'ಅಧಿಕಾರದಲ್ಲಿ ಕಾಂಗ್ರೆಸ್ಸಿನ ಹುಲಿಗಳೇ ಇರುತ್ತವೆಯೇ ವಿನಃ ಬಿಜೆಪಿಯವರಲ್ಲ'
ದಡೇಸ್ಗೂರು ಕಾಂಗ್ರೆಸ್ನವರಿಗೇ ಅಧಿಕಾರ ನೀಡುತ್ತಿದ್ದಾರೆ| ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಫೆ. 15ರಂದು ಶ್ರೀರಾಮನಗರದಿಂದ ಕಾರಟಗಿ ಮಾರ್ಗವಾಗಿ ಕನಕಗಿರಿವರೆಗೆ ಪಾದಯಾತ್ರೆ| ಕಾಂಗ್ರೆಸ್‌ನಲ್ಲಿದ್ದ ಮುಖಂಡರು, ಕಾರ್ಯಕರ್ತರಿಗೆ ಆಸೆ, ಆಮಿಷ ತೋರಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ|
ಕನಕಗಿರಿ(ಫೆ.12): ಶಾಸಕ ದಡೇಸ್ಗೂರು ಕಾಂಗ್ರೆಸ್‌ನಲ್ಲಿದ್ದವರಿಗೇ ಅಧಿಕಾರ ನೀಡುತ್ತಿದ್ದಾರೆ ಹೊರತು ಬಿಜೆಪಿಯವರಿಗಲ್ಲ. ಅಧಿಕಾರದಲ್ಲಿ ಕಾಂಗ್ರೆಸ್ಸಿನ ಹುಲಿಗಳೇ ಇರುತ್ತವೆಯೇ ವಿನಃ ಬಿಜೆಪಿಯವರಲ್ಲ ಎಂದು ಡಿಸಿಸಿ ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಶಿವರಾಜ ತಂಗಡಗಿ ಕುಟುಕಿದ್ದಾರೆ.
ಪಟ್ಟಣದ ಬ್ಲಾಕ್ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಫೆ. 15ರಂದು ನಡೆಯುವ ಟ್ರ್ಯಾಕ್ಟರ್ ರಾರಯಲಿಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕನಕಗಿರಿ ಕ್ಷೇತ್ರಕ್ಕೆ ಶಾಸಕ ಬಸವರಾಜ್ ದಡೇಸುಗೂರು ಕೊಡುಗೆ ಎಂದರೆ ಕೇವಲ ಎಂಎಸ್‌ಐಎಲ್ ಲಿಕ್ಕರ್ ಶಾಪ್ ಪ್ರಾರಂಭಿಸಿದ್ದಾರೆ ಹೊರತು ಅಭಿವೃದ್ಧಿ ಮಾಡುತ್ತಿಲ್ಲ. ಇನ್ನು ನನ್ನ ಅವಧಿಯಲ್ಲಾದ ಯೋಜನೆಗಳನ್ನೇ ತಮ್ಮವು ಎಂದು ಪುಕ್ಕಟೆ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ನನ್ನ 10 ವರ್ಷದ ಅಧಿಕಾರವಧಿಯಲ್ಲಿ ನಾನು ಯಾವತ್ತೂ ಸ್ವ-ಜಾತಿಯ ಅಧಿಕಾರಿಗಳನ್ನು ತರಲಿಲ್ಲ. ಆದರೆ ಶಾಸಕ ದಡೆಸಗೂರು ಹಲವು ಕಚೇರಿಗಳಿಗೆ ತಮ್ಮ ಸಮುದಾಯಕ್ಕೆ ಸೇರಿದವರನ್ನೆ ನೇಮಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೆ ಕಾಂಗ್ರೆಸ್‌ನಲ್ಲಿದ್ದ ಮುಖಂಡರು, ಕಾರ್ಯಕರ್ತರಿಗೆ ಆಸೆ, ಆಮಿಷಗಳನ್ನು ತೋರಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಅಧಿಕಾರ ನೀಡುತ್ತಾರೆ. ಆದರೆ ಬಿಜೆಪಿಯ ಹಳೇ ಕಾರ್ಯಕರ್ತರಿಗೆ ಅಧಿಕಾರ ನೀಡದೇ ಅನ್ಯಾಯ ಮಾಡುತ್ತಿದ್ದಾರೆ. ಅನ್ಯಾಯಕ್ಕೊಳಗಾದ ಮುಖಂಡರು ಹಾಗೂ ಕಾರ್ಯಕರ್ತರು ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂದರು.
ಬಾರದ ವೇತನ: ಕುಟುಂಬ ನಿರ್ವಹಣೆಗಾಗಿ ಕಿಡ್ನಿ ಮಾರಾಟಕ್ಕಿಟ್ಟ ಕಂಡಕ್ಟರ್..!
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಫೆ. 15ರಂದು ಶ್ರೀರಾಮನಗರದಿಂದ ಕಾರಟಗಿ ಮಾರ್ಗವಾಗಿ ಕನಕಗಿರಿವರೆಗೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಪಕ್ಷದ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕು. ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶ್ರಮಿಸಬೇಕು ಎಂದರು.
ಮುಖಂಡರಾದ ಸಿದ್ದಪ್ಪ ನೀರಲೂಟಿ, ಮಹ್ಮದ ರಫಿ, ಮಲ್ಲಿಕಾರ್ಜುನಗೌಡ ಪಾಟೀಲ್, ಶರಣಬಸವರೆಡ್ಡಿ ಬರಗೂರ, ಮಂಜುನಾಥ ಗಡಾದ, ಶರಣಪ್ಪ ಭತ್ತದ, ಖಾಜಸಾಬ ಗುರಿಕಾರ, ಪಾಷಾಸಾಬ ಮುಲ್ಲಾರ, ಹುಲಗಪ್ಪ ವಾಲೇಕಾರ, ಕನಕದಾಸ ಪೂಜಾರಿ, ರಾಜಸಾಬ ನಂದಾಪುರ, ಸಂಗಪ್ಪ ಸಜ್ಜನ, ವಿರುಪಾಕ್ಷ ಆಂದ್ರಾ ಇತರರು ಇದ್ದರು.
ಬಸವರಾಜ ದಡೇಸೂಗುರು ಪರೆಂಟೇಜ್ ಶಾಸಕರಾಗಿದ್ದು, ಪ್ರತಿ ಕಾಮಗಾರಿಯಲ್ಲೂ ಶಾಸಕರಿಗೆ 15 ಪರ್ಸೆಂಟ್ ಮಾಮೂಲಿ ನಿಗದಿಯಾಗಿದೆ. ಕ್ಷೇತ್ರದಲ್ಲಿ ಗುತ್ತಿಗೆ ಪಡೆದ ಎಲ್ಲಾ ಗುತ್ತಿಗೆದಾರರು ಶಾಸಕರಿಗೆ 15 ಪರ್ಸೆಂಟ್ ನೀಡುತ್ತಿರುವುದು ಸ್ವತಃ ಬಿಜೆಪಿಯವರೇ ಬಹಿರಂಗವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಈಗಾಗಲೇ 3 ಮೂರು ವರ್ಷ ಕಳೆದಿದ್ದು, ಇನ್ನೂಳಿದಿದ್ದು 2 ವರ್ಷದಲ್ಲಿ ಹೇಳಿಕೊಳ್ಳುವಂತ ಅಭಿವೃದ್ಧಿಯಾಗುವುದಿಲ್ಲ. ಒಣ ಬೇಸಾಯ ಪ್ರದೇಶದಲ್ಲಿ ನೀರಾವರಿ ಯೋಜನೆಗಳು ಜಾರಿಗೊಳಿಸಲಿಲ್ಲ. ದಡೇಸೂಗುರು ಹೆಸರಿಗೆ ಮಾತ್ರ ಶಾಸಕರಾಗಿದ್ದಾರೆ ಎಂದು ಡಿಸಿಸಿ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಹೇಳಿದ್ದಾರೆ.