ಬೆಳಗಾವಿ(ಜು.08): ರಾಜ್ಯ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲು ಚಿಂತನೆ ನಡೆಸಿರುವುದಾಗಿ ಮತ್ತು ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸುವುದಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಅವರು ತಿಳಿಸಿದ್ದಾರೆ.

ಸಚಿವ ರಮೇಶ ಜಾರಕಿಹೊಳಿ ಅವರು ಮಂಗಳವಾರ ಬೆಳಗ್ಗೆ ಗ್ರಾಮೀಣ ಬಿಜೆಪಿ ಕಚೇರಿ ಉದ್ಘಾಟನೆ ವೇಳೆ ಮಾತನಾಡುತ್ತ, ಗ್ರಾಮೀಣ ಕ್ಷೇತ್ರದಲ್ಲಿ ಕುಕ್ಕರ್ ಹಂಚಿದ್ದು ನನ್ ದುಡ್ಡಿನಿಂದ ಎಂದು ಹೇಳಿಕೆ ನೀಡಿದ್ದರು. ಜೊತೆಗೆ, ಬರಲಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ದುಡ್ಡು ಹಂಚುವುದಾಗಿ ಹೇಳಿಕೆ ನೀಡಿದ್ದರು. 

ಉಪಚುನಾವಣೆ ನಂತರ ಭೇಟಿ: ಒಂದಾದ್ರಾ ರಮೇಶ, ಲಖನ್‌ ಜಾರಕಿಹೊಳಿ?

ಇದಕ್ಕೆ ಪ್ರತಿಕ್ರಿಯಿಸಿರುವ ಲಕ್ಷ್ಮೀ ಹೆಬ್ಬಾಳಕರ, ನಾವು ನಮ್ಮ ಹರ್ಷ ಶುಗರ್ಸ್ ಆರಂಭೋತ್ಸವದ ಸಂದರ್ಭದಲ್ಲಿ ಪ್ರಚಾರಕ್ಕಾಗಿ ಅಧಿಕೃತವಾಗಿಯೇ ಕುಕ್ಕರ್ ವಿತರಿಸಿದ್ದೇವೆ. ಇದಕ್ಕೆ ಎಲ್ಲ ಲೆಕ್ಕ ಹಾಗೂ ದಾಖಲೆ ಇದೆ. ಜಿಎಸ್‌ಟಿಯನ್ನು ಕೂಡ ತುಂಬಿದ್ದೇವೆ. ರಮೇಶ ಜಾರಕಿಹೊಳಿ ತಮ್ಮ ದುಡ್ಡಿನಿಂದ ಕುಕ್ಕರ್ ವಿತರಿಸಿದ್ದರೆ ಅದಕ್ಕೆ ಸೂಕ್ತ ದಾಖಲೆ ಮತ್ತು ಲೆಕ್ಕ ಕೊಡಲಿ. ಈ ವಿಷಯ ನ್ಯಾಯಾಲಯದಲ್ಲಿದೆ. ಆ ಕುರಿತು ಮಾತನಾಡುವುದು ನ್ಯಾಯಾಂಗ ನಿಂದನೆಯಾಗಲಿದೆ. ನಾನು ಈಗಾಗಲೆ ಈ ಬಗ್ಗೆ ನಮ್ಮ ವಕೀಲರೊಂದಿಗೆ ಮಾತನಾಡಿದ್ದೇನೆ. ರಮೇಶ ಜಾರಕಿಹೊಳಿ ಹೇಳಿಕೆಯ ವೀಡಿಯೋ ಪೂರ್ಣ ಪರಿಶೀಲಿಸಿ, 2-3 ದಿನದಲ್ಲಿ ಬೆಂಗಳೂರಿಗೆ ತೆರಳಿ ಕಾನೂನು ಕ್ರಮದ ಕುರಿತು ವಕೀಲರೊಂದಿಗೆ ಚರ್ಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಆದಾಯ ತೆರಿಗೆ ಇಲಾಖೆಗೆ ಲೆಕ್ಕ ನೀಡಲಿ:

ನಾವು ಹರ್ಷ ಶುಗರ್ಸ್‌ನಿಂದ ಕುಕ್ಕರ್ ವಿತರಿಸಿರುವ ಕುರಿತು ಆದಾಯ ತೆರಿಗೆ ಇಲಾಖೆಗೆ ಲೆಕ್ಕ ನೀಡಿದ್ದೇವೆ. ಇಲಾಖೆ ಅದನ್ನು ಒಪ್ಪಿದೆ. ತಮ್ಮ ದುಡ್ಡು ಎನ್ನುತ್ತಿರುವ ರಮೇಶ ಜಾರಕಿಹೊಳಿ ಈ ಬಗ್ಗೆ ಲೆಕ್ಕ ಕೊಡಲಿ. ಇಲ್ಲವಾದಲ್ಲಿ ನಾನು ಆದಾಯ ತೆರಿಗೆ ಇಲಾಖೆ ಮತ್ತು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಪ್ರಶ್ನಿಸುತ್ತೇನೆ ಎಂದಿದ್ದಾರೆ.

ಬರಲಿರುವ ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಚುನಾವಣೆಯಲ್ಲಿ ತಾವು ದುಡ್ಡು ಹಂಚುವುದಾಗಿ ರಮೇಶ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ. ಈ ಕುರಿತು ವೀಡಿಯೋ ಸಾಕ್ಷಿಯೊಂದಿಗೆ ಚುನಾವಣೆ ಆಯೋಗಕ್ಕೆ ಪತ್ರ ಬರೆಯುತ್ತೇನೆ. ಈ ಕುರಿತು ಸೂಕ್ತ ಕ್ರಮಕ್ಕೆ ಒತ್ತಾಯಿಸುತ್ತೇನೆ ಎಂದೂ ಹೆಬ್ಬಾಳಕರ ತಿಳಿಸಿದ್ದಾರೆ.

ರಮೇಶ ಜಾರಕಿಹೊಳಿ ತಾವು ಕ್ಯಾಬಿನೆಟ್ ಸಚಿವರಾದ ತಕ್ಷಣ ಏನು ಬೇಕಾದರೂ ಮಾತನಾಡಬಹುದು ಎಂದು ತಿಳಿದಂತಿದೆ. ಗೋಕಾಕದ ಜನರು ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿ ಎನ್ನುವ ಕಾರಣಕ್ಕೆ ಇವರಿಗೆ ಮತ ನೀಡಿದ್ದಾರೆಯೇ ವಿನಃ ಇವರ ಮುಖ ನೋಡಿ ಮತ ಹಾಕಿಲ್ಲ. ಇನ್ನಾದರೂ ತಮ್ಮ ಮದ, ಗರ್ವ, ಜಂಬ, ಅಹಂಕಾರ ಬಿಟ್ಟು ಜವಾಬ್ದಾರಿಯಿಂದ ನಡೆದುಕೊಳ್ಳಲಿ ಎಂದಿದ್ದಾರೆ.

ಮಾಜಿ ಶಾಸಕ ಸಂಜಯ ಪಾಟೀಲ ಅವರಿಗೆ ಅನ್ಯಾಯವಾಗಿದೆ ಎಂದು ಹೋದಲ್ಲಿ ಬಂದಲ್ಲಿ ರಮೇಶ ಜಾರಕಿಹೊಳಿ ಹೇಳಿಕೆ ನೀಡುತ್ತಿದ್ದಾರೆ. ಹಾಗಾದಲ್ಲಿ ಸುಮ್ಮನೆ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುವ ಬದಲು ಸಂಜಯ ಪಾಟೀಲ ಅವರಿಗೆ ಗ್ರಾಮೀಣ ಕ್ಷೇತ್ರದ ಟಿಕೆಟ್ ಕೊಡಿಸಿ, ಗೆಲ್ಲಿಸಿ ತರುತ್ತೇನೆ ಎಂದು ಘೋಷಿಸಲಿ. ಬಿಜೆಪಿ ಕಾರ್ಯಕರ್ತರು ಇವರ ಮಾತಿಗೆ, ದ್ವಂದ್ವ ನಿಲುವಿಗೆ, ಒಡೆದು ಆಳುವ ನೀತಿಗೆ ಮರುಳಾಗದಿರಲಿ ಎಂದರು.

ನಾನು ಕಿತ್ತೂರು ರಾಣಿ ಚನ್ನಮ್ಮನ ವಂಶಸ್ಥೆ. ನನ್ನದು ಹೋರಾಟದ ರಾಜಕಾರಣ. ಟೊಳ್ಳು ಬೆದರಿಕೆಗಳಿಗೆಲ್ಲ ನಾನು ಹೆದರುವವಳಲ್ಲ. ನನ್ನ ಬೆಳಗಾವಿ ತಾಲೂಕಿನ ಸ್ವಾಭಿಮಾನಿ ಜನರಿಗೋಸ್ಕರ ನನ್ನ ಹೋರಾಟ ಮುಂದುವರಿಸುತ್ತೇನೆ. ಸಮಯ ಮತ್ತು ನನ್ನ ಆತ್ಮಸ್ಥೈರ್ಯ ಇವರಿಗೆ ತಕ್ಕ ಉತ್ತರ ನೀಡುತ್ತದೆ. ಸ್ವಾಭಿಮಾನಿ ಬೆಳಗಾವಿ ತಾಲೂಕನ್ನು ಇವರ ಕಪಿಮುಷ್ಠಿಯಲ್ಲಿ ಸಿಲುಕಲು ನಾನು ಅವಕಾಶ ಕೊಡುವುದಿಲ್ಲ ಎಂದೂ ತಿರುಗೇಟು ನೀಡಿದ್ದಾರೆ.

ಹೋದಲ್ಲೆಲ್ಲ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ದುಡ್ಡು ಹಂಚುತ್ತೇನೆ, ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ದುಡ್ಡು ಹಂಚುತ್ತೇನೆ ಎನ್ನುತ್ತಿರುವ ರಮೇಶ ಜಾರಕಿಹೊಳಿ ಅವರ ಸಕ್ಕರೆ ಕಾರ್ಖಾನೆಯಿಂದ ಕಬ್ಬಿನ ಬಿಲ್ ಸಿಗದೆ ಬೆಳಗಾವಿ, ಕಿತ್ತೂರು, ಬೈಲಹೊಂಗಲ ತಾಲೂಕಿನ ರೈತರು ಸಾಯುತ್ತಿದ್ದಾರೆ. ಸಂತಿ ಬಸ್ತವಾಡ, ವಿರಕಿನಕೊಪ್ಪ ಸೇರಿದಂತೆ ಅನೇಕ ಕಡೆ ರೈತರು ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ತಲಾ 5 ಲಕ್ಷ ಕೊಡಲಿ. ಮೊದಲು ಬಡ ರೈತರ ಬಾಕಿ ಹಣ ನೀಡಿ ನಂತರ ಚುನಾವಣೆಯಲ್ಲಿ ಹಣ ಹಂಚುವ ಮಾತನಾಡಲಿ. ಜನರು ದಡ್ಡರಲ್ಲ, ಇವರ ಎಲ್ಲ ಹೇಳಿಕೆ, ವರ್ತನೆಗಳನ್ನು ಗಮನಿಸುತ್ತಿದ್ದಾರೆ ಎಂದು ಹೆಬ್ಬಾಳಕರ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.