*  ಸಂಜಯ ಪಾಟೀಲರ ಅವ​ಹೇ​ಳ​ನ​ಕಾರಿ ಟೀಕೆಗೆ ಶಾಸಕಿ ಹೆಬ್ಬಾಳಕರ್‌ ಪ್ರತಿಕ್ರಿಯೆ*  ಸಂಜಯ ಪಾಟೀಲ ಸ್ಟಂಟ್‌ ಮಾಡಿದ್ದಾರೆ. ಜನರ ದಿಕ್ಕು ತಪ್ಪಿಸಬೇಕಲ್ವಾ? *  2023ರ ಚುನಾವಣೆಗೆ ಕಾತುರದಿಂದ ನಾನು ಕಾಯುತ್ತಿದ್ದೇನೆ 

ಬೆಳಗಾವಿ(ಅ.02): ನನ್ನ ವಿರುದ್ಧ ಮಾಜಿ ಶಾಸಕ ಸಂಜಯ ಪಾಟೀಲ ಅವಹೇಳನಕಾರಿ ಹೇಳಿಕೆ ನೀಡಿರುವ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ನಾನು ಅವರನ್ನು ಏನೂ ಕೇಳಲು ಬಯಸುವುದಿಲ್ಲ. ನಾನು ಅವರ ಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್‌, ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕೇಳುತ್ತೇನೆ. ಇದು ನಿಮ್ಮ ಪಕ್ಷದ ಶಿಸ್ತು ಸಂಸ್ಕೃತಿಯೇ ಎಂದು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್‌(Lakshmi Hebbalkar) ಪ್ರಶ್ನಿಸಿದ್ದಾರೆ. 

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜಯ ಪಾಟೀಲರ(Sanjay Patil) ಹೇಳಿಕೆ ವೈಯಕ್ತಿಕವಾಗಿದೆಯೇ? ಪಕ್ಷದ ಹೇಳಿಕೆಯಾಗಿದೆಯೇ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಈಗಾಗಲೇ ಕ್ಷೇತ್ರದಲ್ಲಿ ಪ್ರತಿಯೊಂದು ಊರಿನಲ್ಲಿ ಜನರು ಪ್ರತಿಕ್ರಿಯೆ ನೀಡಿದ್ದಾರೆ. ಸಂಜಯ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು,.

ನೀವು ಮಾತ​ನಾ​ಡಿದ್ದು ನನ​ಗ​ಲ್ಲ:

ಹೆಣ್ಣು​ಮ​ಕ್ಕಳ ಬಗ್ಗೆ ಮಾತನಾಡಿದವರ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಇತಿಹಾಸದ ಪುಟ ತಿರುವಿ ನೋಡಬೇಕು. ನಾನು ಮಾತನಾಡದೇ ಹೇಳುವ ಹೆಣ್ಣು ಮಗಳು. ನಿನಗೂ ಹೆಂಡಂದಿರಿದ್ದಾರೆ. ಮಗಳು ಇದ್ದಾಳೆ. ತಾಯಿ ಇದ್ದಾರೆ. ಅಕ್ಕ ತಂಗಿಯರು ಇದ್ದಾರೆ. ನೀನು ಏನು ಮಾತನಾಡಿದೆಯಲ್ಲ ನನಗೆ ಮಾತನಾಡಿಲ್ಲ. ನೀನು ಯಾರಿಗೆ ಮಾತನಾಡಿದ್ದೀಯಾ ಎನ್ನುವುದನ್ನು ವಿಮರ್ಶೆ ಮಾಡಿಕೊಳ್ಳಲಿ ಎಂದು ಸಂಜಯ ಪಾಟೀಲಗೆ ತಿರುಗೇಟು ನೀಡಿದರು.

'ಚುಕ್ಕಿ, ಚಂದ್ರಮ ತೋರಿಸಿ ಹೆಬ್ಬಾ​ಳ​ಕ​ರ್‌ ರಾಜಕೀಯ'

2018ಕ್ಕಿಂತಲೂ 2023ರ ಚುನಾವಣೆಗೆ(Election) ಕಾತುರದಿಂದ ನಾನು ಕಾಯುತ್ತಿದ್ದೇನೆ. ನನ್ನ ಕ್ಷೇತ್ರದ ಮತದಾರರು, ನಮ್ಮ ಮುಖಂಡರು ಅವರಿಗೆ ಉತ್ತರ ಕೊಡುತ್ತಾರೆ. ನನ್ನ ವಿರುದ್ಧ ಸಂಜಯ ಪಾಟೀಲ ಸ್ಪರ್ಧೆ ವಿಚಾರವನ್ನು ಅವರ ಪಕ್ಷ ನಿರ್ಧರಿಸುತ್ತದೆ. ಪಾಟೀಲ ಸ್ಪರ್ಧಿಸಿದರೆ ಸಂತೋಷ ಆಗುತ್ತದೆ. ಅವರ ಹೇಳಿಕೆಯನ್ನು ನಾನು ಗಮನಿಸಿದ್ದೇನೆ. ನನ್ನ ವಿರುದ್ಧ ಬ್ಯಾನರ್‌ ಅನ್ನು ಮರಾಠಿಗರು ಹಚ್ಚಿದ್ದಾರೆ ಎಂದು ಹೇಳಿದ್ದಾರೆ. ಹಾಗಾದರೆ ಯಾರು ಹಚ್ಚಿದ್ದಾರೆ ಎನ್ನುವುದು ಸಂಜಯ್‌ ಪಾಟೀಲ ಅವರಿಗೆ ಗೊತ್ತಿರಬೇಕಲ್ವಾ ಎಂದು ಪ್ರಶ್ನಿಸಿದ ಅವರು, ಬ್ಯಾನರ್‌ ಅನ್ನು ರಾತ್ರಿ ವೇಳೆ ಕಟ್ಟಿದ್ದಾರೆ. ಉಪ ಚುನಾವಣೆ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಹೋಗಲಾಗುತ್ತಿಲ್ಲ. ಈಗಾಗಲೇ ಸ್ಮಾರ್ಟ್‌ ಕ್ಲಾಸ್‌, ಶಾಲಾ ಕೊಠಡಿ ಉದ್ಘಾಟನೆ ಮಾಡಬೇಕಿದೆ. ಇಂತಹ ನೂರಾರು ಸಂಜಯ ಪಾಟೀಲ ಬಂದರೂ ನಾನು ಎದುರಿಸುತ್ತೇನೆ ಎಂದರು.

ಸಂಜಯ ಪಾಟೀಲ ಸ್ಟಂಟ್‌ ಮಾಡಿದ್ದಾರೆ. ಜನರ ದಿಕ್ಕು ತಪ್ಪಿಸಬೇಕಲ್ವಾ? ನನಗಿಂತ ಮೊದಲೇ 10 ವರ್ಷ ಅವರೇ ಶಾಸಕರಾಗಿದ್ದರು. ಅವರಿಗಿಂತ ಮುಂಚೆ ಮನೋಹರ ಕಡೋಲ್ಕರ್‌ ಶಾಸಕರಾಗಿದ್ದರು. ಅಭಯ ಪಾಟೀಲ ಶಾಸಕರಾಗಿದ್ದರು. ಅಭಯ ಅವಧಿಯಲ್ಲಿ ಕೆಲ ಅಭಿವೃದ್ದಿ ಕೆಲಸ ಮಾಡಿದ್ದರು. ಆದರೆ, ಅಭಯ ಪಾಟೀಲ ತಮ್ಮ ನಾನು ಎಂದು ಸಂಜಯ ಪಾಟೀಲ ಗೆದ್ದಿದ್ದರು. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಟೀಕಿಸಿದರು.

ನಾನು ಶಾಸಕಿ ಆಗುವ ಮುನ್ನ ಇನ್‌ಕಮ್‌ ಟ್ಯಾಕ್ಸ್‌(Income Tax) ಇಡಿಗೆ ಬರೆದು ನನ್ನ ಮನೆ ಮೇಲೆ ರೇಡ್‌ ಮಾಡಿಸಿದರು. ನಾನು ಶಾಸಕಿಯಾದೆ. ಈಗ ನನ್ನ ಬಗ್ಗೆ ಈ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದಾರೆ. ಮುಂದಿನ ಬಾರಿ ಜನತೆಯ ಆರ್ಶೀವಾದದಿಂದ ಮಂತ್ರಿಯೂ ಆಗುತ್ತೇನೆ. ಬಿಪಿಎಂಪಿಯಲ್ಲಿ, ರಾಯಬಾಗ, ಸವದತ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ಅವರು ಹೇಳಿದರು.