಾರೆ ಮಾಡುತ್ತಿದ್ದೀರಿ, ಆದರೆ ಬೇರೆಯವರು ಅಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಕೇಳಿದರೆ ಪ್ರತಿ ಎಕರೆಗೆ 80 ಲಕ್ಷದವರೆಗೂ ಹೇಳುತ್ತೀರಿ. ಇದ್ಯಾವ ನ್ಯಾಯ ಯಡಿಯೂರಪ್ಪನವರೇ? ಇದರಲ್ಲಿ ಭಾರೀ ಪ್ರಮಾಣದ ಭ್ರಷ್ಟಾಚಾರ ನಡೆದಿದ್ದು, ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

2500 ಕೋಟಿ ಪಂಗನಾಮ

ರಾಜ್ಯ ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಬೊಕ್ಕಸಕ್ಕೆ 2500 ಕೋಟಿ ರುಪಾಯಿಗಳ ಪಂಗನಾಮ ಬೀಳಲಿದೆ. ಇಷ್ಟೊಂದು ತಪ್ಪು ನಿರ್ಧಾರ ತೆಗೆದುಕೊಳ್ಳಲು ನಿಮಗೆ ಯಾರ ಒತ್ತಡವಿದೆ? ಯಾವ ಕಾರಣಕ್ಕಾಗಿ ಹೀಗೆ ಮಾಡಿದ್ದೀರಿ? ಇದರ ಹಿಂದೆ ಯಾರಿದ್ದಾರೆ ಎನ್ನುವುದನ್ನು ನೀವು ರಾಜ್ಯ ಜನತೆಗೆ ತಿಳಿಸಬೇಕು ಎಂದು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದರು.

ಕ್ರಿಮಿನಲ್‌ ಮೊಕದ್ದಮೆ:

ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ಕುರಿತು ನಡೆದ ಲೋಕಾಯುಕ್ತ, ಸಿಬಿಐ ತನಿಖೆಯ ಆಧಾರದಲ್ಲಿ ಜಿಂದಾಲ್‌ ಕಂಪನಿಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸರ್ವೋಚ್ಛ ನ್ಯಾಯಾಲಯ ತಿಳಿಸಿತ್ತು. ರಾಜ್ಯ ಸರ್ಕಾರದ ಅಂಗ ಸಂಸ್ಥೆಯಾದ ಎಂಎಂಎಲ್‌ ಕಂಪನಿಗೆ (ಸರ್ಕಾರಕ್ಕೆ) 2 ಸಾವಿರ ಕೋಟಿ ಹಣ ಬಾಕಿ ನೀಡದೇ ಇರುವಂತಹ ಕಟಬಾಕಿ ಕಂಪನಿಗೆ ಯಾವ ಕಾರಣಕ್ಕೆ ಭೂಮಿ ನೀಡಿದ್ದೀರಿ ಎಂಬುದಕ್ಕೆ ಸ್ಪಷ್ಟನೆ ನೀಡಬೇಕೆಂದು ಎಚ್‌.ಕೆ.ಪಾಟೀಲ್‌ ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಹಿರಿಯ ಕಾಂಗ್ರೆಸ್‌ ನಾಯಕ ಗುರಣ್ಣ ಬಳಗಾನೂರ, ಜಿಪಂ ಸದಸ್ಯ ವಾಸಣ್ಣ ಕುರುಡಗಿ, ತಾಪಂ ಅಧ್ಯಕ್ಷ ವಿದ್ಯಾಧರ ದೊಡ್ಡಮನಿ, ಜಿಲ್ಲಾ ಯುವ ಕಾಂಗ್ರೆಸ್‌ ಅಧ್ಯಕ್ಷ ಅಶೋಕ ಮಂದಾಲಿ, ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಉಮರ ಫಾರೂಕ್‌ ಹುಬ್ಬಳ್ಳಿ ಮುಂತಾದವರು ಹಾಜರಿದ್ದರು.