ಬೆಳಗಾವಿ(ಫೆ.02): ಇಷ್ಟೊತ್ತಿಗೆ ಸಂಪುಟ ವಿಸ್ತರಣೆ ಆಗಬೇಕಿತ್ತು, ಆದರೆ ತಡ ಆಗಿದೆ. ಯಾರಿಗೆ ಸಚಿವ ಸ್ಥಾನ ಕೊಡುತ್ತಾರೆ ಎಂಬುದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರವಾಗಿದೆ ಎಂದು ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಚಿವ ಸತೀಶ್ ಜಾರಕಿಹೊಳಿ‌ ಅವರು ಹೇಳಿದ್ದಾರೆ.

ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಬಿಜೆಪಿ ಕಚೇರಿಯಲ್ಲಿ ಕಸ ಗೂಡಿಸಲು ಸಿದ್ಧ ಎಂಬ ಹೇಳಿಕೆ ವಿಚಾರದ ಬಗ್ಗೆ ಭಾನುವಾರ ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಸತೀಶ್ ಜಾರಕಿಹೊಳಿ‌ ಅವರು, ಕಸ ಹೊಡಿಯಲೇಬೇಕು ಒಂದು ಪಕ್ಷಕ್ಕೆ ಸೇರಿದ ಮೇಲೆ, ಆ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರಬೇಕು ಎಂದು ಹೇಳಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಆಪರೇಷನ್ ಕಮಲ ಆದ ಮೇಲೆ ಬ್ಯಾಲೆನ್ಸ್ ಮಾಡಲು ಆಗುವುದಿಲ್ಲ. ಸಿಎಂ ಬಿ. ಎಸ್. ಯಡಿಯೂರಪ್ಪ ಪಕ್ಷಕ್ಕೆ ಬಂದವರ ಮರ್ಜಿಯಲ್ಲಿದ್ದಾರೆ. ಹೀಗಿದ್ದಾಗ ಜಿಲ್ಲಾವಾರು, ರೀಜಿನಲ್ ಬ್ಯಾಲೆನ್ಸ್ ಮಾಡಲು ಆಗುವುದಿಲ್ಲ. ಸಚಿವ ಸ್ಥಾನವನ್ನು ಮೂಲ ಬಿಜೆಪಿಗರಿಗೆ ಕೊಡಲು ಆಗುವುದಿಲ್ಲ ಮಿಕ್ಕಿದವರೆಲ್ಲಾ ಕನಸು ಕಾಣಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಪಕ್ಷಕ್ಕೆ ವಲಸೆ ಬಂದವರನ್ನ ಸಮಾಧಾನ ಪಡಿಸಲು ಮೂಲ ಬಿಜೆಪಿಗರನ್ನ ಯಡಿಯೂರಪ್ಪ ಕಡೆಗಣಿಸಲೇಬೇಕು. ಸಂಪುಟ ವಿಸ್ತರಣೆಯಾದ ಬಳಿಕ ಸಮಸ್ಯೆ ಆರಂಭವಾಗಲಿದೆ. ಸರ್ಕಾರದ ಮೇಲೆ ಕೂಡ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. 

ರಮೇಶ್ ಜಾರಕಿಹೊಳಿ‌ ಜಲಸಂಪನ್ಮೂಲ ಖಾತೆಗಾಗಿ ಪಟ್ಟು ಹಿಡಿದ ವಿಚಾರದ ಬಗ್ಗೆ ಮಾತನಾಡಿದ ಅವರು, ಕಳೆದ ಎರಡು ವರ್ಷದಿಂದಲೇ ಜಲಸಂಪನ್ಮೂಲ ಖಾತೆ ತೆಗೆದುಕೊಳ್ಳುವ ಪ್ರಯತ್ನ ಮಾಡಿದ್ದರು. ರಮೇಶ್ ರಾಜ್ಯದ ಅಭಿವೃದ್ಧಿಗಾಗಿ ಖಾತೆ ಕೇಳುತ್ತಿಲ್ಲ, ತಮ್ಮ ಹಿತಾಸಕ್ತಿಗೆ ಕೇಳುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಜಲಸಂಪನ್ಮೂಲ ಖಾತೆ ಸಿಗದಿದ್ದಕ್ಕೆ ಹೀಗೆ ಮಾಡಿದ್ದಾರೆ. ಇದೀಗ ರಮೇಶ್‌ಗೆ ಜಲಸಂಪನ್ಮೂಲ ಖಾತೆ ಸಿಗದಿದ್ದರೆ ಯಡಿಯೂರಪ್ಪಗೂ ಹಾಗೇ ಮಾಡಲು ಆರಂಭಿಸುತ್ತಾರೆ. ದಿನಕ್ಕೊಂದು ಹೊಸ ಸಮಸ್ಯೆಯನ್ನ ಯಡಿಯೂರಪ್ಪ ಮುಂದೆ ತಂದು ಮತ್ತೆ ಬಂಡಾಯ ಏಳುತ್ತಾನೆ. ರಮೇಶ್ ಮೊದಲಿನಿಂದಲೂ ಟ್ರಬಲ್ ಮೇಕರ್ ಇದ್ದ ಹಾಗೆ ಟ್ರಬಲ್ ಮಾಡ್ತಾನೆ ಇರುತ್ತಾನೆ.  ಯಡಿಯೂರಪ್ಪ ಎಷ್ಟು ಸಹಿಸಿಕೊಳ್ಳುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ ಎಂದು ತಿಳಿಸಿದ್ದಾರೆ. 

"