ಕೊಪ್ಪಳ(ಫೆ.13): ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಬಡವರನ್ನು ಮತ್ತು ರೈತರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿ​ದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಆರೋಪಿಸಿದ್ದಾರೆ.

ಲೇಬಗೇರಾ ಜಿಪಂ ವ್ಯಾಪ್ತಿಯ ಗ್ರಾಮಗಳಾದ ಹನುಮನಳ್ಳಿ, ಟಣಕನಕಲ್‌, ಹಟ್ಟಿ, ಕಲಕೇರಿ, ದೇವಲಾಪುರ ಚಿಲವಾಡಗಿ ಓಜನಹಳ್ಳಿ ಯತ್ನಟ್ಟಿ ಹುಚ್ಚೇಶ್ವರ ಕ್ಯಾಂಪ್‌ ನರೇಗಲ್‌ ಹಾಗೂ ಮಾದಿನೂರುಗಳಲ್ಲಿ ಅಂದಾಜು . 2 ಕೋಟಿಯ ವಿವಿಧ ಕಾಮಾಗಾರಿಗಳ ಭೂಮಿಪೂಜೆ, ಶಾಲಾ ಕಟ್ಟಡಗಳ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದರು.

ಸರ್ವರಿಗೂ ಸಮಪಾಲು, ಸಮಬಾಳು ಎಂದು ಹೇಳುವ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ತಾರತಮ್ಯ ಮಾಡುತ್ತಿದ್ದಾರೆ. ದಿನೇ ದಿನೆ ಬೆಲೆಗಳು ಗಗನಕ್ಕೇರುತ್ತಿದ್ದು ಬಡವರಿಗೆ ಜೀವನ ಕಷ್ಟಮಯವಾಗಿದೆ. ಪೆಟ್ರೋಲ್‌, ಡಿಸೇಲ್‌ ಹಾಗೂ ದಿನಸಿ ವಸ್ತುಗಳ ಬೆಲೆ ದೈನಂದಿನ ಜೀವನಕ್ಕೆ ಮುಳುವಾಗುತ್ತಿವೆ. ಮಳೆಯಿಂದ ಹಾನಿಯಾಗಿರುವ ಮನೆಗಳಿಗೆ ಬಿಡಿಗಾಸು ನೀಡಿಲ್ಲ. ಕಾಂಗ್ರೆಸ್‌ ಸರ್ಕಾರದ ವಿದ್ಯಾರ್ಥಿಗಳಿಗೆ ನೀಡಿದ ಮಹತ್ವಾಂಕ್ಷಿ ಯೋಜನೆಯಾದ ವಿದ್ಯಾಸಿರಿ, ಉಚಿತ ಲ್ಯಾಪ್‌ಟಾಪ್‌ ಕೊಡುಗೆ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಶಾಲಾ-ಕಾಲೇಜುಗಳು ಪ್ರಾರಂಭವಾಗಿರುವುದರಿಂದ ಬಡ ವಿದ್ಯಾರ್ಥಿಗಳು ಹಾಸ್ಟೆಲ್‌ ಸೌಲಭ್ಯದಿಂದ ವಂಚಿತರಾದರೆ ಈ ಸರ್ಕಾರದಲ್ಲಿ ಪರ್ಯಾಯ ಯಾವ ವ್ಯವಸ್ಥೆ ಇದೆ ಎಂದು ಪ್ರಶ್ನೆ ಮಾಡಿದರು.

'ಅಧಿಕಾರದಲ್ಲಿ ಕಾಂಗ್ರೆಸ್ಸಿನ ಹುಲಿಗಳೇ ಇರುತ್ತವೆಯೇ ವಿನಃ ಬಿಜೆಪಿಯವರಲ್ಲ'

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಲ್ಪಿಸಿದ ವಿದ್ಯಾಸಿರಿ ಯೋಜನೆ ಅನೇಕ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗಿತ್ತು. ಅನ್ನಭಾಗ್ಯದ ಬಡವರ ಪಾಲಿನ ರೇಷನ್‌ ಅಕ್ಕಿಯನ್ನು ಕಸಿದುಕೊಳ್ಳುತ್ತಿರುವ ಈ ಸರ್ಕಾರ ಎಲ್ಲ ಕ್ಷೇತ್ರದಲ್ಲಿ ವಿಫಲವಾಗಿದೆ. ಮುಂಬರುವ ದಿನಗಳಲ್ಲಿ ನಾಡಿನ ಜನತೆ ಅವರಿಗೆ ತಕ್ಕ ಪಾಠ ಕಲಿಸಿ ಮತ್ತೊಮ್ಮೆ ರೈತರ, ಬಡವರ, ಶೋಷಿತ ವರ್ಗಗಳ ಶ್ರೇಯೋಭಿವೃದ್ಧಿ ಬಯಸುವ ಕಾಂಗ್ರೆಸ್‌ ಸರ್ಕಾರ ಅಧಿಕಾರ ಚುಕ್ಕಾಣಿ ಹಿಡಿಯುವುದು ಶತಸಿದ್ಧ ಎಂದು ಹೇಳಿದರು.

ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚಿಸಿ ಜನಪರ ಕೆಲಸಗಳನ್ನು ನಿರ್ವಹಿಸುವ ನಾಯಕರನ್ನು ಬೆಂಬಲಿಸಲು ಗ್ರಾಮಸ್ಥರಿಗೆ ಕರೆ ನೀಡಿದರು. ತಾಪಂ ಅಧ್ಯಕ್ಷ ಬಾಲಚಂದ್ರನ್‌, ತಾಪಂ ಸದಸ್ಯರಾ​ದ ಸುಲೋಚನ ಸಂಕ್ಕಣ್ಣನವರ್‌, ಗ್ರಾಪಂ ಅಧ್ಯಕ್ಷೆ ಕಮಲಮ್ಮ ಹರಿಜನ, ಉಪಾಧ್ಯಕ್ಷ ಉಡಚಪ್ಪ ಭೋವಿ, ನಗರಸಭಾ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಅಕ್ಬರ ಪಾಷಾ ಪಲ್ಟನ್‌, ಗ್ರಾಪಂ ಸದಸ್ಯರಾದ ನಬಿಸಾಬ, ಸಿದ್ದಪ್ಪ ಹೊಸಗೇರಿ, ಯಮನೂರಪ್ಪ ನಾಯಕ, ಮುಖಂಡರಾದ ಪ್ರಸನ್‌ ಗಡಾದ, ಅಮರೇಶ ಉಪಲಾಪುರ, ರಾಮಣ್ಣ ಹದ್ದಿನ, ವೀರಣ್ಣ ಸೊಂಡುರು, ಮುಕ್ಕಣ್ಣ ಹೊಸಗೇರಿ, ಮೈಲಾರಪ್ಪ ಟಣಕನಕಲ್‌, ವಿವಿಧ ಇಲಾಖೆಯ ತಾಲೂಕು ಅಧಿಕಾರಿಗಳು, ಕೆಆರ್‌ಐಡಿಎಲ್‌ ಅಭಿಯಂತರರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.