ರಾಮು ಅರಕೇರಿ

ಸಂಡೂರು(ಮಾ.14): ನೀವು ಬೈಕ್‌ ಸವಾರರಾಗಿದ್ದು, ಸಂಡೂರು ಪಟ್ಟಣಕ್ಕೆ ಬರುತ್ತಿದ್ದೀರಿ ಎಂದರೆ ಸ್ವಲ್ಪ ಹುಷಾರು. ಇಲ್ಲಿನ ಮುಖ್ಯ ಬೀದಿಗಳಲ್ಲಿ ನಿರ್ಮಿಸಿರುವ ಅವೈ​ಜ್ಞಾನಿಕ ಸ್ಪೀಡ್‌ ಬ್ರೇಕರ್‌ಗಳು ಕಾಣದೆ ಮಲಗಿವೆ. ಅವು ಅಪಘಾತಕ್ಕೆ ಕಾರಣವಾಗಬಹುದು!

ಸಂಡೂರು ಪಟ್ಟಣದಲ್ಲಿ ಮೂರ್ನಾಲ್ಕು ವರ್ಷಗಳ ಹಿಂದೆ ರಸ್ತೆ ನಿರ್ಮಿಸಲಾಗಿದೆ. ಆದರೆ, ರಸ್ತೆ ನಿರ್ಮಿಸಿದ ನಂತರ ಕೂಡಲೇ ಸ್ಪೀಡ್‌ ಬ್ರೇಕರ್‌ಗಳನ್ನು ನಿರ್ಮಿಸಿರಲಿಲ್ಲ. ಕಳೆದ ವರ್ಷ ಸ್ಪೀಡ್‌ ಬ್ರೇಕರ್‌ಗಳನ್ನು ಹಾಕಿದ್ದಾರೆ. ಆದರೆ, ಅವುಗಳ ನಿರ್ಮಾಣ ಅವೈಜ್ಞಾನಿಕವಾಗಿದೆ. ವರ್ಷ ಕಳೆದರೂ ಈ ವರೆಗೆ ಅವುಗಳಿಗೆ ಬಣ್ಣ ಬಳಿಯುವುದಾಗಲಿ ಅಥವಾ ರೇಡಿಯಂ ಅಂಟಿಸುವ ಕೆಲಸವನ್ನಾಗಲಿ ಮಾಡಿಲ್ಲ. ಹಾಗಾಗಿ, ಇಲ್ಲಿ ನಡೆಯುವ ಬೈಕ್‌ ಅಪಘಾತಗಳ ಸಂಖ್ಯೆಗೆ ಲೆಕ್ಕವೇ ಇಲ್ಲ.
ಬಳ್ಳಾರಿ ದಾರಿಯ ಬಿಕೆಜಿ ಸ್ಕೂಲ್‌ ಬಳಿ ಒಂದು ಬೃಹತ್‌ ಗಾತ್ರದ ಸ್ಪೀಡ್‌ ಬ್ರೇಕರ್‌ ನಿರ್ಮಿಸಲಾಗಿದೆ. ಇಲ್ಲಿ ಎಲ್ಲಕ್ಕಿಂತ ಹೆಚ್ಚಾಗಿ ಅಪಘಾತಗಳಾಗುತ್ತಿವೆ. ಬೇರೆ ಬೇರೆ ಊರುಗಳಿಂದ ಆಗಮಿಸುವ ಬೈಕ್‌ ಸವಾರರಿಗೆ ಇಲ್ಲಿ ಬ್ರೇಕರ್‌ ಇರುವುದು ತಿಳಿದಿರುವುದಿಲ್ಲ. ಇದ್ದಕ್ಕಿದ್ದಂತೆ ಬೈಕ್‌ ಸ್ಕಿಡ್‌ ಆದಾಗಲೇ ಅವರ ಗಮನಕ್ಕೆ ಬರೋದು ಅಲ್ಲೊಂದು ಹಂಪ್ಸ್‌ ಇದೆ ಎಂದು. ಈ ರೀತಿ ಯಾಮಾರಿ ಕಳೆದು ಒಂದು ವರ್ಷದಲ್ಲಿ ಲೆಕ್ಕವಿಲ್ಲದಷ್ಟು ಅಪಘಾತಗಳಾಗಿವೆ. ಫೆ. 18ರಂದು ಬೈಕ್‌ ಅಪಘಾತವಾಗಿ ಒಬ್ಬ ವ್ಯಕ್ತಿ ಮೃತ​ಪ​ಟ್ಟಿದ್ದಾನೆ. ಅದಕ್ಕಿಂತ ಮುಂಚೆ ಪೊಲೀಸ್‌ ಇಲಾಖೆ ಸಿಬ್ಬಂದಿಯೂ ಸೇರಿದಂತೆ ಹಲವಾರು ಜನರು ಅಪಘಾತಕ್ಕೆ ಒಳಗಾಗಿದ್ದಾರೆ.

ಎಲ್ಲೆಲ್ಲಿ ಸ್ಪೀಡ್‌ ಬ್ರೇಕರ್‌ಗಳಿವೆ?:

ಕೂಡ್ಲಿಗಿ ರಸ್ತೆಯಲ್ಲಿರುವ ಧರ್ಮಾಪುರ, ಅದೇ ರಸ್ತೆಯಲ್ಲಿರುವ ಅರಣ್ಯ ಇಲಾಖೆ ಮುಂಭಾಗ, ಎಪಿಎಂಸಿ ಮಾರ್ಕೆಟ್‌ ಬಳಿ, ಪೊಲೀಸ್‌ ಠಾಣೆ ಮುಂಭಾಗ, ತಾಲೂಕು ಆರೋಗ್ಯ ಕೇಂದ್ರದ ಮುಂಭಾಗ, ಕೃಷ್ಣಾ ನಗರ ಗ್ರಾಮ ವ್ಯಾಪ್ತಿಯ ಬಿಕೆಜಿ ಸ್ಕೂಲ್‌ ಮುಂದೆ, ಬಳ್ಳಾರಿ ರಸ್ತೆಯ ಕೃಷ್ಣಪ್ಪ ಬಾರ್‌ ಪ್ರದೇಶ, ಹೊಸಪೇಟೆ ರಸ್ತೆಯ ತಹಸೀಲ್‌ ಕಚೇರಿ ಹತ್ತಿರ, ಶಿವಪುರ ಪ್ಯಾಲೆಸ್‌ ತಿರುವಿನಲ್ಲಿ, ಎಸ್‌ಆರ್‌ಎಸ್‌ ಶಾಲೆ ಬಳಿ ಸೇರಿದಂತೆ ಸುಮಾರು ಕಡೆ ಸ್ಪೀಡ್‌ ಬ್ರೇಕರ್‌ಗಳಿದ್ದು ಬಹುತೇಕ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದೆ. ಮೈನಿಂಗ್‌ ಲಾರಿಗಳು ಪಟ್ಟಣದೊಳಗೆ ಪ್ರವೇಶಿಸಿದರೆ ಸ್ಪೀಡ್‌ ಕಂಟ್ರೋಲ್‌ ಆಗಲಿ ಎಂದು ಎತ್ತರಕ್ಕೆ ನಿರ್ಮಿಸಲಾಗಿದೆ. ಆದರೂ, ಅಲ್ಲಿ ಬ್ರೇಕರ್‌ಗಳಿವೆ ಎಂಬ ಸುಳಿವಿಗೆ ಬಣ್ಣ ಅಥವಾ ರೇಡಿಯಂ ಹಾಕದೆ ಸಾರ್ವಜನಿಕರ ಜೀವದ ಜೊತೆ ಆಟ ಆಡಿದಂತಿದೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರ ನಿರ್ಲಕ್ಷ್ಯ ಧೋರಣೆ .

ಕಾಶ್ಮೀರದಲ್ಲಿ ಸಿಲುಕಿದ ಕನ್ನಡಿಗರಿಗೆ ಸ್ಥಳೀಯ ಪೊಲೀಸರ ಅಭಯ

ಎಸ್ಪಿಗೆ ಮಾಹಿ​ತಿ:

ಪೊಲೀಸ್‌ ಇಲಾಖೆಯವರು ತಮಗೆ ಬರುತ್ತಿರುವ ದೂರು ಹಾಗೂ ಅಪಘಾತಗಳನ್ನು ಆಧರಿಸಿ ಸುಮಾರು ಏಳು ಕಡೆ ಅವೈಜ್ಞಾನಿಕ ಬ್ರೇಕರ್‌ಗಳಿವೆ ಎಂದು ಜಿಲ್ಲಾ ಪೊಲಿಸ್‌ ವರಿಷ್ಠಾಧಿಕಾರಿಗಳಿಗೆ ಒಂದು ತಿಂಗಳ ಕೆಳಗೆ ಪತ್ರವನ್ನು ಕೂಡಾ ಬರೆದಿದ್ದಾರೆ. ಕೃಷ್ಣಾನಗರ ಬಳಿ ತುಂಬಾ ಅಪಘಾತಗಳಾಗುತ್ತಿದ್ದು, ಗ್ರಾಮಸ್ಥರು ಠಾಣೆಗೆ ಈ ಬಗ್ಗೆ ದೂರನ್ನು ಕೂಡಾ ನೀಡಿದ್ದರು. ಆ ನಂತರ ಪೊಲೀಸ್‌ ಇಲಾಖೆಯವರು ಎಚ್ಚೆತ್ತು ಈ ಬಗ್ಗೆ ಎಸ್ಪಿಗೆ ಪತ್ರ ಮುಖೇನ ಅವೈಜ್ಞಾನಿಕ ಹಂಫ್ಸ್‌ಗಳ ಕುರಿತು ವರದಿ ನೀಡಿದ್ದಾರೆ. ಇನ್ನೊಂದೆಡೆ ಸಣ್ಣಪುಟ್ಟ ಗಾಯಗಳಾದಾಗ ಸಾರ್ವಜನಿಕರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸದೆ ಗುತ್ತಿಗೆದಾರರು ಹಾಗೂ ಇಲಾಖೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಪರಸ್ಥಳದ ಸವಾರರು ಅಪಘಾತಗೊಳಗಾಗಿ ಅವರು ಯಾತನೆ ಅನುಭವಿಸುವುದು ಇಲ್ಲಿನ ನಿತ್ಯದ ಗೋಳಾಗಿದೆ. ಇನ್ನಾದರು ಸಂಬಂಧ ಪಟ್ಟವರು ಎಚ್ಚೆತ್ತು ಸಾರ್ವಜನಿಕರ ಗೋಳಾಟಕ್ಕೆ ತೆರೆ ಎಳೆಯಬೇಕಿದೆ.

ರಸ್ತೆ ಕಾಮಗಾರಿಯನ್ನು ಕೆಆರ್‌ಡಿಸಿಎಲ್‌ನವರು ನಿರ್ವಹಿಸಿದ್ದರು. ಜನವರಿಯಲ್ಲಿ ಪಿಡಬ್ಲೂಡಿಗೆ ಒಪ್ಪಿಸಿದ್ದಾರೆ. ಸಾರ್ವಜನಿಕರು, ಪೊಲೀಸ್‌ ಇಲಾಖೆಯವರೊಂದಿಗೆ ಚರ್ಚಿಸಿದ ನಂತರವೇ ಬ್ರೇಕರ್‌ಗಳನ್ನು ನಿರ್ಮಿಸಲಾಗಿದೆ. ಕೂಡಲೇ ರೇಡಿಯಂ ಹಾಕುವುದು ಮತ್ತು ಬಣ್ಣ ಹಚ್ಚುವ ಕೆಲಸ ಮಾಡಲಾಗುವುದು ಎಂದು ಸಂಡೂರಿನ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಪುಬಾಲನ್‌ ತಿಳಿಸಿದ್ದಾರೆ. 

ಪಟ್ಟಣದಲ್ಲಿ ನಿರ್ಮಿಸಿರುವ ಸ್ಪೀಡ್‌ ಬ್ರೇಕರ್‌ಗಳಿಗೆ ಬಣ್ಣ ಹಾಗೂ ರೇಡಿಯಂ ಹಾಕದಿರುವುದು ಗಮನಕ್ಕೆ ಬಂದಿದೆ. ಶೀಘ್ರವೇ ಪಿಡಬ್ಲ್ಯೂಡಿಯವರಿಗೆ ಒತ್ತಡ ತಂದು ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದು ಪುರಸಭೆ ಅಧ್ಯಕ್ಷೆ ಅನಿತಾ ವಸಂತ್‌ಕುಮಾರ್‌ ಹೇಳಿದ್ದಾರೆ.