'ರಾಜ್ಯದಲ್ಲಿ ಅನೈತಿಕ ಸರ್ಕಾರದ ಆಡಳಿತ'

6 ಸಚಿವರಿಗೆ ಪ್ರಶ್ನೆ ಮಾಡದಂತೆ ಕಾಂಗ್ರೆಸ್‌ ನಿರ್ಧಾರ| ರಾಜ್ಯ ಸರ್ಕಾರದ ಬಜೆಟ್‌ ಒಂದು ರೀತಿಯಲ್ಲಿ ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವಂತಿದೆ| ಈ ಬಜೆಟ್‌ ಘೋಷಣೆ ಮಾತ್ರ. ಶೇ. 90ರಷ್ಟು ಯೋಜನೆಗಳು ಜಾರಿಗೆ ಬರೋದಿಲ್ಲ, ಸರ್ಕಾರದಲ್ಲಿ ಹಣವೇ ಇಲ್ಲದಂತಾಗಿದೆ: ಪರಮೇಶ್ವರನಾಯ್ಕ| 

Congress MLA PT Parameshwar Naik Slam BJP Government grg

ಹೂವಿನಹಡಗಲಿ(ಮಾ.14):  ರಾಜ್ಯದ ಮಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಈ ರಾಸಲೀಲೆ ಸರ್ಕಾರದಲ್ಲಿ 6 ಜನ ಮಂತ್ರಿಗಳು, ರಾಸಲೀಲೆ ಪ್ರಸಂಗವನ್ನು ಪ್ರಸಾರ ಮಾಡದಂತೆ ತಡೆಯಾಜ್ಞೆ ತಂದಿರುವುದು, ಜನರಿಗೆ ಮಾಡುತ್ತಿರುವ ಮೋಸ ಎಂದು ಮಾಜಿ ಸಚಿವ ಹಾಗೂ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ ಆರೋಪಿಸಿದ್ದಾರೆ. 

ಪಟ್ಟಣದ ನೂತನ ಬಸ್‌ ನಿಲ್ದಾಣ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಸುದ್ದಿಗಾರರೊಂದಿಗೆ ಮಾತನಾಡಿದ​ರು. ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿಯ ಈ ಅನೈತಿಕ ಸರ್ಕಾರದಲ್ಲಿ ಮಂತ್ರಿಯೊಬ್ಬರು ಪೂರ್ಣ ಬೆತ್ತಲೆಯಾಗಿರುವ ದೃಶ್ಯಗಳ ರಾಸಲೀಲೆ ಪ್ರಸಾರಕ್ಕೆ ತಡೆಯಾಜ್ಞೆ ತಂದಿದ್ದಾರೆ. ಇದನ್ನು ಕಾಂಗ್ರೆಸ್‌ ತೀವ್ರವಾಗಿ ಖಂಡಿಸುತ್ತಿದ್ದು, ಈ 6 ಜನ ಮಂತ್ರಿಗಳಿಗೆ ಸದನದಲ್ಲಿ ಪ್ರಶ್ನೆ ಮಾಡದಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್‌ ತೀರ್ಮಾನ ಕೈಗೊಂಡಿದೆ ಎಂದರು.

ಸಿಎಂ ಬಿ.ಎಸ್‌. ಯಡಿಯೂರಪ್ಪ ಸರ್ಕಾರದಲ್ಲಿರುವ 6 ಜನ ಸಚಿವರಿಗೆ ಆ ಸ್ಥಾನದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಉಳಿದಿಲ್ಲ. ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು. ರಾಜ್ಯ ಸರ್ಕಾರದ ಬಜೆಟ್‌ ಒಂದು ರೀತಿಯಲ್ಲಿ ಸಾಲ ಮಾಡಿಯಾದರೂ ತುಪ್ಪ ತಿನ್ನು ಎನ್ನುವಂತಿದೆ. ಈ ಬಜೆಟ್‌ ಘೋಷಣೆ ಮಾತ್ರ. ಶೇ. 90ರಷ್ಟು ಯೋಜನೆಗಳು ಜಾರಿಗೆ ಬರೋದಿಲ್ಲ, ಸರ್ಕಾರದಲ್ಲಿ ಹಣವೇ ಇಲ್ಲದಂತಾಗಿದೆ ಎಂದರು.

ಈ ಊರಿಗೆ ಬರೋ ಮುನ್ನ ಹುಷಾರ್‌...!

ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಒಕ್ಕಲಿಗ ಹಾಗೂ ವೀರಶೈವ ಲಿಂಗಾಯತ ನಿಗಮಗಳಿಗೆ 500 ಕೋಟಿ ಘೋಷಣೆ ಮಾಡಿದ್ದಾರೆ, ಇದನ್ನು ಸ್ವಾಗತಿಸುತ್ತೇವೆ. ಆದರೆ, ಉಳಿದ ಇತರೆ 19 ನಿಗಮಗಳಿಗೆ ಸೇರಿ 500 ಕೋಟಿ ನೀಡಿರುವುದು ಆ ವರ್ಗಕ್ಕೆ ಮಾಡಿರುವ ದೊಡ್ಡ ಅನ್ಯಾಯ ಮತ್ತು ದ್ರೋಹ. ಸಿಎಂ ಮತ್ತೆ ಮರುಪರಿಶೀಲನೆ ಮಾಡಿ ಉಳಿದ 19 ನಿಗಮಗಳಿಗೆ ತಲಾ 500 ಕೋಟಿಗಳ ಅನುದಾನ ಕೊಟ್ಟು ತಮ್ಮ ಇಚ್ಛಾಶಕ್ತಿ ಮೆರೆಯಬೇಕೆಂದು ಆಗ್ರಹಿಸಿದರು.

ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ನಂತರ ಕಾಂಗ್ರೆಸ್‌ ಶಾಸಕರ ಕ್ಷೇತ್ರಗಳಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಅವರ ಪಕ್ಷದ ಶಾಸಕರಿಗೆ ನೀಡಲಿ ತಮ್ಮ ತಕರಾರು ಇಲ್ಲ. ಆದರೆ, ಉಳಿದ ಕ್ಷೇತ್ರಗಳ ಶಾಸಕರಿಗೆ ಪ್ರತಿ ವರ್ಷ ನೀಡುತ್ತಿದ್ದ  2 ಕೋಟಿ ಅನುದಾನ ನೀಡದಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿಗೆ ಅಡ್ಡಿಯಾಗಿದೆ ಎಂದು ದೂರಿದರು.

ಗಣಿ ಬಾಧಿತ ಜಿಲ್ಲೆಗಳ ಅಭಿವೃದ್ಧಿಗಾಗಿ ಸರ್ಕಾರ ನೀಡುವ 25 ಸಾವಿರ ಕೋಟಿ ಕ್ರಿಯಾ ಯೋಜನೆಯಲ್ಲಿ ಹೂವಿನಹಡಗಲಿ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಈ ಭಾಗದ ಆಸ್ಪತ್ರೆ, ಶಾಲಾ ಕಾಲೇಜು, ಕುಡಿಯುವ ನೀರು, ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡಬೇಕೆಂದು ಈಗಾಗಲೇ ಸಂಬಂಧ ಪಟ್ಟಸಚಿವರೊಂದಿಗೆ ಚರ್ಚಿಸಿದ್ದೇನೆ ಎಂದು ಹೇಳಿದರು.
 

Latest Videos
Follow Us:
Download App:
  • android
  • ios